ADVERTISEMENT

ಗೋವಾ 52ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ‘ಡೊಳ್ಳು’ ಸಿನಿಮಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 12:46 IST
Last Updated 15 ನವೆಂಬರ್ 2021, 12:46 IST
ಡೊಳ್ಳು ಪೋಸ್ಟರ್‌
ಡೊಳ್ಳು ಪೋಸ್ಟರ್‌   

ಬೆಂಗಳೂರು: ಗೋವಾದಲ್ಲಿ ನವೆಂಬರ್‌ 20ರಿಂದ ಆರಂಭವಾಗಲಿರುವ 52ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ಚೊಚ್ಚಲ ಸ್ಪರ್ಧೆ’ ವಿಭಾಗಕ್ಕೆ ಸಾಗರ್‌ ಪುರಾಣಿಕ್‌ ನಿರ್ದೇಶನದ ಕನ್ನಡ ಚಿತ್ರ ‘ಡೊಳ್ಳು’ ಆಯ್ಕೆಯಾಗಿದೆ.

ಈ ವಿಭಾಗಕ್ಕೆ ಭಾರತದಿಂದ ಕೇವಲ ಎರಡು ಚಿತ್ರಗಳಷ್ಟೇ ಆಯ್ಕೆಯಾಗಿದ್ದು, ಇನ್ನೊಂದು ಸಿನಿಮಾ ಮರಾಠಿಯ ‘ಫ್ಯುನರಲ್‌’ ಆಗಿದೆ. ಈ ವಿಭಾಗದಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕರನ್ನು ಗುರುತಿಸಲಾಗುತ್ತದೆ. ಇಲ್ಲಿಗೆ ಆಯ್ಕೆಯಾದ ಉಳಿದ ಎಲ್ಲವೂ ಬೇರೆ ರಾಷ್ಟ್ರದ ಸಿನಿಮಾಗಳಾಗಿವೆ. ನಗರೀಕರಣ ಹಾಗೂ ಹಳ್ಳಿಗಳಿಂದ ನಗರದತ್ತ ವಲಸೆಯು ಹೇಗೆ ಡೊಳ್ಳು ಕುಣಿತ ಸೇರಿದಂತೆ ಜಾನಪದ ಕಲೆಗಳನ್ನು ಅವನತಿಯತ್ತ ಕೊಂಡೊಯ್ಯುತ್ತಿವೆ ಎನ್ನುವ ಕುರಿತು ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕಾರ್ತಿಕ್‌ ಹಾಗೂ ನಿಧಿ ಹೆಗ್ಡೆ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರವನ್ನು ಪವನ್ ಒಡೆಯರ್‌ ಅವರ ಒಡೆಯರ್‌ ಮೂವೀಸ್‌ ನಿರ್ಮಾಣ ಮಾಡಿದೆ.

ಈ ಕುರಿತು ಸಂತಸ ಹಂಚಿಕೊಂಡ ಸಾಗರ್‌ ಪುರಾಣಿಕ್‌, ‘ಮೊನ್ನೆಯಷ್ಟೇ ಡೊಳ್ಳು ಸಿನಿಮಾ ಪನೋರಮ ವಿಭಾಗಕ್ಕೆ ಆಯ್ಕೆಯಾದ ಖುಷಿಯಲ್ಲಿ ನಾವಿದ್ದೆವು. ಇದೀಗ ಮತ್ತೊಮ್ಮೆ ಸಂಭ್ರಮ. ವಿಭಾಗದಲ್ಲಿ ಗೆದ್ದರೆ ಮತ್ತಷ್ಟು ಖುಷಿ. ಆದರೆ ಈ ವಿಭಾಗಕ್ಕೆ ಆಯ್ಕೆಯಾದ ಭಾರತದ ಎರಡೇ ಸಿನಿಮಾಗಳಲ್ಲಿ ಡೊಳ್ಳು ಕೂಡಾ ಒಂದು ಎನ್ನುವುದೇ ನನಗೆ ಹೆಮ್ಮೆ. ಚಿತ್ರ ಬಿಡುಗಡೆಯ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಅಂತರರಾಷ್ಟ್ರೀಯ ಮಟ್ಟದ ಪ್ರೇಕ್ಷಕರಿಗೆ ತಲುಪಿಸಿದ ಬಳಿಕ ಇದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಚಿಂತನೆ ಇದೆ’ ಎಂದರು.

ADVERTISEMENT

ಚಿತ್ರೋತ್ಸವದ ಪನೋರಮ ವಿಭಾಗಕ್ಕೂ ‘ಡೊಳ್ಳು’ ಆಯ್ಕೆಯಾಗಿತ್ತು. ಜೊತೆಗೆ ಮಂಸೋರೆ ನಿರ್ದೇಶನದ ‘ಆ್ಯಕ್ಟ್‌ 1978’, ಪ್ರವೀಣ್‌ ಕೃಪಾಕರ್‌ ನಿರ್ದೇಶನದ ‘ತಲೆದಂಡ’ ಹಾಗೂ ಗಣೇಶ್‌ ಹೆಗಡೆ ಅವರು ನಿರ್ದೇಶಿಸಿರುವ ‘ನೀಲಿ ಹಕ್ಕಿ’ ಈ ವಿಭಾಗಕ್ಕೆ ಆಯ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.