ADVERTISEMENT

ಕನ್ನಡದ ಗಿರಿ, ಎಪ್ಪತ್ತರ ಸಿರಿ

ಚ.ಹ.ರಘುನಾಥ
Published 8 ಡಿಸೆಂಬರ್ 2019, 8:43 IST
Last Updated 8 ಡಿಸೆಂಬರ್ 2019, 8:43 IST
ಗಿರೀಶ ಕಾಸರವಳ್ಳಿ
ಗಿರೀಶ ಕಾಸರವಳ್ಳಿ   

ಶೃಂಗೇರಿ–ತೀರ್ಥಹಳ್ಳಿಯ ನಡುವಣ ಒಂಟಿಮನೆಯ ಊರು ಕಾಸರವಳ್ಳಿಯ ಗಿರೀಶರು (ಜ: ಡಿ. 3, 1950), ಜಾಗತಿಕ ಸಿನಿಮಾ ನಕಾಶೆಯಲ್ಲಿ ಕನ್ನಡದ ಬಿಂಬಗಳನ್ನು ಮೂಡಿಸಿರುವ ವಿಶಿಷ್ಟ ಸಾಧಕ. ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಪ್ರಮುಖ ಅಭಿವ್ಯಕ್ತಿಯಾಗಿ ಗುರ್ತಿಸಿಕೊಂಡಿರುವ ಅವರು, ತಮ್ಮ ಸಿನಿಮಾಗಳ ಮೂಲಕವೇ ಕನ್ನಡದ ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿರುವ ಪರಿ ಅನನ್ಯ. ದೀರ್ಘ ಬಿಡುವಿನ ನಂತರ ಅವರ ನಿರ್ದೇಶನದಲ್ಲಿ ಹೊಸ ಚಿತ್ರವೊಂದು ರೂಪುಗೊಂಡಿದೆ; ಅದು ಕಾಸರವಳ್ಳಿಯವರ ಎಪ್ಪತ್ತನೇ ಹುಟ್ಟುಹಬ್ಬದ ಸಂಭ್ರಮ ಹೆಚ್ಚಿಸುವಂತಿದೆ.

ಕಾಸರವಳ್ಳಿ ಅವರ ಹೆಸರಿನ ಪೂರ್ವಾರ್ಧದಲ್ಲಿ ಇರುವ ‘ಗಿರಿ’ (ಗಿರೀಶ) ಎನ್ನುವುದು ಹೆಸರಿಗಷ್ಟೇ ಸೀಮಿತವಾದ ಔಪಚಾರಿಕ ವಿಶೇಷಣವಲ್ಲ; ಅದವರ ವ್ಯಕ್ತಿತ್ವ–ಸಾಧನೆಗೂ ಅನ್ವರ್ಥವಾದುದು.

‘ನಮ್ಮದು ಬಾಲಿವುಡ್‌–ಹಾಲಿವುಡ್‌ಗೆ ಸರಿಸಮವಾದ ಸಿನಿಮಾ’ ಎಂದು ಗಾಂಧಿನಗರದ ವ್ಯಾಪಾರಿ ಸಿನಿಮಾಗಳ ಮಂದಿ ಆಗಾಗ ಕಾಲರ್‌ ಮೇಲೇರಿಸುವುದಿದೆ. ಈ ಮಾತುಗಳನ್ನು ನೆಚ್ಚಿಕೊಂಡು, ರಾಷ್ಟ್ರೀಯಮಟ್ಟದಲ್ಲಿ ಕನ್ನಡದ ಬಾವುಟವನ್ನು ಏರಿಸಿ ಹಾರಿಸಿರುವವರು ಯಾರು ಯಾರು ಎಂದು ಹುಡುಕಿದರೆ ಅಲ್ಲಿ ಮುಂಚೂಣಿಯಲ್ಲಿ ಕಾಣಿಸುವುದು ಎರಡೇ ಮುಖ; ಒಂದು ಮುಖ್ಯವಾಹಿನಿಯ ರಾಜ್‌ಕುಮಾರ್‌, ಮತ್ತೊಂದು ಕಲಾತ್ಮಕ ಪ್ರಕಾರದಲ್ಲಿನ ಗಿರೀಶ ಕಾಸರವಳ್ಳಿ. ಉಳಿದವರೆಲ್ಲ ಸೈಡ್‌ವಿಂಗ್‌ನಲ್ಲಿ ಮಿಂಚಿದ ಸಾಧಕರು.

