ADVERTISEMENT

ಜಿಮ್‌ಗೆ ಹೋದರೆ ನಟನಾಗುವುದಿಲ್ಲ: ಪ್ರಕಾಶ್‌ ರಾಜ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 23:30 IST
Last Updated 12 ಜುಲೈ 2024, 23:30 IST
<div class="paragraphs"><p>ಪ್ರಕಾಶ್‌ ರಾಜ್‌</p></div>

ಪ್ರಕಾಶ್‌ ರಾಜ್‌

   

‘ಆರ್‌.ಸಿ. ಸ್ಟುಡಿಯೊಸ್‌’ನಲ್ಲಿ ನಿರ್ದೇಶಕ ಆರ್‌.ಚಂದ್ರು ನಿರ್ಮಾಣ ಮಾಡುತ್ತಿರುವ ‘ಫಾದರ್‌’ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಮೊದಲ ಹಂತದ ಚಿತ್ರೀಕರಣದ ವೇಳೆ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು. 

‘ಈ ಚಿತ್ರದಲ್ಲಿ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಮಾತು ಆರಂಭಿಸಿದ
ಆರ್‌.ಚಂದ್ರು, ‘ಫಾದರ್‌ ಚಿತ್ರಕ್ಕೆ ಪ್ರಕಾಶ್‌ ರಾಜ್‌ ಅವರು ಆಧಾರಸ್ತಂಭ. ಗಟ್ಟಿಯಾದ ಕಥೆ ಸಿನಿಮಾದಲ್ಲಿದೆ. ಭಾವನೆಗಳು, ಲವಲವಿಕೆ ಈ ಚಿತ್ರದಲ್ಲಿದ್ದು ಅಪ್ಪ–ಮಗನ ಬಾಂಧವ್ಯಕ್ಕೆ ಇದೊಂದು ಉದಾಹರಣೆಯಾಗಲಿದೆ. ಚಿತ್ರದ ನಿರ್ದೇಶಕ ರಾಜ್‌ಮೋಹನ್‌ ಅವರಿಗೆ ಸಹಾಯಕ ನಿರ್ದೇಶಕನಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಇದು ‘ಫಾದರ್‌’ ಮೇಲೆ ಇರುವ ನಂಬಿಕೆ’ ಎಂದರು. 

ADVERTISEMENT

‘ಕಬ್ಜ’ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ. ಆ ಬೇಜಾರು ಚಂದ್ರು ಅವರಿಗೆ ಇನ್ನೂ ಇದೆ. ರಾಜ್‌ಮೋಹನ್‌ ಹೇಳಿದ ‘ಫಾದರ್‌’ ಕಥೆ ಮನಸ್ಸಿಗೆ ಬಹಳ ಹತ್ತಿರವಾಯಿತು. ತಂದೆ–ಮಗನ ಬಾಂಧವ್ಯದ ಕಥೆಯಾದರೂ ಅದನ್ನು ಕಟ್ಟಿರುವ ರೀತಿ, ಅದರೊಳಗಿನ ಪರಿಸ್ಥಿತಿ ಭಿನ್ನವಾಗಿತ್ತು. ಇವತ್ತಿನ ಯುವಕರು–ತಂದೆಯಂದಿರ ಕಥೆಯಿದು. ಒಳ್ಳೆಯ ಅಭಿರುಚಿಯ ಕಥೆ. ಆರ್‌.ಚಂದ್ರು ನಿರ್ಮಾಣ ಮಾಡುತ್ತಿರುವ ಐದೂ ಸಿನಿಮಾಗಳಲ್ಲಿ ಒಂದೊಂದು ಅಭಿರುಚಿ ಕಾಣಿಸುತ್ತಿವೆ. ಈ ರೀತಿಯ ಉತ್ಸಾಹ, ಪ್ರೋತ್ಸಾಹ ಸಿನಿಮಾ ಇಂಡಸ್ಟ್ರಿಗೆ ಬೇಕಾಗಿದೆ. ಪ್ರೇಕ್ಷಕರು ಇಂತಹ ಪ್ರಯತ್ನಗಳ ಬೆನ್ನಿಗೆ ನಿಲ್ಲಬೇಕು. ಜಿಮ್‌ಗೆ ಹೋಗಿ ನಟ ಆಗಿಬಿಡುತ್ತೇನೆ ಎಂದರೆ ಆಗುವುದಿಲ್ಲ. ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ, ಕಥೆಯ ಪ್ರಕಾರಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರೂ ಗೆಲ್ಲಲೇಬೇಕು ಎಂಬ ಒತ್ತಡದ ಸ್ಥಿತಿ ತಂದಿದ್ದೇವೆ. ಸೋಲುವ ಸಂತೋಷ ಏಕೆ ಕೊಟ್ಟಿಲ್ಲ? ನೋಡುಗನಿಗೂ ತಾಳ್ಮೆ ಇಲ್ಲದಂತಾಗಿದೆ’ ಎಂದು ಚಿತ್ರರಂಗದ ಈಗಿನ ಸ್ಥಿತಿಯ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದರು ಪ್ರಕಾಶ್‌ ರಾಜ್‌.      

