‘ಡಿಯರ್ ಕಾಮ್ರೇಡ್’ ಹಿಂದಿ ರಿಮೇಕ್‌ನಲ್ಲೂ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರೇ ಮುಂದುವರಿಯಲಿ ಎಂದು ಅಭಿಮಾನಿಗಳು ಕರಣ್ ಜೋಹರ್ ಅವರಿಗೆ ಮನವಿ ಮಾಡಿದ್ದಾರೆ.
ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿಜುಲೈ 25ಕ್ಕೆ ಬಿಡುಗಡೆಯಾಗಿದೆ.ಜುಲೈ 23ರಂದು ಕರಣ್ ಈ ಚಿತ್ರದ ರಿಮೇಕ್ ಮಾಡುವುದಾಗಿ ಘೋಷಣೆ ಮಾಡಿದ್ದರು.ಹಿಂದಿ ರಿಮೇಕ್‌ನಲ್ಲಿ ನಾಯಕ– ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಚಿತ್ರಪ್ರೇಮಿಗಳದ್ದು. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಕರಣ್ ಅವರನ್ನು ಕೆಲವರು ಪ್ರಶ್ನಿಸಿದ್ದು, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಅವರನ್ನೇ ಬಾಲಿವುಡ್‌ಗೆ ಕರೆತರುವಂತೆ ಸಲಹೆ ನೀಡಿದ್ದಾರೆ.
ಇದೇ ವೇಳೆ ‘ದಢಕ್’ ಜೋಡಿ ಇಶಾನ್ ಖಟ್ಟರ್ ಹಾಗೂ ಜಾಹ್ನವಿ ಕಪೂರ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಕರಣ್ ನಿರಾಕರಿಸಿದ್ದಾರೆ. ‘ಈ ಚಿತ್ರದಲ್ಲೂ ವಿಜಯ್ ದೇವರಕೊಂಡ ನಟಿಸಬೇಕು ಎಂಬುದು ನನ್ನ ಆಸೆ. ಆದರೆ ಅವರು ಅದನ್ನು ನಿರಾಕರಿಸಿದ್ದಾರೆ’ ಎಂದು ಹೇಳಿದ್ದಾರೆ. ‘ಮೂಲ ಚಿತ್ರದಲ್ಲಿ ಅವರ ನಟನೆ ಅದ್ಭುತ. ಆದರೆ ವಿಜಯ್‌ಗೆ ರಿಮೇಕ್ ಚಿತ್ರದಲ್ಲಿ ನಟಿಸಲು ಇಷ್ಟವಿಲ್ಲ. ಅದರ ಬಗ್ಗೆ ಅವರಿಗೆ ತುಂಬಾ ಸ್ಪಷ್ಟತೆ ಇದೆ. ಅವರ ದೃಷ್ಟಿಕೋನವನ್ನು ನಾನು ಮೆಚ್ಚುತ್ತೇನೆ, ಗೌರವಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ವಿಜಯ್ ದೇವರಕೊಂಡ ಅವರಿಗೆ ಈ ಹಿಂದಿನಿಂದಲೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವಂತೆ ಒತ್ತಾಯ ಕೇಳಿಬರುತ್ತಲೇ ಇದೆ. ಈಗ ಇದು ಮತ್ತಷ್ಟು ಹೆಚ್ಚಾಗಿದ್ದು, ಮನಸ್ಸು ಬದಲಾಯಿಸಿ ಬಾಲಿವುಡ್‌ಗೆ ಕಾಲಿಡಲಿದ್ದಾರೆಯೇ ಎಂದು ಕಾದುನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.