ADVERTISEMENT

ದೇವರು ಬೇಕಾಗಿದ್ದಾರೆ...

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:31 IST
Last Updated 22 ಆಗಸ್ಟ್ 2019, 19:31 IST
   

ಮನುಷ್ಯ ಮೂಲತಃ ಕಾಡಿನಿಂದ ನಾಡಿಗೆ ಬಂದ ಪ್ರಾಣಿ. ಆದರೆ, ಬರುವಾಗ ಮನುಷ್ಯತ್ವವನ್ನು ಮಾತ್ರ ಕಾಡಿನಲ್ಲೇ ಬಿಟ್ಟುಬಂದಿದ್ದಾನೆ. ಎಲ್ಲರಿಗೂ ದೇವರಮನೆ ಗೊತ್ತು; ಆದರೆ, ದೇವರು ಎಲ್ಲಿದ್ದಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ... ಇಂತಹ ಅರ್ಥಪೂರ್ಣ ಸಂಭಾಷಣೆಗಳಿರುವ ‘ದೇವರು ಬೇಕಾಗಿದ್ದಾರೆ’ ಸಿನಿಮಾದ ಟ್ರೇಲರ್‌ ಪ್ರೇಕ್ಷಕರ ಗಮನ ಸೆಳೆಯುವಂತಿದೆ.

ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಟ್ರೇಲರ್‌ ಅನ್ನು ನಿರ್ದೇಶಕ ಸತ್ಯಪ್ರಕಾಶ್‌ ಮತ್ತು ನಟ ಮಾಸ್ತಿ ಬಿಡುಗಡೆ ಮಾಡಿದರು.

ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಿರಿಯ ನಟ ಶಿವರಾಂ ‘ನನಗೇನು ದೇವರು ಬೇಕಾಗಿಲ್ಲ. ಆದರೆ, ಯಾರಿಗೆ ದೇವರು ಬೇಕೋ ಅವರೊಟ್ಟಿಗೆ ನಾನು ಸೇರಿಕೊಂಡಿದ್ದೇನೆ. ಕನ್ನಡದಲ್ಲಿ ದೊಡ್ಡ ದೊಡ್ಡ ನಟರೆನಿಸಿಕೊಂಡವರ ಜತೆಗೆ ನಟಿಸುವ ಯೋಗ್ಯತೆ ಕಳೆದುಕೊಂಡಿದ್ದೇನೆ’ ಎಂದು ಬೇಸರದಲ್ಲೇ ಮಾತು ಆರಂಭಿಸಿದರು.

ADVERTISEMENT

‘ಸೃಜಶೀಲತೆಗೆ ಅರ್ಥಬರುವಂತೆ ನಡೆದುಕೊಳ್ಳುವವರ ಜತೆಗೆ ಸಿನಿಮಾ ಮಾಡುತ್ತಿದ್ದೇನೆ. ಸೃಜನಶೀಲನಿರ್ದೇಶಕರಿಂದ ಸಿನಿಮಾ ರಂಗ ಮುನ್ನಡೆಯಬೇಕು. ಆ ಬಗ್ಗೆ ನನಗೆ ಕಾಳಜಿ ಇದೆ. ಹಾಗಾಗಿ ನನ್ನ ನಟನೆಗೆ ಬೆಲೆ ನಿಗದಿಪಡಿಸಿಕೊಳ್ಳದೆ, ಸೃಜನಶೀಲರ ಜತೆ ಕೆಲಸ ಮಾಡುತ್ತಿದ್ದೇನೆ. ಬಾಲ ನಟ ಅನೂಪ್‌ ಜತೆಗೆ ತುಂಬಾ ಹೆಮ್ಮೆಯಿಂದ ನಟಿಸಿದ್ದೇನೆ. ಆ ಬಾಲಕನಿಂದಲೂ ಸಾಕಷ್ಟು ಕಲಿತೆ’ ಎಂದರು.

‘ಕನ್ನಡ ಚಿತ್ರರಂಗ ಇಂದಿಗೂ ಸ್ವಾವಲಂಬಿಯಾಗಿಲ್ಲ. ಪರವಾಲಂಬಿಯಾಗಿಯೇ ಮುನ್ನಡೆಯುತ್ತಿದೆ.ಸ್ವಾವಲಂಬಿಯಾಗಿಸುವಕಿಚ್ಚು, ನಿರ್ದೇಶಕರು ಮತ್ತು ನಿರ್ಮಾಪಕರಲ್ಲಿ ಬರಬೇಕು. ಆಗ ಮಾತ್ರ ಕನ್ನಡ ಚಿತ್ರರಂಗದಲ್ಲೂ ನಾವು ರಾಮೋಜಿ ಫಿಲ್ಮ್‌ ಸಿಟಿಯಂತಹ ಚಿತ್ರನಗರಿ ಕಾಣಬಹುದು’ ಎಂದರು.

