ADVERTISEMENT

ದೊಡ್ಡರಂಗೇಗೌಡರ ‘ಹಾರುವ ಹಂಸಗಳು’ ಆಗಸ್ಟ್ 12ಕ್ಕೆ ನಮ್ಮ ಫ್ಲಿಕ್ಸ್‌ನಲ್ಲಿ ತೆರೆಗೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 12:26 IST
Last Updated 9 ಆಗಸ್ಟ್ 2021, 12:26 IST
‘ಹಾರುವ ಹಂಸಗಳು’ ಚಿತ್ರತಂಡದೊಂದಿಗೆ ಸಾಹಿತಿ ದೊಡ್ಡರಂಗೇಗೌಡ 
‘ಹಾರುವ ಹಂಸಗಳು’ ಚಿತ್ರತಂಡದೊಂದಿಗೆ ಸಾಹಿತಿ ದೊಡ್ಡರಂಗೇಗೌಡ    

ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರ ನಿರ್ದೇಶನದ ಮೊದಲ ಚಿತ್ರ ‘ಹಾರುವ ಹಂಸಗಳು’ ನಮ್ಮ ಫ್ಲಿಕ್ಸ್ ಮೂಲಕ ಆಗಸ್ಟ್ 12ರಂದು ಬಿಡುಗಡೆಯಾಗಲಿದೆ.

ಚಿತ್ರ ಬಿಡುಗಡೆಯ ಕುರಿತು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೊಡ್ಡರಂಗೇಗೌಡ ಅವರು, ‘ಒಂದು ದಿನ ವಾಯುವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಚಿಕ್ಕಮಕ್ಕಳ ಕೈಯಲ್ಲಿ ಮೊಬೈಲ್ ಇದ್ದದ್ದನ್ನು ನೋಡಿ, ಇದರ ಉಪಯೋಗ, ದುರುಪಯೋಗದ ಬಗ್ಗೆ ಯೋಚಿಸಿದ್ದೆ. ಈ ಕುರಿತು ಸ್ನೇಹಿತರ ತಂಡದ ಮುಂದೆ ಹೇಳಿಕೊಂಡಾಗ, ಅವರೆಲ್ಲಾ ನೀವೇ ಈ ಬಗ್ಗೆ ಬರೆಯಿರಿ ಎಂದು ಸಲಹೆ ನೀಡಿದರು. ಹೀಗಾಗಿ ಒಂದು ನಾಟಕ ಬರೆದಿದ್ದೆ. ಈ ನಾಟಕ ನೋಡಿದ ನನ್ನ ಸ್ನೇಹಿತ ವಾಸುಪ್ರಸಾದ್ ಅವರು ಈ ನಾಟಕವನ್ನು ಚಲನಚಿತ್ರ ಮಾಡೋಣ ಎಂದರು. ಅಷ್ಟೇ ಅಲ್ಲದೇ, ನೀವೇ ನಿರ್ದೇಶನವನ್ನೂ ಮಾಡಬೇಕು ಎಂದರು. ಅವರೆಲ್ಲರ ಒತ್ತಾಯಕ್ಕೆ ಮಣಿದು ನಾನು ಎಪ್ಪತ್ತೈದನೇ ವಯಸ್ಸಿಗೆ ನಿರ್ದೇಶನಕ್ಕೆ ಮುಂದಾದೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಎರಡು ಹಾಡುಗಳನ್ನು ನಾನೇ ಬರೆದಿದ್ದಾನೆ. ದುಂಡಿರಾಜ್ ಅವರ ಒಂದು ಹಾಡನ್ನು ಸಹ ಈ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ’ ಎಂದರು.

ನಿರ್ಮಾಪಕ ವಾಸುಪ್ರಸಾದ್ ಅವರು, ‘ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನಮ್ಮ ಫ್ಲಿಕ್ಸ್‌ನಲ್ಲಿ ಈಗಾಗಲೇ ಸಾವಿರ ಟಿಕೆಟ್ ಬುಕ್ ಆಗಿದೆ’ ಎಂದರು. ಚಿತ್ರದ ಒಂದು ಹಾಡಿಗೆ ಉಪಾಸನ ಮೋಹನ್ ಸಂಗೀತ ನೀಡಿದ್ದರೆ, ಉಳಿದ ಹಾಡುಗಳಿಗೆ ಶ್ರೀಸುರೇಶ್ ಸಂಗೀತ ನೀಡಿದ್ದಾರೆ. ಓಜಸ್ ದೀಪ್, ಚಿನ್ಮಯ್, ದೊಡ್ಡರಂಗೇಗೌಡ, ರೂಪ, ಪ್ರಣವ ಮೂರ್ತಿ, ಶಿವಾನಂದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.