ADVERTISEMENT

ಸೀರಿಯಲ್‌ ಹೀರೊನ ಅಭಿಮಾನಿಯ ಕಥೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:30 IST
Last Updated 6 ಜೂನ್ 2019, 19:30 IST
ದರ್ಶಿತ್ ಭಟ್‌
ದರ್ಶಿತ್ ಭಟ್‌   

ಸಿನಿಮಾ ಮಾಡಬೇಕು. ಸಿನಿಮಾದಲ್ಲಿ ಒಂದು ಕಥೆ ಇರಬೇಕು. ಆ ಕಥೆಯ ಕೇಂದ್ರದಲ್ಲಿ ನಾಯಕ ಹಾಗೂ ನಾಯಕಿ ಇರಬೇಕು.

–ಇದು ಸಿನಿಮಾ ಮಾಡುವಾಗ ಸಿನಿಮಂದಿಯ ಮನಸ್ಸಿನಲ್ಲಿ ಬರುವ ಸಾಮಾನ್ಯ ಆಲೋಚನೆ. ಆದರೆ, ನಿರ್ದೇಶಕ ಬಲವಳ್ಳಿ ದರ್ಶಿತ್ ಭಟ್ ಅವರು ತುಸು ಬೇರೆ ರೀತಿಯಲ್ಲಿ ಆಲೋಚನೆ ಮಾಡಿ ‘ಫ್ಯಾನ್’ ಎನ್ನುವ ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ಇದರ ಪೋಸ್ಟರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಅವರು ಬಿಡುಗಡೆ ಮಾಡಿದ್ದಾರೆ. ಅಂದಹಾಗೆ, ಚಿತ್ರ ಯಾವುದರ ಬಗ್ಗೆ ಗೊತ್ತಾ? ಒಂದು ಸೂಪರ್‌ಹಿಟ್‌ ಧಾರಾವಾಹಿಯ ನಾಯಕ ನಟ ಹಾಗೂ ಆತನನ್ನು ಸಿಕ್ಕಾಪಟ್ಟೆ ಇಷ್ಟಪಡುವ ಯುವತಿ ಈ ಕಥೆಯ ಕೇಂದ್ರಬಿಂದುವಿನಲ್ಲಿ ಇದ್ದಾರೆ.

‘ಕನ್ನಡದಲ್ಲಿ ಪ್ರತಿದಿನ ಏನಿಲ್ಲವೆಂದರೂ 50ರಿಂದ 60 ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಟಿ.ವಿ. ಮಾಧ್ಯಮಕ್ಕೆ ಇಂದು ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸೃಷ್ಟಿಯಾಗಿರುವುದಕ್ಕೆ ಕಾರಣ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳು. ಸಿನಿಮಾ ಹೀರೊಗಳಿಗೆ ಇರುವಷ್ಟೇ ಸಂಖ್ಯೆಯ ಅಭಿಮಾನಿಗಳು ಜನಪ್ರಿಯ ಧಾರಾವಾಹಿಗಳ ನಾಯಕ ನಟರಿಗೆ ಇರುತ್ತಾರೆ. ಎಷ್ಟೋ ಜನ ವೀಕ್ಷಕರು ತಮ್ಮ ವಾಟ್ಸ್‌ಆ್ಯಪ್‌ ಡಿ.ಪಿ.ಯಲ್ಲಿ ತಮ್ಮಿಷ್ಟದ ಧಾರಾವಾಹಿ ನಾಯಕ ನಟರ ಚಿತ್ರ ಹಾಕಿಕೊಂಡಿರುತ್ತಾರೆ. ಜನರಲ್ಲಿ ಇರುವ ಈ ಪ್ರೀತಿಯನ್ನೇ ಸಿನಿಮಾ ರೀತಿಯಲ್ಲಿ ತೋರಿಸಬೇಕು’ ಎನ್ನುವುದು ಸಿನಿಮಾ ತಂಡ ಲೆಕ್ಕಾಚಾರ.

ADVERTISEMENT

ಇಡೀ ಚಿತ್ರದ ಕಥೆಯ ನಿರೂಪಣೆ ಹಾಸ್ಯದ ನೆಲೆಯಲ್ಲಿ ಇರಲಿದೆಯಂತೆ. ಹಾಗಾಗಿ, ಈ ಸಿನಿಮಾ ನೋಡುವಾಗ ಒಂಚೂರೂ ಬೋರ್‌ ಆಗುವುದಿಲ್ಲ ಎನ್ನುವ ಭರವಸೆ ಚಿತ್ರತಂಡದ್ದು. ಇದರ ಚಿತ್ರೀಕರಣವು ಬೆಂಗಳೂರು, ಹೊನ್ನಾವರ, ಮುರ್ಡೇಶ್ವರ, ಕುಮಟಾದ ಸುತ್ತಮುತ್ತಾ ನಡೆಯಲಿದೆ.

‘ಸಿನಿಮಾ ಕುರಿತ ಇನ್ನಷ್ಟು ಮಾಹಿತಿಯನ್ನು ಸಿನಿಮಾ ಸಿದ್ಧವಾದ ನಂತರ ಹೇಳುತ್ತೇವೆ. ನಮ್ಮ ಸಿನಿಮಾ ಅದ್ಭುತವಾಗಿ ಇರುತ್ತದೆ ಎಂದು ಹೇಳುವುದಿಲ್ಲ. ಆದರೆ, ಇದರಲ್ಲಿ ಹೊಸತನ ಇರಲಿದೆ ಎನ್ನುವುದನ್ನು ಖಚಿತ ದನಿಯಲ್ಲಿ ಹೇಳುತ್ತೇವೆ’ ಎಂದರು ದರ್ಶಿತ್ ಭಟ್.

ಚಿತ್ರದ ನಾಯಕ ನಟ ತೊಟ್ಟಿರುವ ಟಿ-ಶರ್ಟ್‌ ಮೇಲೆ ಶಂಕರ್ ನಾಗ್ ಅವರ ಚಿತ್ರವಿದೆ. ಚಿತ್ರದ ಚಿತ್ರೀಕರಣ ಶಂಕರನಾಗ್ ಅವರ ಹುಟ್ಟೂರಿನಲ್ಲಿಯೂ ನಡೆಯಲಿದೆ.

ನಾಯಕ ನಟನ ಪಾತ್ರ ನಿಭಾಯಿಸಲಿರುವವರು ಆರ್ಯನ್. ‘ನಾನು ಇದರಲ್ಲಿ ಶಂಕರನಾಗ್ ಅಭಿಮಾನಿಯೂ ಹೌದು' ಎಂದರು ಆರ್ಯನ್.

ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ದರ್ಶಿತ್ ಭಟ್ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತದ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ವಿ. ಪವನ್ ಕುಮಾರ್ ಅವರದು. ಅದ್ವಿತಿ ಶೆಟ್ಟಿ ನಾಯಕಿಯಾಗಿ, ಸಮೀಕ್ಷಾ ಅವರು ಸೆಲೆಬ್ರಿಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.