ADVERTISEMENT

ದಿಯಾ ಚಿತ್ರದ ಖುಷಿಯ ಮಾತು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 19:30 IST
Last Updated 2 ಏಪ್ರಿಲ್ 2020, 19:30 IST
ದಿಯಾ ಸಿನಿಮಾದಲ್ಲಿ ಖುಷಿ
ದಿಯಾ ಸಿನಿಮಾದಲ್ಲಿ ಖುಷಿ    

ಕೆ.ಎಸ್. ಅಶೋಕ ನಿರ್ದೇಶನದ ‘ದಿಯಾ’ ಚಿತ್ರ ವೀಕ್ಷಿಸಿದ ಹೆಚ್ಚಿನವರಿಂದ ಬಂದ ಪ್ರತಿಕ್ರಿಯೆ ಒಂದೇ ಬಗೆಯದ್ದಾಗಿತ್ತು. ಸಿನಿಮಾ ಇಷ್ಟಪಟ್ಟವರಲ್ಲಿ ಹೆಚ್ಚಿನವರು ಹೇಳಿದ್ದು, ‘ದಿಯಾ ಬದುಕಿನಲ್ಲಿ ಇಷ್ಟೊಂದು ಟ್ರ್ಯಾಜಿಡಿಗಳಾ’ ಎಂದು.

ದಿಯಾ ಪಾತ್ರವನ್ನು ನಿಭಾಯಿಸಿದ್ದು ಖುಷಿ. ಇವರು ಮುಖ್ಯ ಪಾತ್ರವನ್ನು ನಿಭಾಯಿಸಿದ್ದು ಇದೇ ಮೊದಲು. ಆದರೆ, ಮೊದಲ ಚಿತ್ರದಿಂದ ಸಿಕ್ಕ ಪ್ರಶಂಸೆ ಖುಷಿ ಅವರನ್ನು ಮಂತ್ರಮುಗ್ಧಗೊಳಿಸಿದೆ. ಹಾಗೆಯೇ, ಮುಂದಿನ ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗ ಬಹಳ ಚ್ಯೂಸಿ ಆಗಿರುವಂತೆ ಎಚ್ಚರಿಕೆಯನ್ನೂ ನೀಡಿದೆ!

‘ದಿಯಾ ನನ್ನ ಮೊದಲ ಸಿನಿಮಾ ಅಲ್ಲ. ನಾನು ಕೆಲವು ಸಿನಿಮಾಗಳಲ್ಲಿ ಚಿಕ್ಕ–ಪುಟ್ಟ ಪಾತ್ರ ಮಾಡಿದ್ದಿದೆ. ನಾಯಕಿ ಆಗಿ ಇದೇ ಮೊದಲ ಸಿನಿಮಾ’ ಎನ್ನುತ್ತ ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಕುಳಿತರು ಖುಷಿ. ಇವರು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಇವರ ಮೂಲ ಊರು ಮಂಡ್ಯ ಜಿಲ್ಲೆಯ ಮದ್ದೂರು.

ADVERTISEMENT

‘ನಾನು ರಂಗಭೂಮಿ ಕಲಾವಿದೆ. ಚಿಕ್ಕ ವಯಸ್ಸಿನಲ್ಲಿ ಇದ್ದಾಗಿನಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ನಟ ಮಂಡ್ಯ ರಮೇಶ್ ಅವರು ನನಗೆ ಸಿನಿಮಾ ಜಗತ್ತಿನ ಕಡೆ ದಾರಿ ತೋರಿಸಿದರು. ನನ್ನನ್ನು ಉದ್ದೇಶಿಸಿ, ನೀನು ಹಿರೋಯಿನ್ ಆಗಬಹುದು ಎನ್ನುತ್ತಿದ್ದರು. ನಾನು, ಆಗಲ್ಲ ಸರ್ ಎಂದು ಹೇಳುತ್ತಿದ್ದೆ’ ಎಂದು ತಮ್ಮ ಹಿಂದಿನ ದಿನಗಳಲ್ಲಿ ನೆನಪಿಸಿಕೊಂಡರು ಖುಷಿ. ‘ಸಿನಿಮಾ ನಾಯಕಿ ಆಗುವ ಶಕ್ತಿ ನಿನ್ನಲ್ಲಿ ಇದೆ’ ಎಂದು ಖುಷಿ ಅವರಲ್ಲಿ ಮತ್ತೆ ಮತ್ತೆ ಹೇಳಿದ್ದು ಮಂಡ್ಯ ರಮೇಶ್. ‘ದಿಯಾ’ ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್‌ ಕರೆದಿದ್ದಾಗ, ಅಲ್ಲಿಗೆ ಹೋದ ಖುಷಿ ಅವರು ಸಿನಿಮಾ ನಾಯಕಿಯಾಗಿ ಆಯ್ಕೆ ಕೂಡ ಆದರು.