ADVERTISEMENT

ಗಿರೀಶರ ಸಿನಿಮಾಗಳ ಶ್ರೇಷ್ಠತೆ ಮುಖ್ಯವಾಗಿ ಎರಡು ಬಗೆಯದು. ಒಂದು, ಸಿನಿಮಾ ವ್ಯಾಕರಣದ ಅನುಸಂಧಾನ. ಮತ್ತೊಂದು ಊರುಕೇರಿಯ ಕಥೆ ಹೇಳುತ್ತಲೇ ಜಾಗತಿಕ ಸಂಗತಿಗಳಿಗೆ ಪ್ರತಿಕ್ರಿಯಿಸುವುದು. ಈ ಪ್ರಾದೇಶಿಕ ಆವರಣವನ್ನು ಮತ್ತಷ್ಟು ಸೂಕ್ಷ್ಮವಾಗಿ ನೋಡಿದರೆ, ಕಾಸರವಳ್ಳಿ ಅವರು ತಮ್ಮ ಸಿನಿಮಾಗಳ ಮೂಲಕ ‘ಹಲವು ಕನ್ನಡಂ’ಗಳ ನಾಡಿಯನ್ನೇ ಹಿಡಿದಿಡಲು ‍ಪ್ರಯತ್ನಿಸಿದಂತಿದೆ. ಇದೊಂದು ಬಗೆಯಲ್ಲಿ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತಲೇ ಭಾರತೀಯವೂ ಜಾಗತಿಕವೂ ಆಗುವ ಸಿದ್ಧಿ. ಚೊಚ್ಚಿಲ ಕಲಾಕೃತಿ 1977ರ ‘ಘಟಶ್ರಾದ್ಧ’ದಿಂದ ಈಗ ಮುಕ್ತಾಯದ ಹಂತದಲ್ಲಿರುವ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಸಿನಿಮಾದವರೆಗೆ ಸುಮಾರು ನಾಲ್ಕೂವರೆ ದಶಕಗಳ ಸಿನಿಮಾ ಪಯಣದುದ್ದಕ್ಕೂ ಅವರು ಮಾಡಿರುವುದು ಕನ್ನಡವನ್ನು ಮಥಿಸುವ, ಕನ್ನಡದ ವಿವೇಕವನ್ನು ಅರ್ಥೈಸುವ ಹಾಗೂ ಕನ್ನಡದ ಮೂಲಕವೇ ಸಮಕಾಲೀನ ಜಗತ್ತಿನ ತವಕತಲ್ಲಣಗಳಿಗೆ ಮುಖಾಮುಖಿಯಾಗುವ ಪ್ರಯತ್ನ.

‘ಘಟಶ್ರಾದ್ಧ’, ‘ತಬರನ ಕತೆ’, ‘ತಾಯಿಸಾಹೇಬ’ ಹಾಗೂ ‘ದ್ವೀಪ’ ಚಿತ್ರಗಳಿಗೆ ಸ್ವರ್ಣಕಮಲ ಪುರಸ್ಕಾರ ಪಡೆದ ಸಾಧನೆ ಅವರದು. ಈ ಸ್ವರ್ಣಪ್ರಭೆಯ ಸಿನಿಮಾಗಳು ಸೇರಿದಂತೆ ಗಿರೀಶರ ಎಲ್ಲ ಸಿನಿಮಾಗಳು ಕನ್ನಡ ಸಾಹಿತ್ಯ–ಸಂಸ್ಕೃತಿಯೊಂದಿಗೆ ನಡೆಸಿದ ಅನುಸಂಧಾನದ ಪ್ರಯತ್ನಗಳೇ ಆಗಿವೆ. ಸಿನಿಮಾ ಮೂಲಕ ಕನ್ನಡದ ಬದುಕು ಹಾಗೂ ನುಡಿಗಟ್ಟನ್ನು ಕಾಸರವಳ್ಳಿಯವರಷ್ಟು ‍ಪರಿಣಾಮಕಾರಿಯಾಗಿ ದಾಖಲಿಸಿದ ಮತ್ತೊಬ್ಬ ನಿರ್ದೇಶಕರಿಲ್ಲ.

