ADVERTISEMENT

ಹೊಸ ‘ವಿಡಿಯೊ’ದೊಂದಿಗೆ ಬಂದ ನಟ ದೀಕ್ಷಿತ್ ಶೆಟ್ಟಿ!

​ಪ್ರಜಾವಾಣಿ ವಾರ್ತೆ
Published 31 ಮೇ 2025, 1:14 IST
Last Updated 31 ಮೇ 2025, 1:14 IST
ದೀಕ್ಷಿತ್ ಶೆಟ್ಟಿ
ದೀಕ್ಷಿತ್ ಶೆಟ್ಟಿ   

ದೀಕ್ಷಿತ್ ಶೆಟ್ಟಿ ಅಭಿನಯದ ‘ಬ್ಲಿಂಕ್’ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಅದೇ ತಂಡದೊಂದಿಗೆ ದೀಕ್ಷಿತ್‌ ಮತ್ತೊಂದು ಚಿತ್ರ ಮುಗಿಸಿದ್ದಾರೆ. ಚಿತ್ರಕ್ಕೆ ‘ವಿಡಿಯೋ’ ಎಂಬ ಶೀರ್ಷಿಕೆ ಇಡಲಾಗಿದ್ದು, ಶ್ರೀನಿಧಿ ಬೆಂಗಳೂರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. 

‘ಟೀಸರ್‌ ನೋಡಿ ಸಣ್ಣ ಮಟ್ಟಿಗೆ ತಲೆಲಿ ಹುಳ ಬಿಟ್ಟಿದ್ದೇವೆ ಅಂದುಕೊಳ್ಳುತ್ತೇನೆ. ಈ ಸಿನಿಮಾ ಮಾಡಲು ಎರಡು ಕಾರಣ. ದುಡ್ಡು ಮಾಡುವ ಉದ್ದೇಶ. ಪರಿಸ್ಥಿತಿ ಹೇಗಿದೆ ಎಂದು ಗೊತ್ತಿದೆ. ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವೆ. ನನಗೆ ಅರ್ಥ ಆಗಿದ್ದು ಮೊದಲನೆ ಸಿನಿಮಾ ಚೆನ್ನಾಗಿ ಮಾಡಿದ ನಿರ್ದೇಶಕರಿಗೆ ಎರಡನೆ ಸಿನಿಮಾದಲ್ಲಿ ದೊಡ್ಡದಾಗಿ ಅವಕಾಶ ಸಿಗುತ್ತದೆ. ಆದರೆ ಕನ್ನಡದಲ್ಲಿ ಅವಕಾಶ ಕಡಿಮೆಯಾಗುತ್ತಿದೆಯೇನೋ ಅನ್ನಿಸುತ್ತದೆ. ಹಾಗಾಗಿ ಬ್ಲಿಂಕ್‌ ತಂಡದ ಜತೆ ಸಾಥ್‌ ಕೊಟ್ಟೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಇದರಿಂದ ಒಂದಷ್ಟು ಕನಸು ಕಟ್ಟಿಕೊಂಡವರಿಗೆ ದಾರಿಯಾಗುತ್ತದೆ. ಇಂಡಸ್ಟ್ರಿ ನನಗೆ ಇಷ್ಟೆಲ್ಲ ಕೊಟ್ಟಿರುವಾಗ ಅದಕ್ಕೆ ಪ್ರತಿಯಾಗಿ ನಾನು ಕೊಡಬೇಕೆಂದು ಈ ಸಿನಿಮಾ ಮಾಡಿದ್ದು. ಮುಂದೆ ಇನ್ನೊಂದು ಸಿನಿಮಾ ನಿರ್ಮಾಣ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ಎರಡನೇ ಕಾರಣ ಬ್ಲಿಂಕ್‌ ಚಿತ್ರದಲ್ಲಿ ಆದ ಕೆಲವು ಅನುಭವಗಳು ಈ ಸಿನಿಮಾ ಮಾಡುವಂತೆ ಮಾಡಿತು. ನಮಗೆ ಯಾರೂ ಕೈಹಿಡಿದು ಎತ್ತಲು ಇಲ್ಲದಾಗ ನಮ್ಮನ್ನು ನಾವು ಕೈ ಎತ್ತಿಕೊಳ್ಳಬೇಕು. ಹೊಸಬರೆಲ್ಲ ಒಟ್ಟಾಗಿ ಆ ಕೆಲಸ ಮಾಡೋಣ’ ಎಂದರು ದೀಕ್ಷಿತ್‌. 

ಭರತ, ಜೀವನ್ ಶಿವಕುಮಾರ್, ತೇಜೇಶ್‌, ಪ್ರಿಯಾ ಜೆ.ಆಚಾರ್, ನಲ್ಮೇ ನಾಚಿಯಾರ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಸನ್ನ ಕುಮಾರ್ ಸಂಗೀತ, ಅವಿನಾಶ್ ಶಾಸ್ತ್ರಿ ಛಾಯಾಚಿತ್ರಗ್ರಹಣವಿದೆ.

ADVERTISEMENT

‘ಬ್ಲಿಂಕ್‌’ ಆದಮೇಲೆ ನಿರ್ಮಾಣ ಸಂಸ್ಥೆ ಜತೆ ಸರಿ ಬರಲಿಲ್ಲ. ಅಲ್ಲಿಂದ ಹೊರಬಂದು ಏನಾದರೂ ಮಾಡಬೇಕು ಎಂದುಕೊಂಡೆವು. ಬ್ಲಿಂಕ್‌ ಜನ ಮೆಚ್ಚಿದ್ದು ಮೊದಲನೆ ಯಶಸ್ಸು ಅನಿಸತು. ಸಿನಿಮಾ, ಸಾಹಿತ್ಯ ಗೆದ್ದರೆ ನಮ್ಮ ಸಂಸ್ಕೃತಿ ಬೇರೆ ಬೇರೆ ಕಡೆ ಪಸರಿಸುತ್ತದೆ. ಕೆಜಿಎಫ್‌ನಿಂದ ಎಲ್ಲ ಕಡೆ ನಮ್ಮ ಕನ್ನಡದ ಬಗ್ಗೆ ಮಾತನಾಡುತ್ತಾರೆ. ಸಿನಿಮಾಕ್ಕೆ ದೊಡ್ಡ ಶಕ್ತಿಯಿದೆ. ದೆವ್ವದ ಕುರಿತಾದ, ಭಯ ಬೀಳಿಸುವ ಜಾನರ್‌ನ ಸಿನಿಮಾವಿದು’ ಎಂದರು ನಿರ್ದೇಶಕ ಶ್ರೀನಿಧಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.