ಚಿತ್ರದ ಕೆಂಜಾ ಚೇತನ್‌ ಕುಮಾರ್, ನನ್ನ ಬಾಲ್ಯದಲ್ಲಿ ನಡೆದ ಒಂದು ಘಟನೆ ಈ ಚಿತ್ರದ ಕಥೆ ಹುಟ್ಟಲು ಪ್ರೇರಣೆಯಾಯಿತು. ಚಿತ್ರಕಥೆ ಬರೆಯುವ ಮುನ್ನವೇ ಪಾತ್ರಕ್ಕೆ ಹಿರಿಯ ನಟ ಶಿವರಾಂ ಅವರ ಹೆಸರು ಮನಸಿನಲ್ಲಿ ಮೂಡಿತ್ತು. ಐದಾರು ವರ್ಷದ ಬಾಲಕನ ಪಾತ್ರಕ್ಕೆ ಬಾಲನಟನಿಗೆ ಶೋಧ ನಡೆಸುತ್ತಿದ್ದಾಗ, ಪುನೀತ್‌ ರಾಜ್‌ಕುಮಾರ್ ನಡೆಸಿಕೊಡುವ‘ಫ್ಯಾಮಿಲಿ ಫವರ್‌’ ಕಾರ್ಯಕ್ರಮದಲ್ಲಿ ಕಣ್ಣಿಗೆ ಬಿದ್ದವನು ಈ ಮಾಸ್ಟರ್‌ಅನೂಪ್‌. ಈತನ ಕಾಲ್ ಶೀಟ್‌ ಪಡೆಯಲು ಮೂರು ತಿಂಗಳು ಕಾಯಬೇಕಾಯಿತು ಎನ್ನುವ ಮಾಹಿತಿ ನೀಡಿದರು.

ಸಂಗೀತ ನಿರ್ದೇಶನಕ್ಕೆ ಮುಂಗಡ ಅರ್ಧ ಹಣ ಪಡೆದಿದ್ದಸಂಗೀತ ನಿರ್ದೇಶಕ ವಂಚಿಸಿ, ಓಡಿ ಹೋದ. ನನಗಷ್ಟೇ ಅಲ್ಲ, ಆ ವ್ಯಕ್ತಿ ಇನ್ನೂ ಆರು ನಿರ್ದೇಶಕರಿಗೆ ಇದೇ ರೀತಿ ವಂಚಿಸಿದ್ದಾನೆ. ಆ ವ್ಯಕ್ತಿಯಸ್ಟುಡಿಯೋದಲ್ಲಿ ಪರಿಚಿತರಾದ ಜುವಿನ್‌ ಸಿಂಗ್‌ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನಮಾಡಿದ್ದಾರೆ.ಐದು ಹಾಡುಗಳು ಸೊಗಸಾಗಿವೆ. ಸಿನಿಮಾಕ್ಕೆ 16 ಮಂದಿ ಬಂಡವಾಳ ಹೂಡಿದ್ದು, ಕ್ರೌಡ್‌ ಫಂಡಿಂಗ್‌ನಿಂದ ಸಿನಿಮಾ ಮಾಡಿದ್ದೇವೆ ಎಂದರು.

ಈ ಸಿನಿಮಾ ಪ್ರೇಕ್ಷಕರ ಮನ ಕಲಕಲಿದೆ. ಚಿತ್ರಮಂದಿರಕ್ಕೆದೇವರ ರೂಪದಲ್ಲಿ ಬರುವ ಪ್ರೇಕ್ಷಕರು ನಮಗೆ ಬೇಕಾಗಿದ್ದಾರೆ ಎನ್ನುವ ಮಾತು ಸೇರಿಸಿದರು ಕಲಾವಿದರಾದ ಪ್ರಸಾದ್‌ ವಸಿಷ್ಠ, ಸತ್ಯನಾಥ್‌, ಶ್ರೀನಾಥ್‌, ಶಾರದಾ.

ಛಾಯಾಗ್ರಹಣ ನೀಡಿರುವ ರುದ್ರಮುನಿ ಬೆಳಗೆರೆ, ನಿರ್ದೇಶಕ ಚೇತನ್‌ಕುಮಾರ್‌ ಪಾರ್ಕಿನಲ್ಲಿ ಕುಳಿತು ಸ್ಕ್ರಿಪ್ಟ್‌ ಹೇಳುತ್ತಿದ್ದಂತೆ ಕಣ್ಣಿನಲ್ಲಿ ನೀರಿಳಿಯಿತು. ದೊಡ್ಡ ಬಜೆಟ್‌ ಮತ್ತು ದೊಡ್ಡ ಕಲಾವಿದರ ಸಿನಿಮಾ ಮಾಡಲು ಕಾಯದೆ, ತಕ್ಷಣ ಈ ಸಿನಿಮಾ ಕೈಗೆತ್ತಿಕೊಳ್ಳುವಂತೆ ನಾನೇ ಒತ್ತಾಯಿಸಿದ್ದೆ ಎನ್ನುವ ಸಂಗತಿ ತೆರೆದಿಟ್ಟರು.

