2019ರಲ್ಲಿ ತೆರೆಕಂಡಿದ್ದ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ, ಮೋಹನ್‌ಲಾಲ್ ನಟನೆಯ ‘ಲೂಸಿಫರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಆ ಸಿನಿಮಾದ ಮುಂದುವರಿದ ಭಾಗ ‘ಎಲ್–2: ಎಂಪುರಾನ್’ ಮಾರ್ಚ್ 27ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ವಿತರಣೆ ಮಾಡುತ್ತಿದೆ.
ಈ ಕುರಿತು ಮಂಗಳವಾರ ಘೋಷಣೆ ಮಾಡಿರುವ ಹೊಂಬಾಳೆ ಫಿಲ್ಮ್ಸ್, ಪೃಥ್ವಿರಾಜ್ ನಿರ್ದೇಶನದ ಸಿನಿಮಾವೊಂದನ್ನು ತನ್ನ ಬ್ಯಾನರ್‌ನಡಿ ನಿರ್ಮಾಣ ಮಾಡುತ್ತಿರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದೆ.
‘ಪೃಥ್ವಿರಾಜ್ ಸುಕುಮಾರ್ ಅವರ ಜೊತೆಗಿನ ನಮ್ಮ ಒಡನಾಟ ಹೊಸದೇನಲ್ಲ. ನಮ್ಮ ‘ಕೆ.ಜಿ.ಎಫ್.–1’, ‘ಕೆ.ಜಿ.ಎಫ್.–2’, ‘ಕಾಂತಾರ’ ಸಿನಿಮಾಗಳನ್ನು ಕೇರಳದಲ್ಲಿ ಪೃಥ್ವಿರಾಜ್ ಅವರು ವಿತರಣೆ ಮಾಡಿದ್ದರು. ಈ ಮೂಲಕ ಆ ಸಿನಿಮಾಗಳು ಹೆಚ್ಚಿನ ಪ್ರೇಕ್ಷಕರನ್ನು ತಲುಪುವಂತೆ ಮಾಡಿದ್ದರು. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಪೃಥ್ವಿರಾಜ್ ಅವರ ‘ಆಡುಜೀವಿತಂ’(ದಿ ಗೋಟ್ ಲೈಫ್) ಸಿನಿಮಾವನ್ನು ಕರ್ನಾಟಕದಲ್ಲಿ ನಾವು ವಿತರಣೆ ಮಾಡಿದ್ದೆವು. ಈ ಮೂಲಕ ಎರಡು ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆಗಳು ಜೊತೆ ಜೊತೆಯಾಗಿ ಹೆಜ್ಜೆ ಹಾಕಿದವು. ನಮ್ಮ ‘ಸಲಾರ್’ ಸರಣಿಯಲ್ಲೂ ಪೃಥ್ವಿರಾಜ್ ನಟಿಸಿದ್ದರು. ‘ಎಲ್–2: ಎಂಪುರಾನ್’ ಸಿನಿಮಾವನ್ನು ಕರ್ನಾಟಕದಲ್ಲಿ ಕನ್ನಡ, ಮಲಯಾಳ, ಹಿಂದಿ, ತೆಲುಗು ಹಾಗೂ ತಮಿಳು ಹೀಗೆ ಐದು ಭಾಷೆಗಳಲ್ಲಿ ವಿತರಣೆ ಮಾಡಲಿದ್ದೇವೆ’ ಎಂದು ಹೊಂಬಾಳೆ ತಿಳಿಸಿದೆ.
ಈ ಸಿನಿಮಾವನ್ನು ‘ಪೊನ್ನಿಯನ್ ಸೆಲ್ವನ್’ ಸರಣಿ, ‘ವೇಟ್ಟಯನ್’ ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಲೈಕಾ ಪ್ರೊಡಕ್ಷನ್ಸ್ ಮತ್ತು ಆಶೀರ್ವಾದ್ ಸಿನಿಮಾಸ್ ಪ್ರೈ.ಲಿ. ನಿರ್ಮಾಣ ಮಾಡುತ್ತಿದೆ. ಈ ಮೂಲಕ ಮಲಯಾಳ ಚಿತ್ರರಂಗಕ್ಕೂ ಲೈಕಾ ಪ್ರೊಡಕ್ಷನ್ಸ್ ಹೆಜ್ಜೆ ಇಟ್ಟಿದೆ. ‘ಸ್ಟೀಫನ್ ನೆಡುಂಪಲ್ಲಿ’ ಪಾತ್ರದಲ್ಲಿ ಮೋಹನ್‌ಲಾಲ್ ಅಬ್ಬರಿಸಿದ್ದು, ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್ ಮತ್ತು ಬೈಜು ಸಂತೋಷ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಮುರಳಿ ಗೋಪಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಿನಿಮಾ ಮಲಯಾಳ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಟ್ರೇಲರ್ ವೀಕ್ಷಿಸಿದ ರಜನಿಕಾಂತ್: ಇನ್ನು ಚಿತ್ರದ ಟ್ರೇಲರ್ ಅನ್ನು ಮೊದಲಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಪೃಥ್ವಿರಾಜ್ ತೋರಿಸಿದ್ದಾರೆ. ಟ್ರೇಲರ್ ನೋಡಿದ ರಜನಿಕಾಂತ್ ಪೃಥ್ವಿ ಅವರ ಬೆನ್ನುತಟ್ಟಿ ಕೊಂಡಾಡಿದ್ದಾರೆ. ರಜನಿಕಾಂತ್ ಮಾತುಗಳನ್ನು ಕೇಳಿ ಪೃಥ್ವಿರಾಜ್ ಓರ್ವ ಅಭಿಮಾನಿಯಾಗಿ ಖುಷಿಯಲ್ಲಿ ತೇಲಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.