ADVERTISEMENT

ಡ್ರಗ್ ಮಾಫಿಯಾ: ಸ್ಯಾಂಡಲ್‌ವುಡ್‌ನ ಅಸಲಿ ಮುಖ

ಕೆ.ಎಂ.ಸಂತೋಷಕುಮಾರ್
Published 6 ಸೆಪ್ಟೆಂಬರ್ 2020, 16:14 IST
Last Updated 6 ಸೆಪ್ಟೆಂಬರ್ 2020, 16:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಮನುಷ್ಯನಿಗೂ ಎರಡುಮುಖಗಳೇ ಅಥವಾ ನಾನಾ ಮುಖಗಳೇ. ಇದ್ದರೂ ಇರಬಹುದು, ಸಮಾಜಕ್ಕೆ ತೋರಿಸುವುದು ಒಂದು ಮುಖವಾದರೆ, ಮರೆಮಾಚಿಟ್ಟುಕೊಂಡಿದ್ದು ಇನ್ನೊಂದು ಮುಖ. ಅದು ಸಮಾಜದ ಮುಂದೆ ಬಟಾಬಯಲಾದಾಗ ಮನುಷ್ಯ ಬೆತ್ತಲು! ಹೌದು, ಎಷ್ಟೋ ಮಂದಿ ಜಗಳ, ವಾಗ್ವಾದ, ಸಂಘರ್ಷ, ಇನ್ನೊಬ್ಬರಿಗೆ ಬೆದರಿಕೆ ಹಾಕುವಾಗ, ಒಳ್ಳೆಯ ಕಾರಣಕ್ಕೆ ಎಚ್ಚರಿಕೆ ಕೊಡುವಾಗಲೂ ‘ನನ್ನ ಇನ್ನೊಂದು ಮುಖ ನೋಡಿಲ್ಲ ನೀನು, ತೋರಿಸಬೇಕಾ’ ಎನ್ನುವುದನ್ನು ಕೇಳಿಯೇ ಕೇಳಿರುತ್ತೇವೆ, ಹಾಗಾದರೆ ಆ ಮುಖ ಯಾವುದು? ಅದೇ ಅಸಲಿ ಮುಖ!

ಈಗ ಚಿತ್ರರಂಗದಲ್ಲೂ ಕೆಲವರ ಅಸಲಿಮುಖ ಅನಾವರಣವಾಗಲು ಶುರುವಾಗಿರುವುದನ್ನು ನೋಡುತ್ತಿದ್ದೇವೆ. ಸ್ಯಾಂಡಲ್‌ವುಡ್‌ಗೆ ಮೆತ್ತಿಕೊಂಡಿರುವ ಡ್ರಗ್ಸ್‌ ಮಾಫಿಯಾ ಕಳಂಕದಲ್ಲಿ ಹಲವು ನಟ–ನಟಿಯರ ಅಸಲಿಮುಖಗಳು ಅನಾವರಣಗೊಳ್ಳಲು ಆರಂಭಿಸಿವೆ.

ಇತ್ತೀಚೆಗೆ ಉಡುಪಿಯ ಅದಮಾರು ಮಠಕ್ಕೆ ಸಂಬಂಧಿಸಿದ ವಿದ್ಯಾಸಂಸ್ಥೆಯ ಪ್ರಾಂಶುಪಾಲರನ್ನು ಭೇಟಿಯಾಗಿದ್ದೆ. ಆನ್‌ಲೈನ್‌ ಪಾಠದ ಬಗ್ಗೆ ಅವರೊಂದಿಗೆ ಮಾತನಾಡುವಾಗ ಅವರು ಹೇಳಿದ್ದು ‘ಆನ್‌ಲೈನ್‌ ಪಾಠ ಹೇಗಾಗಿದೆ ಎಂದರೆ ನಾವು ಖಾಲಿ ಗೋಡೆಗಳಿಗೆ ಪಾಠ ಮಾಡುತ್ತಿದ್ದೇವೆ ಎನಿಸಲಾರಂಭಿಸಿದೆ. ಏಕೆಂದರೆ ನಮಗೆ ಜೀವಂತ ವ್ಯಕ್ತಿಗಳಿಗೆ ಪಾಠ ಮಾಡಿ ಗೊತ್ತಿತ್ತು. ಈಗ ನಿಜಕ್ಕೂ ಶಿಕ್ಷಕ– ಶಿಶುಕ್ಷುವಿನ ಸಂಬಂಧ ಸಡಿಲಗೊಳಿಸುತ್ತಿದೆ ಈ ಆನ್‌ಲೈನ್‌ ಶಿಕ್ಷಣ. ಇನ್ನು ವಿದ್ಯಾರ್ಥಿಗಳಿಗೂ ರೋಲ್‌ ಮಾಡೆಲ್‌ ಆಗಿದ್ದ ಶಿಕ್ಷಕರ ಜಾಗವನ್ನು ಸಿನಿಮಾ ತಾರೆಯರು ಆಕ್ರಮಿಸಿಕೊಂಡುಬಿಟ್ಟಿದ್ದಾರೆ’ ಎಂದರು. ಅವರ ಮಾತಿನಲ್ಲಿ ಬೇಸರ ಇರದಿದ್ದರೂ ವಾಸ್ತವ ಪರಿಸ್ಥಿತಿಯ ವ್ಯಂಗ್ಯ ಧ್ವನಿಸುವಂತಿತ್ತು.

