ADVERTISEMENT

ಫರ್ಹಾನ್ ಅಖ್ತರ್ ಎಂಬ ಅಚ್ಚರಿ

ರಾಹುಲ ಬೆಳಗಲಿ
Published 3 ಡಿಸೆಂಬರ್ 2018, 19:45 IST
Last Updated 3 ಡಿಸೆಂಬರ್ 2018, 19:45 IST
ಫರ್ಹಾನ್ ಅಖ್ತರ್
ಫರ್ಹಾನ್ ಅಖ್ತರ್   

ಫರ್ಹಾನ್ ಅಖ್ತರ್. ಒಂದರ್ಥದಲ್ಲಿ ಬಂಡಲ್‌ ಆಫ್ ಎನರ್ಜಿ. ಸುಮ್ಮನೆ ಕೂರುವ ಜಾಯಮಾನವೇ ಇಲ್ಲ. ಸದಾ ಕ್ರಿಯಾಶೀಲ. ಅವರನ್ನು ಒಂದು ಫ್ರೇಮ್‌ನಲ್ಲಿ ಅಥವಾ ಸೀಮಿತ ಚೌಕಟ್ಟಿನಲ್ಲಿ ಕೂಡಿಡಲು ಆಗುವುದೇ ಇಲ್ಲ. ದಿನಕ್ಕೊಂದು ಪಾತ್ರ ಮತ್ತು ಜವಾಬ್ದಾರಿ ಹೊತ್ತು ಕಾಣಿಸಿಕೊಳ್ಳುವ ಉತ್ಸಾಹಿ ಕಲಾವಿದ.

ಚಿತ್ರವೊಂದನ್ನು ನಿರ್ದೇಶಿಸಿ ಪೂರ್ಣಗೊಳಿಸುವುದರೊಳಗೆ ಫರ್ಹಾನ್ ಮತ್ತೊಬ್ಬರ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕರು ಆಗಿರುತ್ತಾರೆ. ಅವರನ್ನು ಗಾಯಕರಾಗಿ ಅರಿತುಕೊಳ್ಳುವ ಹೊತ್ತಿಗೆ ಚಿತ್ರವೊಂದರಲ್ಲಿ ನಾಯಕನಟರಾಗಿ ಮಿಂಚಿರುತ್ತಾರೆ. ಹಿರಿತೆರೆಗೆ ಮಾತ್ರ ಅವರು ಸೀಮಿತರು ಎಂಬ ಭಾವ ಮೂಡುವುದರೊಳಗೆ ಕಿರುತೆರೆಯಲ್ಲಿ ನಿರೂಪಕರಾಗಿ ಕಂಡಿರುತ್ತಾರೆ. ಬಾಲಿವುಡ್‌ನಲ್ಲಿ ಕುತೂಹಲ ಮೂಡಿಸುವುದರೊಳಗೆ ಹಾಲಿವುಡ್‌ನೊಳಗೆ ಹೆಜ್ಜೆ ಇಟ್ಟಿರುತ್ತಾರೆ.

ಗೀತ ರಚನೆಕಾರ, ಕವಿ ಜಾವೇದ್ ಅಖ್ತರ್ ಮತ್ತು ಹನಿ ಇರಾನಿ ಪುತ್ರ ಫರ್ಹಾನ್ ಬೆಳೆದಿದ್ದೇ ಹೀಗೆ. ಮನೆಯಲ್ಲಿದ್ದರೂ ಸಿನಿಮಾದ್ದೇ ಮಾತು, ಹೊರಬಂದರೂ ಚಿತ್ರರಂಗದವರೇ ಪರಿಚಿತರು, ಆಪ್ತರು. ಚಿತ್ರರಂಗದ ಕುಟುಂಬದ ಹಿನ್ನೆಲೆಯಿಂದ ಬಂದು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡವರ ಜೊತೆಗೆ ಹೋಲಿಸಿದರೆ ಅವರು ಕೊಂಚ ಭಿನ್ನವಾಗಿ ಕಾಣುತ್ತಾರೆ.

ADVERTISEMENT

ಬಹುತೇಕ ಮಂದಿ ನಟನೆ, ಛಾಯಾಗ್ರಹಣ, ಸಾಹಸ ಅಥವಾ ಆಯಾ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳ್ಳುತ್ತಾರೆ. ಒಂದೇ ಕ್ಷೇತ್ರದಲ್ಲಿ ಪರಿಣತಿ ಸಾಧಿಸುತ್ತಾರೆ. ಆದರೆ ಫರ್ಹಾನ್‌ ಹಾಗಲ್ಲ, ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಬಹುತೇಕ ಎಲ್ಲಾ ಪಾತ್ರಗಳನ್ನು ನಿಭಾಯಿಸುತ್ತಾರೆ. ಆಯಾ ಕ್ಷೇತ್ರದಲ್ಲಿ ಸಾಧಿಸುವವರೆಗೆ ಗುರಿಯಿಂದ ವಿಮುಖರಾಗುವುದಿಲ್ಲ.