ಚಿತ್ರದ ನಾಯಕಿಯ ಜೀವನದಲ್ಲಿ ಸಿಕ್ಕಾಪಟ್ಟೆ ಟ್ರ್ಯಾಜಿಡಿಗಳು ಇರುವ ವಿಚಾರವಾಗಿ ಖುಷಿ ಅವರು ನಿರ್ದೇಶಕ ಅಶೋಕ ಅವರಲ್ಲಿ ಪ್ರಶ್ನಿಸಿದ್ದರು. ‘ಇಷ್ಟೊಂದು ಟ್ರ್ಯಾಜಿಡಿಗಳು ಇದ್ದರೆ ಸಿನಿಮಾ ಚೆನ್ನಾಗಿ ಆಗುತ್ತದೆಯೇ ಎಂದು ನಾನು ಅವರಲ್ಲಿ ಪ್ರಶ್ನಿಸಿದ್ದೆ. ಇವಳು ಯಾವಾಗಲೂ ಅಳುತ್ತಾ ಇರುತ್ತಾಳೆ ಎಂದು ವೀಕ್ಷಕರು ಅಂದುಕೊಳ್ಳುವುದಿಲ್ಲವೇ ಎಂದೂ ಕೇಳಿದ್ದೆ. ಆದರೆ, ಕೆಲವರು ಖುಷಿಗಿಂತಲೂ ಪ್ಯಾಥೋವನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಅಶೋಕ ಹೇಳಿದ್ದರು. ರಿಹರ್ಸಲ್‌ ಮಾಡುವಾಗಲೆಲ್ಲ ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದರು. ದಿಯಾ ಪಾತ್ರವು ವೀಕ್ಷಕರಿಗೆ ಇಷ್ಟೊಂದು ಇಷ್ಟವಾಗುತ್ತದೆ ಎಂದು ನಾನು ಖಂಡಿತ ಭಾವಿಸಿರಲಿಲ್ಲ’ ಎಂದು ಖುಷಿ ಹೇಳಿದರು.

‘ದಿಯಾ ಬಗ್ಗೆ ಮೊದಲ ವಾರದಲ್ಲಿ ಅಷ್ಟೊಂದು ಪ್ರತಿಕ್ರಿಯೆ ಇರಲಿಲ್ಲ. ಮೂರನೆಯ ಹಾಗೂ ನಾಲ್ಕನೆಯ ವಾರದಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರ ಆದ ನಂತರ ಸಿಕ್ಕಾಪಟ್ಟೆ ಒಳ್ಳೆಯ ಪ್ರತಿಕ್ರಿಯೆಗಳು ಬಂದವು. ಬೇರೆ ಬೇರೆ ದೇಶಗಳಿಂದ ಕೂಡ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಚಿತ್ರವನ್ನು ಮರು ಬಿಡುಗಡೆ ಮಾಡಿ ಎಂದು ಕೇಳಿದವರೂ ಇದ್ದರು. ಇದೊಂದು ರೀತಿಯಲ್ಲಿ ಮ್ಯಾಜಿಕ್ ಆದಂತೆ ಅಗಿದೆ ನನ್ನ ಬದುಕಿನಲ್ಲಿ’ ಎಂದು ವಿವರಿಸಿದರು. ದಿಯಾ ಸಿನಿಮಾ ನಂತರ ಖುಷಿ ಅವರಿಗೆ ಬಹಳಷ್ಟು ಸಿನಿಮಾ ಆಫರ್‌ಗಳು ಬಂದಿವೆ. ‘ಆದರೆ ಸ್ವಲ್ಪ ಚ್ಯೂಸಿ ಆಗಿರೋಣ’ ಎಂದು ಖುಷಿ ಅವರು ತೀರ್ಮಾನಿಸಿದ್ದಾರೆ. ‘ನಕ್ಷೆ ಎನ್ನುವ ಒಂದು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಕೊರೊನಾ ಹಾವಳಿ ಮುಗಿದ ನಂತರ ಇದರ ಚಿತ್ರೀಕರಣ ಶುರುವಾಗುತ್ತದೆ. ಚಿರಾಗ್ ಎನ್ನುವವರು ಇದರಲ್ಲಿ ನಾಯಕ ಆಗಿ ನಟಿಸುತ್ತ ಇದ್ದಾರೆ. ಪ್ರಮೋದ್ ಶೆಟ್ಟಿ, ಅರ್ಚನಾ ಜೋಯಿಸ್ ತಾರಾಗಣದಲ್ಲಿ ಇದ್ದಾರೆ’ ಎಂದು ತಿಳಿಸಿದರು.

‘ತುಂಬಾ ಕಮರ್ಷಿಯಲ್ ಆಗಬೇಡಿ, ಚ್ಯೂಸಿ ಆಗಿರಿ ಎಂದೆಲ್ಲ ನನಗೆ ಹಲವರು ಸಂದೇಶ ಕಳಿಸುತ್ತಿದ್ದಾರೆ. ನನ್ನ ಜವಾಬ್ದಾರಿ ಹೆಚ್ಚಾಗಿದೆ. ತುಸು ತಡವಾಗಿ ಆದರೂ ಪರವಾಗಿಲ್ಲ ಒಳ್ಳೆಯ ಪಾತ್ರ ನಿಭಾಯಿಸೋಣ ಎಂದು ತೀರ್ಮಾನಿಸಿದ್ದೇನೆ’ ಎಂದು ಖುಷಿ ಅವರು ಮಾತು ಮುಗಿಸುವ ಮುನ್ನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.