ಸಿನಿಮಾದಾಚೆಗೂ ಅವರದು ಅಸಾಧಾರಣ ಸಾಧನೆ. ದೃಶ್ಯಮಾಧ್ಯಮದ ಕುರಿತ ತಮ್ಮ ಅನನ್ಯ ತಿಳಿವಳಿಕೆಯನ್ನು ಬಳಿ ಬಂದವರೆಲ್ಲರೊಂದಿಗೂ ಹಂಚಿಕೊಳ್ಳುವ ಪ್ರಾಂಜಲ ಮನಸ್ಸು ಅವರದು. ದೃಶ್ಯಮಾಧ್ಯಮದ ಸಾಧ್ಯತೆಗಳ ಬಗ್ಗೆ, ಜಾಗತಿಕ ಸಿನಿಮಾದ ಬಗ್ಗೆ, ಸಿನಿಮಾ ಭಾಷೆಯ ಬಗ್ಗೆ ಅವರಷ್ಟು ಅಧಿಕೃತವಾಗಿ ಮಾತನಾಡಬಲ್ಲವರು ಕನ್ನಡ ಸಂದರ್ಭದಲ್ಲಿ ತೀರಾ ವಿರಳ. ಕನ್ನಡ ಮಾತ್ರವಲ್ಲ – ಪ್ರಯೋಗಶೀಲ ಸಿನಿಮಾ ರೂಪುಗೊಳ್ಳುವ ಎಲ್ಲ ಭಾರತೀಯ ಭಾಷೆಗಳಲ್ಲೂ ಕಾಸರವಳ್ಳಿಯವರನ್ನು ದ್ರೋಣರೆಂದು ಭಾವಿಸುವ ಏಕಲವ್ಯರಿದ್ದಾರೆ. ಆ ಕಾರಣದಿಂದಲೇ ದೇಶದ ಯಾವ ಭಾಗದಲ್ಲಿ ಹೊಸಧ್ವನಿಯ ಚಿತ್ರವೊಂದು ರೂಪುಗೊಂಡರೂ, ಅದರ ಡಿವಿಡಿ ಕಾಸರವಳ್ಳಿ ಅವರ ವಿಳಾಸಕ್ಕೆ ಬರುತ್ತದೆ; ಇಲ್ಲಿಂದ ಅಲ್ಲಿಗೆ ಸಹೃದಯಿ ಪ್ರತಿಕ್ರಿಯೆ ರವಾನೆಯಾಗುತ್ತದೆ. ಬಹುಶಃ, ಕಲಾತ್ಮಕ ಚಿತ್ರಗಳ ವಲಯದಲ್ಲಿ ಕಾಸರವಳ್ಳಿಯವರಷ್ಟು ದೊಡ್ಡ ಅಭಿಮಾನಿಬಳಗ ಹೊಂದಿರುವ ಮತ್ತೊಬ್ಬ ನಿರ್ದೇಶಕ ಭಾರತೀಯ ಚಿತ್ರರಂಗದಲ್ಲಿರಲಿಕ್ಕಿಲ್ಲ.

ಸಮರ್ಥ ಸಾಹಿತಿಯೊಬ್ಬ ತನ್ನ ಬರವಣಿಗೆಯ ಮೂಲಕ ತನ್ನ ನೆಲ–ನುಡಿಯ ಅಸ್ಮಿತೆಯನ್ನು ರೂಪಕಗಳನ್ನಾಗಿಸುವ ಕೆಲಸವನ್ನೇ ಗಿರೀಶರು ತಮ್ಮ ಚಿತ್ರಗಳ ಮೂಲಕ ಮಾಡುತ್ತಾ ಬಂದಿದ್ದಾರೆ. ಆ ಕಾರಣದಿಂದಾಗಿಯೇ, ‘ಚಲನಚಿತ್ರ ನಿರ್ದೇಶಕ’ ಎಂದಷ್ಟೇ ಹೇಳಿದರೆ ಅದು ಕಾಸರವಳ್ಳಿಯವರ ವ್ಯಕ್ತಿತ್ವ–ಸಿದ್ಧಿಗೆ ಚೌಕಟ್ಟು ಹಾಕಿದಂತಾಗುತ್ತದೆ. ನಿಜ ಅರ್ಥದಲ್ಲಿ ಅವರೊಬ್ಬ ಸಾಂಸ್ಕೃತಿಕ ಮೀಮಾಂಸಕ, ಚಿಂತಕ; ಕನ್ನಡದ ವಿವೇಕ ಭಾರತಕ್ಕೆ ನೀಡಿದ ಅಪೂರ್ವ ಕೊಡುಗೆ.