ADVERTISEMENT

ಹೇರ್‌ಸ್ಟೈಲ್‌, ಡ್ರೆಸ್‌, ಡೈಲಾಗ್‌, ವಾಚ್‌, ಮೊಬೈಲ್‌, ವೆಹಿಕಲ್‌.... ಹೀಗೆ ಪ್ರತಿಯೊಂದರಲ್ಲೂ ತಮ್ಮ ಇಷ್ಟದ ನಟ/ ನಟಿಯರನ್ನು ಈ ಪೀಳಿಗೆಯ ಮಕ್ಕಳು ಅನುಕರಿಸುವಾಗ, ಈ ತಾರೆಗಳಾದರೂ ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕನ್ನು ಆದರ್ಶವಾಗಿಟ್ಟುಕೊಳ್ಳಬೇಕಲ್ಲವೇ ಎಂದೆನಿಸುವುದು ಯಾರಿಗಾದರೂ ಸಹಜವೇ. ಎಷ್ಟುಮಂದಿ ಚಿತ್ರ ತಾರೆಯರ ಬದುಕು ಸಮುದಾಯಕ್ಕೆ, ಸಮಾಜಕ್ಕೆ ಆದರ್ಶಮಯವಾಗಿದೆ ಎನ್ನುವ ಪ್ರಶ್ನೆ ಕೇಳಿಕೊಂಡಾಗ ಉತ್ತರ ಅವರವರ ಭಾವಕ್ಕೆ, ಭಕುತಿಗೆ ಬಿಟ್ಟಿದ್ದು.

ಕಾಲ ಗರ್ಭದಲ್ಲಿ ಹೂತುಹೋದ ಒಂದು ಸಂಗತಿಯನ್ನು (ಸಂಬಂಧಿಸಿದವರ ಹೆಸರನ್ನು ಪ್ರಸ್ತಾಪಿಸದೇ ಸನ್ನಿವೇಶವನ್ನಷ್ಟೇ) ಇಲ್ಲಿ ಉಲ್ಲೇಖಿಸುವೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರೊಬ್ಬರು ತಾವು ನಿರ್ದೇಶಿಸುತ್ತಿದ್ದ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಚೀನಾಕ್ಕೆ ಚಿತ್ರತಂಡದೊಂದಿಗೆ ಹೋಗಿದ್ದರು. ಹಾಂಕಾಂಗ್‌ ಮತ್ತು ಮಖಾವ್‌ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಆ ಚಿತ್ರದ ನಾಯಕಿ ನಟಿ ಪ್ರತಿ ರಾತ್ರಿ ತನ್ನ ಸಹ ನಟನೊಂದಿಗೆ ಪಾರ್ಟಿಗಾಗಿ ಹತ್ತಿರದ ಕ್ಲಬ್‌ವೊಂದಕ್ಕೆ ಹೋಗುತ್ತಿದ್ದರು. ಅದು ಎಲ್ಲಿತ್ತೆಂದರೆ ಚೀನಾ ಗಡಿಭಾಗಕ್ಕೆ ಹೊಂದಿಕೊಂಡಂತಿದ್ದ ಸ್ಥಳವೊಂದರಲ್ಲಿ. ಪಾರ್ಟಿ ಮುಗಿಸಿಕೊಂಡು ಆಕೆ ಶೂಟಿಂಗ್‌ ಸೆಟ್‌ಗೆ ಬರುವಾಗ ಪ್ರತೀ ದಿನವೂ ಮಧ್ಯಾಹ್ನ 12 ಗಂಟೆ ಸಮೀಪಿಸಿರುತ್ತಿತ್ತು. ಆಕೆಯಿಂದ ದಿನವೂ ಶೂಟಿಂಗ್‌ ವಿಳಂಬವಾಗುತ್ತಿರುವುದಕ್ಕೆ ನಿರ್ದೇಶಕರು ಮೊದಲೇ ಕುಪಿತಗೊಂಡಿದ್ದರು. ಚಿತ್ರತಂಡದ ಇನ್ನುಳಿದ ಸದಸ್ಯರನ್ನು ‘ನಟಿ ತಡವಾಗಿ ಸೆಟ್‌ಗೆ ಬರುತ್ತಿರಲು ಕಾರಣವೇನು’ ಎಂದು ಕೇಳಿದಾಗ, ಆಕೆ ಮತ್ತು ಸಹ ನಟ ಇಬ್ಬರೂ ಮಾದಕ ದ್ರವ್ಯ ವ್ಯಸನಿಗಳು. ದಿನವೂ ಡ್ರಗ್ಸ್‌ ಪಾರ್ಟಿಗೆ ಹೋಗಿ ಬರುತ್ತಾರೆ ಎನ್ನುವ ಸಂಗತಿಯನ್ನು ಬಾಯಿಬಿಟ್ಟರು. ಆ ನಿರ್ದೇಶಕರ ಪಿತ್ತ ನೆತ್ತಿಗೇರಿತು. ಮಧ್ಯಾಹ್ನ ಸುಡು ಬಿಸಿಲಿಗೆ ಅವರ ಬೋಳು ತಲೆಯೂ ಕಾದು ಕೆಂಡವಾಗಿತ್ತು. ನಟಿ ದಿನವೂ ಸೆಟ್‌ಗೆ ತಡವಾಗಿ ಬರುವುದನ್ನು ಸಹಿಸಿಕೊಳ್ಳಲಾಗದೆ, ಮೊದಲೇ ಕುಪಿತಗೊಂಡಿದ್ದ ನಿರ್ದೇಶಕರು ಇಷ್ಟೊಂದು ಚಿಕ್ಕ ವಯಸ್ಸಿಗೆ ಬದುಕು ಬಲಿಕೊಳ್ಳುತ್ತಿರುವೆಯಲ್ಲಾ ಇದು ತಪ್ಪಲ್ಲವೇ ಎಂದು ಆಕೆಯ ಕಪಾಳಕ್ಕೆ ಬಾರಿಸಿಯೇ ಬಿಟ್ಟರು.

