ಸತ್ಯ ಹೆಗಡೆ
‘ದುನಿಯಾ’, ‘ಜಾಕಿ’ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳ ಹಿಂದೆ ಸತ್ಯ ಹೆಗಡೆ ಕ್ಯಾಮೆರಾ ಕೈಚಳಕವಿದೆ. ಚಿತ್ರರಂಗದಲ್ಲಿ ಮೂರು ದಶಕಗಳನ್ನು ಪೂರೈಸಿರುವ ಅವರು ತಂತ್ರಜ್ಞಾನದ ಅಪ್‌ಡೇಟ್, ಫ್ರೇಮ್‌ಗಳು, ಕಥೆ ಮೊದಲಾದ ಸಂಗತಿಗಳ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ್ದಾರೆ..
‘ಇವತ್ತು ಮಾತು ಎತ್ತಿದರೆ ತಾಂತ್ರಿಕವಾಗಿ ಅಪ್‌ಡೇಟ್ ಆಗಬೇಕು ಎನ್ನುತ್ತಾರೆ. ಒಂದು ಕಾಲದಲ್ಲಿ ಅಮೆರಿಕದಲ್ಲಿ ಬಳಸುತ್ತಿದ್ದ ಕ್ಯಾಮೆರಾ ಅಥವಾ ಚಿತ್ರೀಕರಣ ಉಪಕರಣ ಬೆಂಗಳೂರಿನಲ್ಲಿ ಸಿಗಲು ಹತ್ತು ವರ್ಷಗಳು ಬೇಕಿತ್ತು. ಈಗ ಹಾಗಲ್ಲ ನಿನ್ನೆ ಅಲ್ಲಿ ಬಿಡುಗಡೆಯಾಗಿರುವುದು ಇವತ್ತು ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಸಿಗುತ್ತದೆ. ಅದನ್ನು ಏಕೆ ಮತ್ತು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ಬೈಕ್ ಚಿಕ್ಕದಾಗಿರಬಹುದು ಅಥವಾ ದೊಡ್ಡದಾಗಿರಬಹುದು. ಅದನ್ನು ಹೇಗೆ ಓಡಿಸಿಕೊಂಡು ಹೋಗಿ ಗುರಿ ತಲುಪುತ್ತೇವೆ ಎಂಬುದೇ ಮುಖ್ಯ’ ಎಂದು ಮಾತು ಪ್ರಾರಂಭಿಸಿದರು ಸತ್ಯ ಹೆಗಡೆ.
‘ಮನಸಾರೆ’, ‘ಮೈನಾ’, ‘ಜಂಗ್ಲಿ’ ಮೊದಲಾದ ಚಿತ್ರಗಳಲ್ಲಿ ಇವರು ಕಟ್ಟಿಕೊಟ್ಟ ಫ್ರೇಮ್‌ಗಳನ್ನು ನೋಡುವುದೇ ಚೆಂದ. ಈತನಕ ಸುಮಾರು 40 ಚಿತ್ರಗಳಿಗೆ ಛಾಯಾಚಿತ್ರಗ್ರಾಹಕನಾಗಿ ಕೆಲಸ ಮಾಡಿರುವ ಇವರು ಸದ್ಯ ಅರ್ಜುನ್ ಜನ್ಯ ನಿರ್ದೇಶನದ ‘45’ ಹಾಗೂ ಯುವ ರಾಜ್‌ಕುಮಾರ್ ‘ಎಕ್ಕ’ ಚಿತ್ರಗಳ ಕ್ಯಾಮೆರಾ ಹಿಂದೆ ನಿಂತಿದ್ದಾರೆ.
‘ನಿರ್ದೇಶಕನ ಕಥೆಯನ್ನು ಸಿನಿಮೀಯವಾಗಿ ಹೇಳುವ ಸಾಧನ ಛಾಯಾಚಿತ್ರಗ್ರಹಣ. ಅದನ್ನು ನಿರ್ದೇಶಕನ ಆಲೋಚನೆಯ ಚೌಕಟ್ಟಿನಲ್ಲಿ ಎಷ್ಟು ಚೆಂದವಾಗಿ ಹೇಳುತ್ತೇವೆ ಎನ್ನುವುದು ಮುಖ್ಯ. ಚಿತ್ರ ಪ್ರಾರಂಭವಾಗಿ ಐದು ನಿಮಿಷದೊಳಗೆ ಪ್ರೇಕ್ಷಕ ಕ್ಯಾಮೆರಾ, ಲೆನ್ಸ್, ಲೈಟ್ ಎಲ್ಲ ಮರೆತು ಕಥೆಯೊಳಗೆ ಇಳಿದುಬಿಡಬೇಕು. ಹಾಗೇ ಚಿತ್ರದ ಫ್ರೇಮ್‌ಗಳನ್ನು ಕಟ್ಟಿಕೊಟ್ಟರೆ ಛಾಯಾಚಿತ್ರಗ್ರಾಹಕ ಗೆದ್ದಂತೆ. ಅದನ್ನು ಸುಲಭವಾಗಿಸುವ ತಂತ್ರಜ್ಞಾನ ಮತ್ತು ಪರಿಕರಗಳನ್ನು ಬಳಸಿಕೊಳ್ಳಬೇಕು’ ಎನ್ನುತ್ತಾರೆ ಅವರು.