ಬಹುತೇಕ ನಿರ್ದೇಶಕರು ತಾವು ಸೃಷ್ಟಿಸಿಕೊಂಡ ವ್ಯಾಕರಣದಿಂದ ಹೊರಬರಲಾಗದೆ ಹಳೆಯ ಕೃತಿಗಳನ್ನೇ ಮತ್ತೆ ಮತ್ತೆ ರೂಪಿಸುತ್ತಿರುತ್ತಾರೆ. ಇಂಥ ಪುನರಾವರ್ತನೆಯಿಂದ ಕಾಸರವಳ್ಳಿಯವರ ಸಿನಿಮಾಗಳು ದೂರ. ‘ಘಟಶ್ರಾದ್ಧ’, ‘ತಬರನ ಕತೆ’, ‘ಗುಲಾಬಿ ಟಾಕೀಸ್‌’, ‘ತಾಯಿಸಾಹೇಬ’, ‘ಹಸೀನಾ’, ‘ದ್ವೀಪ’, ‘ಕನಸೆಂಬೊ ಕುದುರೆಯನೇರಿ’, ‘ಕೂರ್ಮಾವತಾರ’ – ಒಂದೊಂದೂ ಒಂದೊಂದು ಜಗತ್ತು! ಸಾಂಪ್ರದಾಯಿಕ ವ್ಯಾಕರಣ–ಶೈಲಿಯನ್ನು ಬಿಟ್ಟುಕೊಡದೆ ಹೊಸ ಕಾಲದ ಸ್ಥಿತ್ಯಂತರಗಳಿಗೂ ಈ ವಯ್ಯಾಕರಣಿ ತಮ್ಮನ್ನೊಡ್ಡಿಕೊಂಡಿರುವುದಕ್ಕೆ ‘ದ್ವೀಪ’ದ ನಂತರದ ಸಿನಿಮಾಗಳನ್ನು ಗಮನಿಸಬಹುದು. ಸೋಕಿದ ಲೋಹಗಳನ್ನೆಲ್ಲ ಚಿನ್ನವಾಗಿರುವ ಪರುಷಮಣಿಯ ಶಕ್ತಿ ಕಾಸರವಳ್ಳಿಯವರದು. ಉಮಾಶ್ರೀ ಅವರನ್ನು ಗುಲಾಬಿಯಾಗಿಸಿ ಸ್ವರ್ಣಕಮಲ ಮುಡಿಸಿದ್ದು, ಕುಡುಕ–ಭಿಕ್ಷುಕ ಪಾತ್ರಗಳಿಗೆ ಸೀಮಿತವಾಗಿದ್ದ ವೈಜನಾಥ ಬಿರಾದಾರರನ್ನು ಈರ‍್ಯಾನ ‍ಪಾತ್ರದಲ್ಲಿ ಹೊಸ ಕುದುರೆಯೇರಿಸಿ ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿಸಿದ್ದು –ಇವೆಲ್ಲ ಗಿರೀಶರ ಕರ್ತತ್ವಶಕ್ತಿಗೆ ಉದಾಹರಣೆಗಳು. ಗಿರೀಶರ ಗರಡಿಯಲ್ಲಿ ಹೊಳಪು ಕಂಡವರಲ್ಲಿ ಪ್ರಸಿದ್ಧ ಅಭಿನೇತ್ರಿಯರಾದ ‘ತಾಯಿಸಾಹೇಬ’ದ ಜಯಮಾಲಾ ಹಾಗೂ ‘ದ್ವೀಪ’ದ ಸೌಂದರ್ಯ ಅವರನ್ನೂ ನೆನಪಿಸಿಕೊಳ್ಳಬಹುದು.

