ADVERTISEMENT

ಮಗನ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವ ಎಸ್‌. ನಾರಾಯಣ್‌

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 13:48 IST
Last Updated 27 ಡಿಸೆಂಬರ್ 2020, 13:48 IST
ಮಗ ಪವನ್ ಜೊತೆ ಎಸ್‌. ನಾರಾಯಣ್‌
ಮಗ ಪವನ್ ಜೊತೆ ಎಸ್‌. ನಾರಾಯಣ್‌   

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಎಸ್. ನಾರಾಯಣ್ ‘ನವಮಿ 9.9.1999’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾರಾಯಣ್‌ ಪುತ್ರ ಪವನ್ ಎಸ್‌. ನಾರಾಯಣ್ ನಿರ್ದೇಶನವಿದೆ. ಮಗನ ನಿರ್ದೇಶನದಲ್ಲಿ ಅಪ್ಪ ಅಭಿನಯಿಸಿರುವುದು ಈ ಚಿತ್ರದ ವಿಶೇಷ. ಚಿತ್ರದಲ್ಲಿ ನಾರಾಯಣ್ ನಾಯಕನ ತಂದೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.‌ ಫೈಟ್ ಹಾಗೂ ಹಾಡುಗಳ ಚಿತ್ರೀಕರಣ ‌ಬಾಕಿಯಿದೆ. ಬೆಂಗಳೂರು, ಶಿವಗಂಗೆ, ಸಕಲೇಶಪುರದಲ್ಲಿ 40 ದಿನಗಳ ಚಿತ್ರೀಕರಣ ನಡೆದಿದೆ.

ತಂದೆಯ ಗರಡಿಯಲ್ಲಿ ಪಳಗಿರುವ ಪವನ್ ಈಗ ಸ್ವತಂತ್ರ ನಿರ್ದೇಶಕರಾಗಿ ಈ ಸಿನಿಮಾದ ಮೂಲಕ ಅದೃಷ್ಟ ಪ‍ರೀಕ್ಷೆಗೆ ಇಳಿದಿದ್ದಾರೆ. ಈ ಚಿತ್ರದ ನಾಯಕ ನಟ ಯಶಸ್ ಅಭಿ. ಇವರು ಹಿಂದೆ ‘ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ‌ನಟಿಸಿದ್ದಾರೆ.

ADVERTISEMENT

ನಾಯಕ ನಟ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನ ಹಳ್ಳಿ ಇಬ್ಬರೂ ಸೇರಿ ಚಿತ್ರಕತೆ ರಚಿಸಿ, ಪದ್ಮಸುಂದರಿ ಕ್ರಿಯೇಷನ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಂದಿನಿ ಗೌಡ ಚಿತ್ರದ ನಾಯಕಿ.

ಎಸ್. ನಾರಾಯಣ್, ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್ ಕುಮಾರ್ ಜಿ.ಎಂ., ಅನುಶ್ರೀ, ಪವಿತ್ರ, ಕುರಿಬಾಂಡ್ ಸುನೀಲ್, ಅರುಣ ಬಾಲರಾಜ್ ಮುಂತಾದವರು ಈ‌ ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಪಿ.ಕೆ.ಎಚ್.ಎಸ್. ಛಾಯಾಗ್ರಹಣ, ಗಿರಿಧರ್ ದಿವಾನ್ ಸಂಗೀತ ನಿರ್ದೇಶನ, ನಾಗಾರ್ಜುನ್ ಶರ್ಮ ಸಾಹಿತ್ಯ, ಮಾಸ್ ಮಾದ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.ಶಶಿಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಾಹಿಸುತ್ತಿದ್ದಾರೆ.

ನವರಾತ್ರಿ ಸಂದರ್ಭದಲ್ಲಿ ನವ(ಒಂಭತ್ತು ಜನ) ನಿರ್ದೇಶಕರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದರು.ಲೋಕೇಶನ್ ಸ್ಪಾನ್ಸರ್ ಜಿ.ಎನ್.ನರಸಿಂಹಯ್ಯ ಅವರಿಗೆ ಚಿತ್ರತಂಡ ವಿಶೇಷ ಅಭಿನಂದನೆ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.