ವಯಸ್ಸು ಎಂಟು; ಸಿನಿಮಾ ಆರು

ಮಾಸ್ಟರ್ ಅನೂಪ್ ಪಿ.ಡಿ. ಯಾರಿಗೆ ಗೊತ್ತಿಲ್ಲ? ಕಿರುತೆರೆ ವಾಹಿನಿಗಳನ್ನು ನೋಡುವ ವೀಕ್ಷಕರಿಗಂತೂ ಈ ಬಾಲ ಕಲಾವಿದ ಚಿರಪರಿಚಿತ.ಈಗಷ್ಟೇ ಏಳು ವರ್ಷ ತುಂಬಿ ಎಂಟರ ಹರೆಯಕ್ಕೆ ಕಾಲಿಟ್ಟಿರುವ ಈ ಪೋರ, ಈವರೆಗೆ ಆರು ಸಿನಿಮಾಗಳಲ್ಲಿ ನಟಿಸಿದ್ದಾನೆ.

ಡ್ರಾಮಾ ಜೂನಿಯರ್ ಮೂರನೇ ಆವೃತ್ತಿಯ ಗ್ರಾಂಡ್‌ ಫಿನಾಲೆಯವರೆಗೂ ಬಂದಿದ್ದ ಈ ಪೋರ, ತನ್ನ ನಟನೆ ಮತ್ತು ನೃತ್ಯದಿಂದ ಎಲ್ಲರ ಮನ ಸೆಳೆದಿದ್ದಾನೆ.ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದಾನೆ.

ಈ ಪೋರ ಮತ್ತೀಕೆರೆಯ ಸೆಂಟ್ ಲೂರ್ಡ್ಸ್ ಅಕಾಡೆಮಿ ಐಸಿಎಸ್‌ಸಿ ಶಾಲೆಯಲ್ಲಿಮೂರನೇ ತರಗತಿ ವಿದ್ಯಾರ್ಥಿ.ಪುಟಾಣಿ ಸಫಾರಿ, ರಾಮಧಾನ್ಯ,ಅವತಾರ ಪುರುಷ, ರಾಜಣ್ಣನ ಮಗ, ದೇವರು ಬೇಕಾಗಿದ್ದಾರೆ ಹಾಗೂ ಇನ್ನೊಂದು ಹೆಸರಿಡದ ಸಿನಿಮಾದಲ್ಲಿ ಅಭಿನಯಿಸಿದ್ದಾನೆ.

ತೆರೆಗೆ ಬರಲು ಸಜ್ಜಾಗಿರುವ ದೇವರು ಬೇಕಾಗಿದ್ದಾರೆ ಚಿತ್ರದಲ್ಲಿ ಅನೂಪ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾನೆ. ಹಿರಿಯ ನಟ ಶಿವರಾಂ ಮತ್ತು ಅನೂಪ್‌ ನಟನೆ ಪ್ರೇಕ್ಷಕರನ್ನು ಮೋಡಿ ಮಾಡಲಿದೆ. ಈ ಬಾಲ ಕಲಾವಿದನ ಸಹಜ ನಟನೆಗೆ ಪ್ರೇಕ್ಷಕರು ಖಂಡಿತಾ ತಲೆದೂಗಲಿದ್ದಾರೆ ಎನ್ನುವುದು ಚಿತ್ರತಂಡದ ವಿಶ್ವಾಸದ ನುಡಿ.

ಅನೂಪ್‌ ತಂದೆ ಪ್ರಭು, ಮೂಲತಃಹಾವೇರಿ ಜಿಲ್ಲೆಯ ಬಾಳಹಳ್ಳಿಯವರು.ಗಜಮುಖ ಟ್ರಾವೆಲ್ಸ್ ಮಾಲೀಕರು. ತಾಯಿ ಪುನೀತಾ, ಶಿರಸಿಯವರು. ಅಣ್ಣ ಅಮೋಘ್ ಏಳನೇ ತರಗತಿ ಓದುತ್ತಿದ್ದಾನೆ. ‘ನಾವು ಬೆಂಗಳೂರಿನಲ್ಲೇ ನೆಲೆಸಿದ್ದೇವೆ. ನಮ್ಮೂರು ಈಗ ಬೆಂಗಳೂರೇ’ ಎಂದು ಅನೂಪ್‌ ಪಟಪಟನೆ ಮಾತನಾಡುತ್ತಾನೆ.

‘ಸಿನಿಮಾ, ಟಿ.ವಿ ಕಾರ್ಯಕ್ರಮಗಳಿಗಾಗಿ ತರಗತಿಗಳಿಗೆ ಚಕ್ಕರ್‌ ಹೊಡೆಯುವಂತಾಗಿದೆ. ನಮ್ಮ ಟೀಚರ್‌, ನನಗೆ ಶೂಟಿಂಗ್‌ಗೆ ಹೋಗಲು ಅನುಮತಿ ಕೊಡ್ತಾರೆ. ತರಗತಿ ತಪ್ಪಿಸಿದಾಗ, ಸ್ನೇಹಿತರಿಂದ ನೋಟ್ಸ್‌ ಪಡೆದು ಮನೆಯಲ್ಲಿಯೇ ಓದಿಕೊಳ್ಳುತ್ತೇನೆ’ ಎನ್ನುವ ಮಾತನ್ನು ಸೇರಿಸುತ್ತಾನೆ ಅನೂಪ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.