ADVERTISEMENT

ಭಕ್ತಿಗೀತೆಗಳಲ್ಲೂ ಅದೇ ಶ್ರೀಕಂಠ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 19:30 IST
Last Updated 25 ಸೆಪ್ಟೆಂಬರ್ 2020, 19:30 IST
ಎಸ್‌. ಪಿ. ಬಾಲಸುಬ್ರಹ್ಮಣ್ಯಂ
ಎಸ್‌. ಪಿ. ಬಾಲಸುಬ್ರಹ್ಮಣ್ಯಂ   

ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಅವರು ಅದ್ಭುತ ಸಿನಿಮಾ ಹಿನ್ನೆಲೆ ಗಾಯಕರಷ್ಟೆ ಅಲ್ಲ, ಹಲವು ಭಕ್ತಿಗೀತೆಗಳಿಂದಲೂ ಮನೆ–ಮನಗಳನ್ನು ತಲುಪಿದವರು. ಪ್ರತಿ ದಿನವೂ ಅಸಂಖ್ಯ ಮನೆ–ಗುಡಿಗಳಲ್ಲಿ ಎಂ. ಎಸ್‌. ಸುಬ್ಬುಲಕ್ಷ್ಮೀ ಅವರ ವೆಂಕಟೇಶ್ವರ ಸುಪ್ರಭಾತದ ಕೇಳುವಿಕೆಯಿಂದಲೇ ಚಟುವಟಿಕೆಗಳು ಆರಂಭವಾಗುತ್ತಿವೆ. ಹೀಗೆಯೇ ಎಸ್‌. ಪಿ. ಬಿ. ಅವರು ಹಾಡಿರುವ ಲಿಂಗಾಷ್ಟಕ–ಬಿಲ್ವಾಷ್ಟಕಗಳ ಕೇಳುವಿಕೆಯಿಂದಲೇ ಸಾವಿರಾರು ಮನೆಗಳಲ್ಲೂ ದೇವಾಲಯಗಳಲ್ಲೂ ನಿತ್ಯದ ಕಲಾಪಗಳು ಆರಂಭವಾಗುತ್ತಿವೆ. ಅವರ ಸ್ಪಷ್ಟ ಉಚ್ಚಾರಣೆ ಮತ್ತು ಭಾವಪ್ರಧಾನ ಗಾಯನ – ಇವೆರಡೂ ಸೇರಿ ಭಕ್ತಿಯ ವಾತಾವರಣವನ್ನು ಸಹಜವಾಗಿಯೇ ಸೃಷ್ಟಿಸುತ್ತವೆ. ಇದರ ಜೊತೆಗೆ ಅವರು ಹಲವು ಭಕ್ತಿಗೀತೆಗಳನ್ನೂ ಹಾಡಿದ್ದಾರೆ; ಸ್ತೋತ್ರಗಳನ್ನೂ ಹಾಡಿದ್ದಾರೆ. ಗಣಪತಿಯನ್ನು ಕುರಿತ ಹಾಡು ‘ಏಳು ನೀ ಗಜರಾಜ’, ‘ಮನೋ ಬುದ್ಧ್ಯಹಂಕಾರ‘ ಎಂಬ ಸ್ತೋತ್ರ ಇಂಥವು ನೂರಾರು ನಮ್ಮ ಧಾರ್ಮಿಕ ಆಚರಣೆಗಳ ಭಾಗವೇ ಆಗಿರುವುದು ಸುಳ್ಳಲ್ಲ.

ಇಷ್ಟೇ ಅಲ್ಲ, ಅವರು ಚಲನಚಿತ್ರಗಳಲ್ಲಿ ಹಾಡಿರುವ ನೂರಾರು ಭಕ್ತಿಪ್ರಧಾನ ಗೀತೆಗಳು ಕೂಡ ಜನಪ್ರಿಯವಾಗಿವೆ. ‘ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು’, ‘ಪವಡಿಸು ಪರಮಾತ್ಮ’, ‘ಶಿವ ಶಿವ ಎಂದರೆ ಭಯವಿಲ್ಲ’, ‘ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ‘ – ಇಂಥ ಹಲವು ಗೀತೆಗಳನ್ನು ಇಲ್ಲಿ ಸ್ಮರಿಸಬಹುದು.

ಇನ್ನು ‘ಶಂಕರಾಭರಣ’ದ ಹಾಡುಗಳು ಮಾಡಿದ ಕ್ರಾಂತಿಯಂತೂ ಎಲ್ಲರಿಗೂ ತಿಳಿದಿರುವಂಥದ್ದು. ಇದಲ್ಲದೆ, ‘ಅನ್ನಮಯ್ಯ‘, ’ಶ್ರೀರಾಮದಾಸು‘ ಮುಂತಾದ ಹಲವು ಸಂಗೀತ–ಭಕ್ತಿಪ್ರಧಾನ ಚಿತ್ರಗಳಲ್ಲಿಯ ಎಸ್‌.ಪಿ.ಬಿ. ಅವರ ಗಾಯನದಲ್ಲಿರುವ ಭಕ್ತಿಯ ಭಾವೋತ್ಕರ್ಷ ಮತ್ತು ರಸಾನುಭವದ ತಾದಾತ್ಮ್ಯದ ಸವಿ ನಮ್ಮೊಂದಿಗೆ ಸದಾ ಇರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.