ADVERTISEMENT

ಬದುಕಿನ ಅಚ್ಚರಿ ದಿಯಾ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 19:30 IST
Last Updated 14 ಅಕ್ಟೋಬರ್ 2019, 19:30 IST
ದಿಯಾ
ದಿಯಾ   

6–5=2 ಸಿನಿಮಾ ನಿರ್ದೇಶಕ ಕೆ.ಎಸ್‌.ಅಶೋಕ್‌ ಅವರ ಮತ್ತೊಂದು ಹೊಸ ಬಗೆಯ ಸಿನಿಮಾ ‘ದಿಯಾ’ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ನ.8ರಂದು ಈ ಚಿತ್ರ ತೆರೆಕಾಣಲಿದೆ.

ಚಿತ್ರತಂಡ ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಸರ್‌ ಬಿಡುಗಡೆ ಮಾಡಿತು. ಕಾಲೇಜಿನ ತರಗತಿಯಲ್ಲಿ ಓದುತ್ತಾ ಕುಳಿತುಕೊಳ್ಳುವ ನಾಯಕಿ ಖುಷಿಗೆ ನಾಯಕ ದೀಕ್ಷಿತ್‌ ಶೆಟ್ಟಿ ಮೇಲೆ ಪ್ರೀತಿ ಅಂಕುರಿಸುವ ದೃಶ್ಯವಿರುವ ಟೀಸರ್‌, ಇದೊಂದು ಪ್ರೇಮಕಥೆಯ ಚಿತ್ರವೆನ್ನುವುದನ್ನು ಸೂಚಿಸುತ್ತದೆ. ಹಾಗೆಯೇ ನಾಯಕಿ ಚಲಿಸುವ ರೈಲಿಗೆ ಮುಖಾಮುಖಿಯಾಗಿ ಹಳಿ ಮೇಲೆ ನಿಲ್ಲುವ ದೃಶ್ಯವೂ ಏನೋ ಸಸ್ಪೆನ್ಸ್‌ ಇರುವ ಸುಳಿವು ನೀಡುತ್ತದೆ. ಚಿತ್ರಕ್ಕೆ ‘ಲೈಫ್‌ ಫುಲ್‌ ಆಫ್‌ ಸರ್ಪೈಸ್‌’ ಅಡಿಬರಹವಿದೆ.

ಕನ್ನಡ ಚಿತ್ರರಂಗದಲ್ಲೇ ಹೊಸ ಮಾನದಂಡ ಹುಟ್ಟುಹಾಕುವಂತೆ ಈ ಚಿತ್ರ ನಿರ್ಮಿಸಬೇಕು ಮತ್ತು ಅದರಲ್ಲಿ ಪರಿಪೂರ್ಣತೆ ಸಾಧಿಸಬೇಕೆಂದು ಬಯಸಿದ್ದೇವೆ. ಇದರಿಂದಾಗಿಯೇಸಿನಿಮಾ ನಿರ್ಮಾಣ ಮೂರು ವರ್ಷಗಳ ಅವಧಿ ತೆಗೆದುಕೊಂಡಿತು. ಈ ಚಿತ್ರವನ್ನು ಯುರೋಪಿಯನ್‌ ಶೈಲಿಯ ಚಿತ್ರಗಳಂತೆ ನಿರ್ಮಿಸಲಾಗಿದೆ ಎಂದು ಮಾತು ಸೇರಿಸಿದರು ನಿರ್ದೇಶಕ ಅಶೋಕ್‌.