ಡಾರ್ಲಿಂಗ್‌ ಕೃಷ್ಣ ಮಾತನಾಡಿ, ‘ಇದು ಮಿಲನಾ ಇಷ್ಟಪಟ್ಟ ಕಥೆ. ಪ್ರಕಾಶ್‌ ರಾಜ್‌ ಅವರ ಜೊತೆ ತೆರೆ ಹಂಚಿಕೊಳ್ಳುವಾಗ ಒಂದು ಸಣ್ಣ ಭಯ ಇತ್ತು. ಅದನ್ನು ತೋರಿಸಿಕೊಳ್ಳಲಿಲ್ಲ. ಆ ಭಯ ಇನ್ನೂ ಇದೆ ಎನ್ನಬಹುದು. ಅವರ ನಟನೆಯನ್ನು ನೋಡಿ ಮೈಮರೆತಿದ್ದೂ ಇದೆ. ಭಾವನಾತ್ಮಕ ಕಥಾಹಂದರವುಳ್ಳ ಈ ಸಿನಿಮಾ ಪ್ರೇಕ್ಷಕರಿಗೆ ಹತ್ತಿರವಾಗಲಿದೆ. ಹತ್ತು ದಿನದ ಚಿತ್ರೀಕರಣ ಪೂರ್ಣಗೊಂಡಿದ್ದು, ಒಂದೊಳ್ಳೆಯ ಸಿನಿಮಾವನ್ನು ತೆರೆಗೆ ತರಲಿದ್ದೇವೆ’ ಎಂದರು.

ಪ್ರಕಾಶ್‌ ರಾಜ್‌ ಅವರ ಸಿನಿಮಾಗಳನ್ನು ನೋಡಿ ಬೆಳೆದವರು ನಾವು. ಅವರ ಜೊತೆ ಸ್ಕ್ರೀನ್‌ ಸ್ಪೇಸ್‌ ಹಂಚಿಕೊಳ್ಳುವ ಆಸೆ ಇತ್ತು. ಅದು ಈಡೇರಿದೆ. ಲವ್‌ ಮಾಕ್ಟೇಲ್‌ ಬಳಿಕ ಡಾರ್ಲಿಂಗ್‌ ಕೃಷ್ಣ ಅವರ ಜೊತೆ ಎರಡನೇ ಸಿನಿಮಾ ಇದು. ಸಿನಿಮಾದ ಕಥೆ ಭಿನ್ನವಾಗಿದ್ದು, ಎಲ್ಲರ ಮನಸ್ಸು ಮುಟ್ಟಲಿದೆ.
–ಅಮೃತಾ ಅಯ್ಯಂಗಾರ್‌ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.