ADVERTISEMENT

ಉತ್ತರಾಖಂಡ ಕಾಡಿನಲ್ಲಿ ಹಕ್ಕಿಗಳಿಗೆ ಕಾದು ಕುಳಿತ ದರ್ಶನ್‌

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 10:38 IST
Last Updated 27 ಜನವರಿ 2020, 10:38 IST
ಸತ್ತಾಲ್‌ನಲ್ಲಿ ಪಕ್ಷಿಗಳ ಫೋಟೊ ತೆಗೆಯಲು ಕಾದು ಕುಳಿತಿರುವ ನಟ ದರ್ಶನ್
ಸತ್ತಾಲ್‌ನಲ್ಲಿ ಪಕ್ಷಿಗಳ ಫೋಟೊ ತೆಗೆಯಲು ಕಾದು ಕುಳಿತಿರುವ ನಟ ದರ್ಶನ್   

ನಟ ದರ್ಶನ್‌ ಪರಿಸರ ಪ್ರೇಮಿ. ಬಿಡುವು ಸಿಕ್ಕಿದಾಗಲೆಲ್ಲಾ ಕಾಡು ಸುತ್ತುವುದು ಅವರ ಹವ್ಯಾಸ. ಕಾನನದ ಬಗ್ಗೆ ಅವರಿಗೆ ಇದ್ದ ಅಪಾರ ಕಾಳಜಿಯಿಂದಲೇ ರಾಜ್ಯ ಸರ್ಕಾರ ಈ ಹಿಂದೆ ಅವರನ್ನು ಕರ್ನಾಟಕದ ಅರಣ್ಯದ ರಾಯಭಾರಿಯಾಗಿ ನೇಮಿಸಿತ್ತು. ಮೈಸೂರಿನ ಮೃಗಾಲಯದಲ್ಲಿ ಹುಲಿ ಸೇರಿದಂತೆ ಹಲವು ಪ್ರಾಣಿಗಳನ್ನು ದತ್ತು ಪಡೆದು ಅವರು ಪ್ರಾಣಿ ಪ್ರೀತಿ ಮರೆದಿದ್ದಾರೆ.

ದಚ್ಚುಗೆ ವನ್ಯಜೀವಿ ಛಾಯಾಗ್ರಹಣವೆಂದರೆ ಅಚ್ಚುಮೆಚ್ಚು. ಸಿನಿಮಾಗಳ ಶೂಟಿಂಗ್‌ ಇಲ್ಲದಿದ್ದರೆ ಕ್ಯಾಮೆರಾ ಮತ್ತು ಲೆನ್ಸ್‌ಗಳನ್ನು ಹೆಗಲಿಗೇರಿಸಿಕೊಂಡು ಕಾಡಿನಲ್ಲಿ ಅಲೆಯುತ್ತಾರೆ. ವನ್ಯಜೀವಿಗಳು ಮತ್ತು ಪಕ್ಷಿಗಳ ಫೋಟೊ ತೆಗೆದು ಪ್ರದರ್ಶನ ಕೂಡ ನಡೆಸುತ್ತಾರೆ. ಅದರಿಂದ ಬಂದ ಹಣವನ್ನು ಕಾಡಿನ ಸಂರಕ್ಷಣೆಗಾಗಿ ಅರಣ್ಯ ಇಲಾಖೆಗೆ ನೀಡುತ್ತಾರೆ.

ಕಳೆದ ವರ್ಷ ದರ್ಶನ್‌ ಕೀನ್ಯಾದ ಸೆರೆಂಗೆಟ್ಟಿ ಕಾಡಿಗೆ ಹೋಗಿದ್ದರು. ಬೃಹತ್‌ ವಿಸ್ತಾರ ಹೊಂದಿರುವ ಆ ಕಾಡಿನಲ್ಲಿ ವನ್ಯಜೀವಿಗಳ ಫೋಟೊ ತೆಗೆದಿದ್ದರು. ಅಲ್ಲಿನ ಬುಡಕಟ್ಟು ಜನರೊಟ್ಟಿಗೆ ಬೆರೆತು ಅವರ ಸಂಸ್ಕೃತಿ ಅರಿಯುವ ಪ್ರಯತ್ನ ಮಾಡಿದ್ದರು.