ADVERTISEMENT

ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರು ಮತ್ತು ತಂತ್ರಜ್ಞರಿಗೂ ಪರಿಪೂರ್ಣತೆಗಾಗಿ ಸಾಕಷ್ಟು ತೊಂದರೆ ಕೊಟ್ಟಿದ್ದೇನೆ. ಅವರೆಲ್ಲರ ಕ್ಷಮೆ ಕೋರುತ್ತೇನೆ ಎಂದು ಮಾತು ವಿಸ್ತರಿಸಿದ ಅವರು, ಚಿತ್ರದ ಡಬ್ಬಿಂಗ್‌ ಕೆಲಸವೇ 35 ದಿನಗಳ ಕಾಲ ನಡೆಯಿತು. ‘ದಿಯಾ’ ಒಂದು ಮಹಿಳಾ ಪಾತ್ರದ ಹೆಸರು. ಇದೊಂದು ರೊಮ್ಯಾಂಟಿಕ್‌ ಜಾನರ್‌ನ ಸಿನಿಮಾ. ಇದರಲ್ಲಿ ಸಂಗೀತವಿದೆ. ಆದರೆ, ಒಂದೇ ಒಂದು ಹಾಡನ್ನು ನಾವು ಬಳಸಿಲ್ಲ ಎಂದರು.

ಚಿತ್ರದ ನಾಯಕ ದೀಕ್ಷಿತ್‌ ಶೆಟ್ಟಿ, ‘ಇದು ನನ್ನ ಮೊದಲ ಸಿನಿಮಾ. ಚಿತ್ರದಲ್ಲಿ ನನ್ನದು ತುಂಬಾ ಒಳ್ಳೆಯ ಹುಡುಗನ ಪಾತ್ರ. ಈ ಸಿನಿಮಾ ಮಾಡುವಾಗ ಸಾಕಷ್ಟು ಕಲಿತಿದ್ದೇನೆ. ಒಂದು ಸಿನಿಮಾ ಮಾಡುವುದು ಸಣ್ಣ ವಿಷಯವಲ್ಲ. ಅದರಲ್ಲಿ ಎಷ್ಟೆಲ್ಲ ಕಷ್ಟವಿದೆ, ಏನೆಲ್ಲ ಕಲಿಯಲು ಸಾಧ್ಯವಿದೆ ಎನ್ನುವುದನ್ನು ಈ ಚಿತ್ರದಲ್ಲಿ ಕಲಿಯುವ ಅವಕಾಶ ಸಿಕ್ಕಿತು’ ಎಂದರು.‘ನಾವು ಪಾತ್ರಗಳಿಗೆ ಸಾಕಷ್ಟು ಪೂರ್ವ ತಯಾರಿ ನಡೆಸಿದ್ದೆವು. ಕಾಲೇಜು ಹುಡುಗಿ ತನ್ನಲ್ಲಿ ಪ್ರೀತಿ ಹುಟ್ಟಿದಾಗ ಅದನ್ನು ಹೇಗೆ ಮುಂದುವರಿಸುತ್ತಾಳೆ ಎನ್ನುವುದನ್ನು ಹೇಳುವ ಪಾತ್ರ ನನ್ನದು’ ಎಂದು ನಟಿ ಖುಷಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಟೀಸರ್‌ ಬಿಡುಗಡೆ ಮಾಡಬೇಕಿದ್ದ ನಟ ಶ್ರೀಮುರಳಿ ಕಾರ್ಯಕ್ರಮಕ್ಕೆ ಬರುವುದು ಒಂದೂವರೆ ತಾಸು ವಿಳಂಬವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಹಾಜರಾದ ಅವರು,ಚಿತ್ರತಂಡಕ್ಕೆ ಶುಭ ಹರಸಿದರು. ನಟ ತಿಲಕ್‌ ಕೂಡ ಹಾರೈಸಿದರು.ಈ ಚಿತ್ರಕ್ಕೆಫ್ಯಾಮಿಲಿ ಫಿಲ್ಮ್ ಫ್ಯಾಕ್ಟರಿ ಬ್ಯಾನರ್‌ನಡಿ ಕೃಷ್ಣ ಚೈತನ್ಯ ಬಂಡವಾಳ ಹೂಡಿದ್ದಾರೆ. ವಿಶಾಲ್ ವಿಠ್ಠಲ್ ಮತ್ತು ಸೌರಭ ವಾಘಮರೆ ಛಾಯಾಗ್ರಹಣ, ನವೀನ್ ರಾಜ್ ಸಂಗೀತ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.