ಸಿನಿಮಾಗಳನ್ನು ಡಿಜಿಟಲ್ ಪರದೆಗಳಲ್ಲಿ ಪ್ರದರ್ಶನಗೊಳ್ಳಲು ಅನುವು ಮಾಡಿಕೊಡುವ ಡಿಜಿಟಲ್ ಸಿನಿಮಾ ಮಾಸ್ಟರಿಂಗ್ ಸೌಲಭ್ಯ ಇದೀಗ ಬೆಂಗಳೂರಿನಲ್ಲಿಯೂ ಲಭ್ಯವಿದೆ. ಕ್ಯೂಬ್ ಸಿನಿಮಾ ಟೆಕ್ನಾಲಜೀಸ್‌ನ ಈ ವ್ಯವಸ್ಥೆಗೆ ನಟ ಶಿವರಾಜ್‌ಕುಮಾರ್ ಇತ್ತೀಚೆಗಷ್ಟೇ ಚಾಲನೆ ನೀಡಿದರು.
ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್‌ಗಳ ಡಿಜಿಟಲ್ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುವ ಮೊದಲು ಅದನ್ನು ನಿರ್ದಿಷ್ಟ ವ್ಯವಸ್ಥೆಗೆ ಅಪ್‌ಲೋಡ್ ಮಾಡಬೇಕು. ಆ ಬಳಿಕ ಅದರ ಡೌನ್‌ಲಿಂಕ್ ಚಿತ್ರಮಂದಿರಗಳಿಗೆ ಲಭ್ಯವಾಗಿ, ಚಿತ್ರ ಪ್ರದರ್ಶನಗೊಳ್ಳುತ್ತದೆ. ಈ ವ್ಯವಸ್ಥೆ ಇಲ್ಲಿತನಕ ಚೆನ್ನೈನಲ್ಲಿ ಮಾತ್ರವಿತ್ತು. ಹೀಗಾಗಿ ನಮ್ಮ ರಾಜ್ಯದಲ್ಲಿ ಕನ್ನಡ, ತುಳು ಯಾವುದೇ ಭಾಷೆಯ ಸಿನಿಮಾ ತೆರೆಕಂಡರೂ ಅದನ್ನು ಚೆನ್ನೈಗೆ ಹೋಗಿಯೇ ಅಪ್‌ಲೋಡ್ ಮಾಡಬೇಕಿತ್ತು. ಯುಎಫ್‌ಒ ಮತ್ತು ಕ್ಯೂಬ್ ಸಂಸ್ಥೆಗಳು ಈ ಸೇವೆ ಒದಗಿಸುತ್ತಿದ್ದು, ಪ್ರತಿ ಸಿನಿಮಾ ತಂಡವೂ ಈ ಕೆಲಸಕ್ಕಾಗಿ ಚೆನ್ನೈನಲ್ಲಿ ಎರಡು ದಿನ ವ್ಯಯಿಸಬೇಕಿತ್ತು. ಅಪ್‌ಲೋಡ್ ವೇಳೆ ಸಣ್ಣ ಲೋಪವಾದರೂ, ಅದನ್ನು ಸರಿಪಡಿಸಿಕೊಂಡು ಹೋಗಲು ಮತ್ತೆ ಬೆಂಗಳೂರಿಗೆ ಬರಬೇಕಿತ್ತು.
‘ಕ್ಯೂಬ್‌ನ ಈ ವ್ಯವಸ್ಥೆ ಬೆಂಗಳೂರಿಗೆ ಬರಬೇಕೆಂಬ ಬೇಡಿಕೆ 15 ವರ್ಷಗಳಿಂದಲೇ ಇತ್ತು. ಆದರೆ, ಸೂಕ್ತ ಬಂಡವಾಳದ ಕೊರತೆ, ಅಗತ್ಯ ತಂತ್ರಜ್ಞಾನಗಳಿರುವ ಸ್ಟುಡಿಯೋಗಳ ಕೊರತೆಯಿಂದ ವಿಳಂಬವಾಯಿತು. ಸದ್ಯ ಕರ್ನಾಟಕದಲ್ಲಿ 600 ಸ್ಕ್ರೀನ್‌ಗಳಲ್ಲಿ ಕ್ಯೂಬ್ ಮೂಲಕ ಸಿನಿಮಾ ತೆರೆ ಕಾಣುತ್ತಿದೆ’ ಎಂದಿದ್ದಾರೆ ಕ್ಯೂಬ್ ಸಿನಿಮಾದ ಸತೀಶ್ ತುಳಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.