ADVERTISEMENT

ಪ್ರಸ್ತುತ ತರುಣ್‌ ಸುಧೀರ್‌ ನಿರ್ದೇಶನದ ’ರಾಬರ್ಟ್‌’ ಚಿತ್ರದ ಶೂಟಿಂಗ್‌ ಕೂಡ ಪೂರ್ಣಗೊಂಡಿದೆ. ಹಾಗಾಗಿ, ಅವರು ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡು ಉತ್ತರಾಖಂಡ ರಾಜ್ಯದ ಸತ್ತಾಲ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅವರೊಟ್ಟಿಗೆ ಖ್ಯಾತ ವನ್ಯಜೀವಿ ಛಾಯಾಗ್ರಾಹಕಿ ಲೀಲಾ ಅಪ್ಪಾಜಿ ಕೂಡ ಜೊತೆಗೂಡಿದ್ದಾರೆ.

ಸತ್ತಾಲ್‌ ವನ್ಯಜೀವಿ ಛಾಯಾಗ್ರಾಹಕರ ಅಚ್ಚುಮೆಚ್ಚಿನ ತಾಣ. ಸುಂದರವಾದ ಜಲಮೂಲಗಳು ಅಲ್ಲಿವೆ. ಓಕ್ ಮತ್ತು ಪೈನ್ ಮರಗಳ ದೊಡ್ಡ ಕಾನನದಲ್ಲಿ ಸಾಕಷ್ಟು ಸರೋವರಗಳಿವೆ. ಹಾಗಾಗಿಯೇ, ಅದಕ್ಕೆಸಪ್ತ ಸರೋವರಗಳ ನಾಡು ಎಂಬ ಹೆಸರೂ ಇದೆ. ಈಗ ಚಳಿಗಾಲ. ಹಾಗಾಗಿ, ಆ ಪ್ರದೇಶಕ್ಕೆ ವಿವಿಧೆಡೆಯಿಂದ ವಲಸೆ ಹಕ್ಕಿಗಳು ಲಗ್ಗೆ ಇಡುತ್ತವೆ. ಹಾಗಾಗಿಯೇ, ಪಕ್ಷಿಗಳ ಫೋಟೊ ಸೆರೆಹಿಡಿಯಲು ದರ್ಶನ್‌ ತೆರಳಿದ್ದಾರೆ. ಅವರೊಟ್ಟಿಗೆ ಪ್ರಸಿದ್ಧ ಬರ್ಡ್‌‍ಫೋಟೊಗ್ರಾಫರ್‌ ರಾಹುಲ್‌ ಶರ್ಮ, ಸತ್ತಾಲ್‌ನ ಇನ್‌ ಕ್ರೆಡಿಬಲ್‌ ಬರ್ಡಿಂಗ್‌ ಕ್ಯಾಂಪ್‌ನ ಶುಭಂ ಕುಮಾರ್‌ ಕೂಡ ಇದ್ದಾರೆ.

ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ರಾಜವೀರ ಮದಕರಿನಾಯಕ’ ಚಿತ್ರದಲ್ಲಿ ದರ್ಶನ್‌ ನಟಿಸುತ್ತಿದ್ದಾರೆ. ಕೇರಳದಲ್ಲಿ ಈ ಚಿತ್ರಕ್ಕಾಗಿ ಅದ್ದೂರಿ ವೆಚ್ಚದ ಸೆಟ್‌ ನಿರ್ಮಾಣವಾಗುತ್ತಿದೆ. ಸತ್ತಾಲ್‌ ಪ್ರವಾಸದಿಂದ ಕರ್ನಾಟಕಕ್ಕೆ ಬಂದ ಬಳಿಕ ದರ್ಶನ್‌ ಅವರು ಈ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.