‘ನಿರ್ದೇಶಕರು ಪಾತ್ರಕ್ಕಾಗಿ ‍ಪಲ್ಲಂಗಕ್ಕೆ ಕರೆದರು (ಕಾಸ್ಟಿಂಗ್‌ ಕೌಚ್‌). ನಾನು ಸಹಕರಿಸದಿದ್ದಕ್ಕೆ ಕಪಾಳ ಮೋಕ್ಷ ಮಾಡಿದರು’ ಎಂದು ಆಕೆ ಆರೋಪಿಸಿದರು. ಮಗಳಿಗೆ ಬೆನ್ನಾಗಿ ಚಿತ್ರತಂಡದೊಂದಿಗೆ ಬಂದಿದ್ದ ಆ ನಟಿಯ ತಾಯಿ ಮಗಳ ತಪ್ಪೇನು ಎಂದು ತಿಳಿಯುವ ಗೋಜಿಗೆ ಹೋಗಲೇ ಇಲ್ಲ. ನಿರ್ದೇಶಕನನ್ನೇ ಆಪಾದಿತ ಸ್ಥಾನದಲ್ಲಿ ನಿಲ್ಲಿಸಿದರು. (ಇದೊಂದು ಬ್ಯಾಡ್‌ ಪೇರೆಂಟಿಂಗ್‌ಗೆ ತಾಜಾ ಉದಾಹರಣೆ). ನಿಜ ಸತ್ಯ ಬಾಯಿ ಬಿಟ್ಟರೆ, ಸಿನಿಮಾ ಅರ್ಧಕ್ಕೆ ನಿಲ್ಲುವ ಅಳಕು ನಿರ್ದೇಶಕರು ಮತ್ತು ನಿರ್ಮಾಪಕರ ಬಾಯಿ ಕಟ್ಟಿಹಾಕಿತು. ಕೊನೆಗೆ ಚಿತ್ರರಂಗದ ಹಿರಿಯರ ಮಧ್ಯಸ್ಥಿತಿಕೆಯಿಂದ ವಿವಾದವೇನೋ ಬಗೆಹರಿಯಿತು. ಆ ನಟಿ ಮತ್ತು ಸಹ ನಟ ಇಬ್ಬರೂ ಡ್ರಗ್ಸ್ ವ್ಯಸನಿಗಳು ಎನ್ನುವ ಸತ್ಯ ಹೊರ ಜಗತ್ತಿಗೆ ಗೊತ್ತಾಗಲೇ ಇಲ್ಲ, ಅದು ಇತಿಹಾಸದ ಕಾಲಗರ್ಭದೊಳಗೆ ಮುಚ್ಚಿ ಹೋಯಿತು. ಆ ನಿರ್ದೇಶಕನ ಕ್ಯಾರೆಕ್ಟರ್‌ ಬಗ್ಗೆ ಆತನ ಪತ್ನಿಗೆ ಅಪಾರ ನಂಬಿಕೆ ಇದ್ದಿದ್ದರಿಂದ ಆತನ ಸಂಸಾರ ಇಂದಿಗೂ ಸುಖಸಂಸಾರವಾಗಿಯೇ ಉಳಿದಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕಲ್ಲಾ! ‘ಗಿಣಿ’ ಶಾಸ್ತ್ರ ಜಾಲಾಡಿದ‘ರೇ’ ಸಿಸಿಬಿಯವರಿಗೆ ಇಂತಹ ಇನ್ನಷ್ಟು ನಟ– ನಟಿಯರ ಅಸಲಿ ಮುಖಗಳು ಈ ಸಮಾಜದ ಮುಂದೆ ಅನಾವರಣಗೊಳ್ಳುವುದರಲ್ಲಿ ಅನುಮಾನವೂ ಇಲ್ಲ.

