ADVERTISEMENT

‘ಏಕ್‌ ಲವ್‌ ಯಾ’ ಸಿನಿಮಾ ಟ್ರೇಲರ್‌ ಬಿಡುಗಡೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 12:33 IST
Last Updated 3 ಜನವರಿ 2022, 12:33 IST
ಏಕ್‌ ಲವ್‌ ಯಾ ಚಿತ್ರದ ವಿಡಿಯೋ ಹಾಡಿನ ಪೋಸ್ಟರ್‌
ಏಕ್‌ ಲವ್‌ ಯಾ ಚಿತ್ರದ ವಿಡಿಯೋ ಹಾಡಿನ ಪೋಸ್ಟರ್‌   

ನಟ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡವು ತಾಂತ್ರಿಕ ಕಾರಣ ನೀಡಿ ಮುಂದೂಡಿದೆ.

ಚಿತ್ರವು ಜ.21ರಂದು ಬಿಡುಗಡೆಯಾಗಲಿದ್ದು, ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ ಜ.4ರಂದು ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ಆಯೋಜನೆಗೆ ಚಿತ್ರತಂಡ ಸಿದ್ಧತೆ ನಡೆಸಿತ್ತು. ಕೊನೇ ಕ್ಷಣದಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ರಾಜ್ಯದಲ್ಲಿ ಕೋವಿಡ್‌ ಹಾಗೂ ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ರಾತ್ರಿ ಕರ್ಫ್ಯೂ ಹೇರಲಾಗಿದೆ. ಇದರಿಂದ ಚಿತ್ರಮಂದಿರಗಳಿಗೆ ಭೇಟಿ ನೀಡುವ ಪ್ರೇಕ್ಷಕರ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು, ಸಿನಿಮಾ ಪ್ರದರ್ಶನ ಸಂಖ್ಯೆಯೂ ಇಳಿಕೆಯಾಗಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಸಂಜೆ 6.30–7 ಗಂಟೆಗೇ ಕೊನೆ ಪ್ರದರ್ಶನ ಆರಂಭವಾಗುತ್ತಿದೆ. ಇವೆಲ್ಲವೂ ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಹೊಸ ಚಿತ್ರಗಳ ಮೇಲೂ ಪರಿಣಾಮ ಬೀರುತ್ತಿವೆ. ಹೀಗಾಗಿ ಚಿತ್ರ ಬಿಡುಗಡೆಗೂ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

ಪ್ರಸ್ತುತ, ಸಿನಿಮಾ ಬಿಡುಗಡೆ ಮುಂದೂಡುವ ಬಗ್ಗೆ ‘ಏಕ್‌ ಲವ್‌ ಯಾ’ ತಂಡವು ಯಾವುದೇ ಚಿಂತನೆ ನಡೆಸಿಲ್ಲ. ‘ಜ.21ಕ್ಕೇ ಸಿನಿಮಾ ರಿಲೀಸ್‌ ಆಗಲಿದೆ. ಟ್ರೇಲರ್‌ ಹಾಗೂ ಚಿತ್ರದ ಆರನೇ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ’ ಎಂದು ಪ್ರೇಮ್‌ ತಿಳಿಸಿದ್ದಾರೆ.

ರಕ್ಷಿತಾ ಪ್ರೇಮ್‌ ನಿರ್ಮಾಣದ, ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನ ನೀಡಿರುವ ಈ ಸಿನಿಮಾದ ‘ಮೀಟ್‌ ಮಾಡೋಣ ಇಲ್ಲ ಡೇಟ್‌ ಮಾಡೋಣ’, ‘ಎಣ್ಣೆಗೂ ಹೆಣ್ಣಿಗೂ..’ ಹಾಡುಗಳು ಹಿಟ್‌ ಆಗಿದ್ದು ಯೂಟ್ಯೂಬ್‌ನಲ್ಲಿ 30 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ರಾಣಾ, ರಚಿತಾ ರಾಮ್‌, ರೀಷ್ಮಾ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.