ಫರ್ಹಾನ್ ನಿನ್ನೆ-ಮೊನ್ನೆ ಬಂದವರಲ್ಲ. ಅವರಿಗೆ ಚಿತ್ರರಂಗದಲ್ಲಿ ದುಡಿದ 27 ವರ್ಷಗಳ ಅನುಭವವಿದೆ. ಅವರು 17ನೇ ವಯಸ್ಸಿನಲ್ಲೇ ’ಲಮ್ಹೆ‘ (1991) ಚಿತ್ರಕ್ಕೆ ಸಹನಿರ್ದೇಶಕರಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದರು. 1997ರಲ್ಲಿ ತೆರೆ ಕಂಡ ’ಹಿಮಾಲಯ್ ಪುತ್ರ‘ ಚಿತ್ರಕ್ಕೂ ಸಹನಿರ್ದೇಶಕರಾಗಿ ಶ್ರಮಿಸಿದ ಅವರು ಕ್ರಮೇಣ ಗೆಳೆಯ ರಿತೇಶ್ ಸಿದ್ವಾಣಿ ಜೊತೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ ಎಂಬ ಪ್ರೊಡಕ್ಷನ್ ಕಂಪನಿ ಆರಂಭಿಸಿದರು.

ಅಮೀರ್ ಖಾನ್ ಅಭಿನಯದ ದಿಲ್ ಚಾಹತಾ ಹೈ (2001) ನಿರ್ದೇಶಿಸಿದ ಅವರು 2004ರಲ್ಲಿ ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಜೋಡಿಯ ಲಕ್ಷ್ಯ (2004) ನಿರ್ದೇಶಿಸಿದರು. ಮೊದಲನೇ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಪಡೆದರೆ, ಎರಡನೇ ಚಿತ್ರವು ಎಲ್ಲರ ಗಮನ ಸೆಳೆಯಿತು. ಶಾರೂಖ್ ಖಾನ್ ಅಭಿನಯದ ಡಾನ್ ಮತ್ತು ಡಾನ್‌ 2 ನಿರ್ದೇಶಿಸಿದ ಸಾಮಾಜಿಕ ಕಳಕಳಿಯೊಂದಿಗೆ ಎಚ್ಐವಿ ಏಡ್ಸ್ ಕುರಿತು ಜಾಗೃತಿ ಮೂಡಿಸಲು ’ಪಾಸಿಟಿವ್‘ ಕಿರುಚಿತ್ರ ಹೊರತಂದರು.

ನಟನೆಯಲ್ಲೂ ಕಡಿಮೆಯಿಲ್ಲ ಎಂಬ ಆತ್ಮವಿಶ್ವಾಸದೊಂದಿಗೆ ಅವರು ರಾಕ್ ಆನ್ (2008) ಚಿತ್ರದಲ್ಲಿ ನಾಯಕನಟರಾಗಿ ಕಾಣಿಸಿಕೊಂಡರು. ಯುವಕರ ಜೀವನಶೈಲಿ ಮತ್ತು ಸಂದೇಶ ಹೊತ್ತ ’ಜಿಂದಗಿ ನಾ ಮಿಲೇಗಿ ದೊಬರಾ' ನಿರ್ಮಿಸಿದ ಅವರು ಫಿಲಂಫೇರ್ ಪ್ರಶಸ್ತಿಗೆ ಪುರಸ್ಕೃತರಾದರು.

ಖ್ಯಾತ ಓಟಗಾರ ಮಿಲ್ಖಾ ಸಿಂಗ್ ಚಿತ್ರಕ್ಕೆ ಆಫರ್ ಬಂದಾಗ, ಅವರು ಹಿಂದೆ–ಮುಂದೆ ನೋಡಲಿಲ್ಲ. ಮಿಲ್ಖಾ ಸಿಂಗ್ ಪಾತ್ರ ನಿರ್ವಹಿಸಲು ಒಪ್ಪಿದ್ದು ಅಲ್ಲದೇ ಅದಕ್ಕಾಗಿ ತಮ್ಮ ಮೈಕಟ್ಟು ಸಹ ಬದಲಾಯಿಸಿಕೊಂಡರು. ಒಬ್ಬ ಓಟಗಾರನಂತೆಯೇ ವ್ಯಾಯಾಮ, ಓಟ, ದೈಹಿಕ ದೃಢತೆ ಕಾಯ್ದುಕೊಂಡರು. ನೈಜ ಕ್ರೀಡಾಪಟು ಎಂಬಂತೆ ಕಾಣಿಸಿಕೊಂಡರು. ಈ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಅವರಿಗೆ ಫಿಲಂಫೇರ್‌ ಪ್ರಶಸ್ತಿ ದೊರೆಯಿತು.