ಚಿತ್ರರಂಗದಲ್ಲಿ ನಟ–ನಟಿಯರು ಚಿತ್ರಗಳಲ್ಲಿ ಮಿಂಚಿ ಮರೆಯಾಗುವುದು ಸಹಜ. ಇದರಲ್ಲಿ ಕೆಲವರು ತೆರೆಮರೆಗೆ ಸರಿಯಲು ಅದೃಷ್ಟ ಕೈಹಿಡಿಯದಿರುವುದು ಕಾರಣವಾದರೆ, ಮತ್ತೆ ಕೆಲವರು ತೆರೆಮರೆಗೆ ಸರಿಯಲು ಅವರು ರೂಢಿಸಿಕೊಂಡ ದುಶ್ಚಟಗಳೇ ಕಾರಣ ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ.

ಈಗ ‘ಗಂಧದಗುಡಿ’ಯಲ್ಲಿ ಸಿಸಿಬಿಯವರು ಬಗೆದಷ್ಟು ಡ್ರಗ್ಸ್‌ ಮಾಫಿಯಾದ ಬೇರುಗಳು ಆಳಕ್ಕೆ ಇಳಿಯುತ್ತಿರುವುದು ಗೋಚರವಾಗುತ್ತಿದೆ. ಡ್ರಗ್ಸ್‌ ಮಾಫಿಯಾ ಅಥವಾ ಡ್ರಗ್ಸ್‌ ವ್ಯಸನಿಗಳು ಯಾವ ಕಾಲಕ್ಕೂ ಇರಲೇ ಇಲ್ಲವೆಂದು ಒಟ್ಟು ಧ್ವನಿಯಲ್ಲಿ ಚಿತ್ರರಂಗ ಹೇಳುವ ಸ್ಥಿತಿಯಲ್ಲಿ ಇಲ್ಲ. ಒಂದು ಮೇಲ್ನೋಟಕ್ಕೆ ಕಾಣಿಸುವ ಸಂಗತಿ ಎಂದರೆ, ‘ಗಂಧದಗುಡಿ’ಗೆ ಮೆತ್ತಿಕೊಂಡಿರುವ ಕಳಂಕ ಹೊರಗಿನಿಂದ ಬಂದವರೇ ಹೆಚ್ಚು ಹಚ್ಚಿಬಿಟ್ಟಿದ್ದಾರೆ. ಅದನ್ನು ತೊಳೆದು, ‘ಗಂಧದಗುಡಿ’ಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಈ ಮನೆಯ ಸ್ವಂತ ಮಕ್ಕಳ ಜವಾಬ್ದಾರಿ. ಗುಡಿಯಲ್ಲಿ ಕೊಳಕು ಮೆತ್ತಿಕೊಳ್ಳುತ್ತಿದೆ, ಅದನ್ನು ತಿಕ್ಕಿತೀಡಿ ಶುಚಿಗೊಳಿಸೋಣ ಎಂದಿರುವ ಇಂದ್ರಜಿತ್‌ ಲಂಕೇಶ್‌ ಅವರನ್ನು ಶಪಿಸುವುದಕ್ಕಿಂತ, ಅಪ್ರಿಸೀಯೇಟ್‌ ಮಾಡುವುದು ಒಳಿತೆನಿಸುತ್ತದೆ. ನೀವೇನಂತೀರಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.