ADVERTISEMENT

‘ಮಾರುತ’ ನಾಯಕ ನಾನಲ್ಲ: ದುನಿಯಾ ವಿಜಯ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 20:42 IST
Last Updated 17 ಸೆಪ್ಟೆಂಬರ್ 2025, 20:42 IST
ದುನಿಯಾ ವಿಜಯ್‌ 
ದುನಿಯಾ ವಿಜಯ್‌    

ಎಸ್‌.ನಾರಾಯಣ್‌ ನಿರ್ದೇಶನದ ‘ಮಾರುತ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರವು ಅ.31ರಂದು ತೆರೆಕಾಣಲಿದೆ. ರಿಲೀಸ್‌ ದಿನಾಂಕ ಘೋಷಣೆ ಬೆನ್ನಲ್ಲೇ ‘ಈ ಸಿನಿಮಾದ ನಾಯಕ ನಾನಲ್ಲ. ನಾನು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ದುನಿಯಾ ವಿಜಯ್‌ ಸ್ಪಷ್ಟಪಡಿಸಿದ್ದಾರೆ.  

ಕೆ.ಮಂಜು ಹಾಗೂ ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ಶ್ರೇಯಸ್‌ ಮಂಜು ಹಾಗೂ ಬೃಂದಾ ಆಚಾರ್ಯ ಜೋಡಿಯಾಗಿ ನಟಿಸಿದ್ದಾರೆ. ಸಾಧು ಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಮುಂತಾದವರ ತಾರಾಬಳಗವಿರುವ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರೂ ನಟಿಸಿದ್ದಾರೆ.

‘ನನ್ನನ್ನು ಈ ಸಿನಿಮಾದ ನಾಯಕ ಎಂದು ಬಿಂಬಿಸಲು ಪ್ರಯತ್ನ ಮಾಡಬೇಡಿ. ನಿರ್ಮಾಪಕ ಕೆ. ಮಂಜು ಮತ್ತು ನಿರ್ದೇಶಕ ಎಸ್. ನಾರಾಯಣ್ ಅವರ ಮೇಲೆ ಅಪಾರ ಅಭಿಮಾನ ಮತ್ತು ಗೌರವವಿದೆ. ಹೀಗಾಗಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ನಾಯಕ ನಾನಲ್ಲ. ಶ್ರೇಯಸ್ ಮಂಜು ಅವರನ್ನು ಚಿಕ್ಕ ವಯಸ್ಸಿನಿಂದ ಬಲ್ಲೆ. ಹೀಗಾಗಿ ಆತನಿಗೆ ಒಳಿತಾಗಲಿ ಎನ್ನುವ ಕಾರಣಕ್ಕೆ ನಟಿಸಿದ್ದೇನೆ’ ಎನ್ನುವ ಸ್ಪಷ್ಟನೆಯನ್ನು ಪಿಆರ್‌ಒ ಮುಖಾಂತರ ವಿಜಯ್‌ ಕಳುಹಿಸಿದ್ದಾರೆ. ಸದ್ಯ ವಿಜಯ್‌ ಚೆನ್ನೈನಲ್ಲಿ ಸುಂದರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಮೂಕುತಿ ಅಮ್ಮನ್‌–2’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. 

ADVERTISEMENT

‘ಭೀಮ’ ಸಿನಿಮಾ ಬಳಿಕ ‘ಸಿಟಿ ಲೈಟ್ಸ್‌’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ದುನಿಯಾ ವಿಜಯ್‌ ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮೂಕುತಿ ಅಮ್ಮನ್-2’ ಚಿತ್ರೀಕರಣದ ಜೊತೆಗೆ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ತಮಿಳು ನಟ ವಿಜಯ್ ಸೇತುಪತಿ, ಸಂಯುಕ್ತಾ ಮೆನನ್, ಟಬು ನಟಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರೀಕರಣದಲ್ಲಿ ವಿಜಯ್‌ ತೊಡಗಿಸಿಕೊಂಡಿದ್ದಾರೆ. 

ವರ್ಷಾಂತ್ಯಕ್ಕೆ ‘ಲ್ಯಾಂಡ್ ಲಾರ್ಡ್’

‘ಜಡೇಶ್‌ ಕೆ.ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ದೊಡ್ಡಮಟ್ಟದಲ್ಲಿ ಈ ಚಿತ್ರ ಮೂಡಿಬರಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ವರ್ಷಾಂತ್ಯಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ’ ಎಂದು ವಿಜಯ್‌ ಹೇಳಿದ್ದಾರೆ. 

ಬೃಂದಾ ಶ್ರೇಯಸ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.