ADVERTISEMENT

ಅಂಬಾನಿಯ 5ಜಿಗಾಗಿ ಚಿತ್ರಮಂದಿರ ಬಂದ್‌: ಇದು ದೊಡ್ಡ ಹಗರಣ ಎಂದ ದರ್ಶನ್‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 15:43 IST
Last Updated 10 ಜನವರಿ 2021, 15:43 IST
ದರ್ಶನ್
ದರ್ಶನ್   

ಅಂಬಾನಿ ಅವರು 5ಜಿ ಆರಂಭಿಸಿದ್ದಾರೆ. ಅದಕ್ಕಾಗಿಯೇ ದೊಡ್ಡವರನ್ನು ಕೂರಿಸಿ ಚಿತ್ರಮಂದಿರ ತೆರೆಯದಂತೆ ಹೇಳುತ್ತಿದ್ದಾರೆ ಎಂದು ನಟ ದರ್ಶನ್‌ ಆಕ್ರೋಶ ಹೊರಹಾಕಿದ್ದಾರೆ.

ಫೇಸ್‌ಬುಕ್‌ ಲೈವ್‌ನಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರುವ ಅವರು, ‘ಈಗಾಗಲೇ ಮಾರುಕಟ್ಟೆ, ಕಲ್ಯಾಣ ಮಂಟಪ, ಶಾಲೆ ಹಾಗೂ ಕಾಲೇಜುಗಳು ಆರಂಭವಾಗಿದೆ. ಆದರೆ ಚಿತ್ರಮಂದಿರಗಳನ್ನು ತೆರೆಯುತ್ತಿಲ್ಲ. ಇದಕ್ಕೆ 5ಜಿ ಕಾರಣ. ಬಹುಶಃ ಇದು ಬಹುದೊಡ್ಡ ಹಗರಣ ಎನಿಸುತ್ತಿದೆ. ನಮಗೆ ನೀವು ಸಿನಿಮಾ ಮಂದಿರದಲ್ಲಿ ಬಂದು ನೋಡಿದರೆ ಮಾತ್ರ ತೃಪ್ತಿ. ನೀವು ಮೊಬೈಲ್‌ನಲ್ಲೋ, ಟಿವಿಯಲ್ಲೋ ಸಿನಿಮಾ ನೋಡಿದರೆ ಆ ಮಜಾ ಬರುವುದಿಲ್ಲ. ನಾವು ಎಲ್ಲವನ್ನೂ ಪಣಕ್ಕಿಟ್ಟು, ಕಷ್ಟಪಟ್ಟು ಸಿನಿಮಾ ಮಾಡುತ್ತೇವೆ. ಅದನ್ನು ನೀವು ಬೆಳ್ಳಿತೆರೆ ಮೇಲೆ ನೋಡಿದರೆ ನಮಗೆ ತೃಪ್ತಿ ಮತ್ತು ಖುಷಿ’ ಎಂದು ದರ್ಶನ್ ಹೇಳಿದ್ದಾರೆ.

5ಜಿಗೂ ಚಿತ್ರ ಮಂದಿರ ತೆರೆಯದಿರುವುದಕ್ಕೂ ಏನು ಸಂಬಂಧ ಎಂಬ ಬಗ್ಗೆ ಸ್ಪಷ್ಟಪಡಿಸಿರುವ ದರ್ಶನ್‌, ‘5ಜಿಗೆ ಬೇಡಿಕೆ, ಮಾರುಕಟ್ಟೆ ಸೃಷ್ಟಿ ಆಗಬೇಕಾದರೆ ಸಿನಿಮಾಗಳು ಮೊಬೈಲ್‌, ಇಂಟರ್‌ನೆಟ್‌ ವೇದಿಕೆಗಳಲ್ಲಿ ಸಿಗಬೇಕು. ಮೊಬೈಲ್‌ನಲ್ಲಿ ಸಿನಿಮಾ ನೋಡಿದರೆ ಅವರಿಗೆ ಲಾಭವಾಗುತ್ತದೆ. ಅದಕ್ಕಾಗಿ ಅವರು ಈ ರೀತಿ ಮಾಡಿದ್ದಾರೆ ಅನಿಸುತ್ತದೆ. ನಾವು ಯಾವುದೇ ಕಾರಣಕ್ಕೂ ಒಟಿಟಿ ವೇದಿಕೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ. ಶೇ 25ರಷ್ಟು ಪ್ರೇಕ್ಷಕರ ಮಿತಿ ಹೇರಿದರೂ ಸರಿ. ನಾವು ಚಿತ್ರಮಂದಿರದಲ್ಲೇ ಹೊಸ ಸಿನಿಮಾ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸದಂತೆ ಮನವಿ ಮಾಡಿರುವ ದರ್ಶನ್‌, ‘ಮೊದಲು ನಿಮ್ಮ ಮನೆಗಳನ್ನು ನೋಡಿಕೊಳ್ಳಿ. ಒಂದು ವರ್ಷದಿಂದ ಎಲ್ಲರೂ ಕಂಗೆಟ್ಟಿದ್ದೇವೆ. ನಿಮ್ಮ ಮನೆಗಳಲ್ಲಿ ಊಟಕ್ಕೆ ಬೇಕಾದಷ್ಟು ಸಂಪನ್ಮೂಲ ಇದೆಯೇ ನೋಡಿಕೊಳ್ಳಿ. ನೀವು ಖುಷಿಯಾಗಿದ್ದರೆ ಮಾತ್ರ ಇನ್ನೊಬ್ಬರಿಗೆ ಹಂಚಬಹುದು. ಆದ್ದರಿಂದ ಈ ಬಾರಿ ಅಂಥ ಯಾವುದೇ ಆಚರಣೆಗಳು ಬೇಡ. ಜ. 15ರಂದು (ಹುಟ್ಟುಹಬ್ಬದ ದಿನ) ನಾನು ಊರಲ್ಲಿರುವುದೇ ಇಲ್ಲ. ಆದ್ದರಿಂದ ಅಭಿಮಾನಿಗಳು ಮನೆಯತ್ತ ಬರಬಾರದು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.