‘ಇವತ್ತು ಡಿಜಿಟಲ್ ಯುಗ. ಪ್ರತಿ ದಿನ ತಂತ್ರಜ್ಞಾನ ಅಪ್‌ಡೇಟ್ ಆಗುತ್ತಲೇ ಇರುತ್ತದೆ. ನಮಗೆ ಏನು ಬೇಕು ಎಂಬ ಸ್ಪಷ್ಟತೆ ಬೇಕು. ಛಾಯಾಚಿತ್ರಗ್ರಾಹಕ ಮೊದಲು ನಿರ್ದೇಶಕನ ಆಲೋಚನೆ ಅರ್ಥ ಮಾಡಿಕೊಳ್ಳಬೇಕು. ಸಿನಿಮಾದ ಬಜೆಟ್ ಏನು ಎಂಬುದನ್ನು ನೋಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಪ್ಲಾನಿಂಗ್ ಬಹಳ ಮುಖ್ಯ. ಎಷ್ಟು ಪ್ಲಾನ್ ಮಾಡಿ, ತಂಡದೊಂದಿಗೆ ಚರ್ಚೆ ಮಾಡುತ್ತೇವೋ ಅಷ್ಟು ಉತ್ತಮ. ಆಗ ಕಡಿಮೆ ಖರ್ಚಿನಲ್ಲಿ ಉತ್ತಮ ಔಟ್‌ಪುಟ್ ಸಿಗುತ್ತದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.
‘ಸಿಕ್ಕ ಸಿನಿಮಾದಲ್ಲಿ ಛಾಯಾಚಿತ್ರಗ್ರಹಣವನ್ನು ಎಷ್ಟು ಸಿನಿಮೀಯವಾಗಿಸಬಹುದೆಂದು ಆಲೋಚಿಸಬೇಕು. ಈ ಚಿತ್ರ ಮುಗಿಸಿ, ಮತ್ತೊಂದು ಚಿತ್ರದಲ್ಲಿ ನೋಡಿಕೊಳ್ಳೋಣ ಎಂಬ ಭಾವನೆ ಇರಬಾರದು. ಇಂದಿನ ಹುಡುಗರಲ್ಲಿ ಆ ತಾಳ್ಮೆ ಕಡಿಮೆಯಾಗುತ್ತಿದೆ. ಸಿನಿಮಾ ಪೂರ್ಣಗೊಂಡ ನಂತರ ನಾಲ್ಕು ಜನಕ್ಕೆ ತೋರಿಸಿ ಅಭಿಪ್ರಾಯಪಡೆಯುವುದಕ್ಕಿಂತ ಸ್ಕ್ರಿಪ್ಟ್ ಹಂತದಲ್ಲಿಯೇ ಆ ಕೆಲಸ ಮಾಡಬೇಕು. ಚಿತ್ರೀಕರಣ ಬೇಕಾದರೆ ಎರಡು ವರ್ಷ ತಡವಾಗಲಿ. ಆದರೆ ಶುರುವಾಗುವ ಮೊದಲ ಸೂಕ್ತ ಪ್ಲಾನಿಂಗ್ ಇರಲಿ. ಪ್ರಾರಂಭವಾದ ಬಳಿಕ ಎಲ್ಲವನ್ನೂ ಬದಲಿಸಿಕೊಂಡು ಎರಡು ವರ್ಷಗಟ್ಟಲೇ ಎಳೆದರೆ ನಿರ್ಮಾಪಕನ ನಷ್ಟದ ಹೊರತಾಗಿ ಬೇರೆ ಏನೂ ಲಾಭವಿಲ್ಲ’ ಎಂದು ಅವರು ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.