ಇತ್ತೀಚೆಗೆ ಅವರ ಅಭಿನಯದ ‘ವಜೀರ್‘ ಮತ್ತು ‘ದಿಲ್ ದಢಕನೇ ದೊ‘ ಕೂಡ ಎಲ್ಲರ ಗಮನ ಸೆಳೆಯಿತು. 2019ರಲ್ಲಿ ತೆರೆ ಕಾಣಲಿರುವ ‘ದಿ ಸ್ಕೈ ಇಸ್‌ ಪಿಂಕ್‘ ಚಿತ್ರದಲ್ಲೂ ಪ್ರಮುಖ ಪಾತ್ರವಿದೆ. ಶೋನಾಲಿ ಬೋಸ್ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಅವರು ಜಹೀರಾ ವಾಸೀಮ್ ಮತ್ತು ಪ್ರಿಯಾಂಕಾ ಚೋಪ್ರಾ ಜೊತೆ ಅಭಿನಯಿಸಿದ್ದಾರೆ.

2012ರಲ್ಲೇ ‘ಮರ್ದ್‌‘ ಅಭಿಯಾನ

’ಮೀ ಟೂ’ ಅಭಿಯಾನ ಇತ್ತೀಚೆಗೆ ಹೆಚ್ಚು ಪ್ರಚಲಿತಕ್ಕೆ ಬಂದಿದ್ದು, ಈ ವಿಷಯದ ಕುರಿತಾಗಿ ಬಹುತೇಕ ಮಂದಿ ಎಚ್ಚೆತ್ತುಕೊಂಡಿದ್ದಾರೆ. ಇಂತಹದ್ದಕ್ಕೆ ಪೂರಕ ಎಂಬಂತೆ ಫರ್ಹಾನ್ ಅಖ್ತರ್ 2012ರಲ್ಲೇ ’ಮರ್ದ್‘ ಎಂಬ ಅಭಿಯಾನ್ ಕೈಗೊಂಡರು.

ಮೆನ್‌ ಅಗೇನ್ಸ್ಟ್ ರೇ‍‍ಪ್ ಅಂಡ್ ಡಿಸ್ಕ್ರಿಮಿನೇಷನ್ (ಮರ್ದ್‌) ಎಂಬ ಹೆಸರಿನಲ್ಲಿ ದೇಶವ್ಯಾಪಿ ಅವರು ಜಾಗೃತಿ ಅಭಿಯಾನ ಕೈಗೊಂಡರು. ಮಹಿಳೆಯರಿಗೆ ರಕ್ಷಣೆ ಒದಗಿಸುವ ಮತ್ತು ಪುರುಷರಲ್ಲಿ ಜಾಗೃತಿ ಪ್ರಜ್ಞೆ ಮೂಡಿಸುವ ಕಾರ್ಯದಲ್ಲಿ ನಿರತರಾದರು.

ವಕೀಲೆ ಪಲ್ಲವಿ ಎಂಬುವರು ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ಹಿನ್ನೆಲೆಯಲ್ಲಿ ತೀವ್ರ ಆಘಾತಕ್ಕೆ ಒಳಗಾದ ಫರ್ಹಾನ್ ನೂತನ ಅಭಿಯಾನ ಕೈಗೊಂಡರು.

‘ಕೆಜಿಎಫ್‌‘ ಗೆ ವಿತರಣೆಕಾರ

ನಟ ಯಶ್ ಅಭಿನಯದ ’ಕೆಜಿಎಫ್‘ ಚಿತ್ರಕ್ಕೆ ಫರ್ಹಾನ್ ಇದೇ ಮೊದಲ ಬಾರಿಗೆ ವಿತರಕರಾಗಿ ಜವಾಬ್ದಾರಿ ವಹಿಸಲಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಚಿತ್ರಕ್ಕೆ ಅವರೇ ದೇಶವ್ಯಾಪಿ ವಿತರಕರು. ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಅವರು ಈಗಾಗಲೇ ’ಕೆಜಿಎಫ್‌‘ ಕುರಿತು ವ್ಯಾಪಕವಾಗಿ ಪ್ರಚಾರವೂ ನಡೆಸಿದ್ದಾರೆ. ಈ ಚಿತ್ರವು ಡಿಸೆಂಬರ್ 21ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.