
ಗದಗ: ‘ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ‘ಕಲ್ಟ್’ ಸಿನಿಮಾ ಜನವರಿ 23ರಂದು ತೆರೆ ಕಾಣಲಿದ್ದು, ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ’ ಎಂದು ನಾಯಕ ನಟ ಝೈದ್ ಖಾನ್ ಹೇಳಿದರು.
‘ಕಲ್ಟ್’ ಸಿನಿಮಾದ ಶೇ 40ರಷ್ಟು ಚಿತ್ರೀಕರಣ ಹಂಪಿ ಮತ್ತು ವಿಜಯನಗರದಲ್ಲೇ ನಡೆದಿದೆ. ಚಿತ್ರದ ಕ್ಲೈಮ್ಯಾಕ್ಸ್ ಅದ್ಧೂರಿಯಾಗಿ ಮೂಡಿಬಂದಿದ್ದು, ಅದನ್ನೂ ಹಂಪಿಯಲ್ಲೇ ಚಿತ್ರೀಕರಿಸಲಾಗಿದೆ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೆ.ವಿ.ಎನ್. ಪ್ರೊಡಕ್ಷನ್ಸ್, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ‘ಕಲ್ಟ್’ ಸಿನಿಮಾದ ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದ್ದು. ಜೆ.ಎಸ್.ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ’ ಎಂದು ತಿಳಿಸಿದರು.
‘ ‘ಕಲ್ಟ್’ ಸಿನಿಮಾ ತೆಲುಗು, ತಮಿಳು ಚಿತ್ರಗಳಂತೆ ಅದ್ಧೂರಿಯಾಗಿ ಮೂಡಿಬಂದಿದೆ. ಈಗಿನ ಕಾಲದಲ್ಲಿ ಯುವಕರು ಯುವತಿಯರಿಂದ ಮೋಸ ಹೋಗುವ ಬಗ್ಗೆ ಹಾಸ್ಯದಾಟಿಯಲ್ಲಿ ನಿರೂಪಿಸಲಾಗಿದೆ. ‘ಅರ್ಜುನ್ ರೆಡ್ಡಿ, ‘ಆ್ಯನಿಮಲ್’ ಸಿನಿಮಾ ಮಾದರಿಯಲ್ಲಿ ಕನ್ನಡದ ನೆಲಕ್ಕೆ ತಕ್ಕಂತೆ ಸಿನಿಮಾ ಮಾಡಲಾಗಿದೆ. ವಿವಿಧ ಜಿಲ್ಲೆಯಿಂದ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಜನರು ಇಷ್ಟಪಡುವ ನಿರೀಕ್ಷೆ ಇದೆ ಎಂದರು.
ನಜೀರ್ ಅಹ್ಮದ್ ಡಂಬಳ, ಕೃಷ್ಣ, ಸಾಧಿಕ್ ನರಗುಂದ, ಅಂದಾನಯ್ಯ ಕುರ್ತಕೋಟಿಮಠ ಇದ್ದರು.
ಅಪ್ಪ ಜಮೀರ್ ಅಹಮದ್‌ಖಾನ್ ರಾಜಕೀಯದಲ್ಲಿ ಇದ್ದಾರೆ. ಆದರೆ ನನಗೆ ರಾಜಕೀಯ ಇಷ್ಟವಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಇದ್ದುಕೊಂಡೇ ಸಮಾಜಸೇವೆ ಮಾಡುವೆ–ಝೈದ್ ಖಾನ್ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.