2002ರಿಂದ 12ರವರೆಗೆ ಕಾಸರವಳ್ಳಿಯವರು ಹೆಚ್ಚು ಸಕ್ರಿಯರಾಗಿದ್ದ ಅವಧಿ. ಈ ಹತ್ತು ವರ್ಷಗಳ ಸಮಯದಲ್ಲಿ ಆರು ಸಿನಿಮಾಗಳನ್ನು ರೂಪಿಸಿದ್ದ ಅವರು, ‘ಕೂರ್ಮಾವತಾರ’ದ ನಂತರ ತಾವೂ ಚಿಪ್ಪಿನೊಳಗೆ ಸೇರಿಕೊಂಡರು. ಬಹುಶಃ, ಅರ್ಥಪೂರ್ಣ ಸಿನಿಮಾಗಳಿಗೆ ಇದು ಕಾಲವಲ್ಲ ಎಂದವರಿಗೆ ಅನ್ನಿಸಿತೇನೋ? ಕಾಸರವಳ್ಳಿಯವರ ಮೌನಕ್ಕೂ ಇತ್ತೀಚಿನ ವರ್ಷಗಳಲ್ಲಿ ಕಲಾತ್ಮಕ ಚಿತ್ರಗಳ ಸೃಜನಶೀಲರನ್ನು ಉದ್ದೇಶಪೂರ್ವಕವಾಗಿ ಹಿನ್ನೆಲೆಗೆ ಸರಿಸುವ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೂ ಸಂಬಂಧವಿಲ್ಲ ಎಂದು ಹೇಳುವುದು ಕಷ್ಟ. ಈ ಬೆಳವಣಿಗೆಯಿಂದಲೋ ಏನೋ ಕೊಂಚ ಮಂಕಾದಂತಿದ್ದ ಕಾಸರವಳ್ಳಿ ಸಿನಿಮಾ ನಿರ್ದೇಶನದಿಂದ ದೂರವುಳಿದಿದ್ದರು. ಈ ವಿರಾಗದಿಂದ ಲಾಭವಾದುದು ಸಾಕ್ಷ್ಯಚಿತ್ರ ಕ್ಷೇತ್ರಕ್ಕೆ. ಯು.ಆರ್‌. ಅನಂತಮೂರ್ತಿ ಹಾಗೂ ಅಡೂರು ಗೋಪಾಲಕೃಷ್ಣನ್‌ರ ಕುರಿತು ಗಿರೀಶರು ಸಾಕ್ಷ್ಯಚಿತ್ರ ರೂಪಿಸಿದರು. ‘ಅನಂತಮೂರ್ತಿ –ನಾಟ್‌ ಎ ಬಯಾಗ್ರಫಿ... ಬಟ್‌ ಎ ಹೈಪೊಥೀಸಿಸ್’ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ದೊರೆಯಿತು. ಆದರೆ, ರಸಿಕನೊಬ್ಬ ಎಷ್ಟು ಕಾಲ ಮೋಹನಮುರಲಿಯ ಕರೆಗೆ ಓಗೊಡದೆ ಸುಮ್ಮನಿರಲು ಸಾಧ್ಯ? ಏಳೆಂಟು ವರ್ಷಗಳ ಅಂತರದ ನಂತರ, ಜಯಂತ ಕಾಯ್ಕಿಣಿಯವರ ‘ಹಾಲಿನ ಮೀಸೆ’ ಕಥೆಯ ನೆ‍ಪದಲ್ಲಿ, ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಹೆಸರಲ್ಲಿ ಗಿರೀಶರು ಮತ್ತೆ ಸಿನಿಮಾ ಮಂತ್ರದಂಡ ಕೈಗೆತ್ತಿಕೊಂಡಿದ್ದಾರೆ. ಇದು, ಸಿನಿಮಾಪ್ರಿಯರು ಕಣ್ಣರಳಿಸುವ ಸಮಯ. ಎಪ್ಪತ್ತರ ವಯಸ್ಸಿನಲ್ಲವರು ತಮ್ಮನ್ನು ತಾವು ತೆತ್ತುಕೊಂಡಿರುವ ಸ್ವಪ್ನ ‘ಸುವರ್ಣ ಸ್ವಪ್ನ’ವಾಗಲಿ ಎನ್ನುವುದು ಸಿನಿಮಾಪ್ರಿಯರ ನಿರೀಕ್ಷೆ. ಎಪ್ಪತ್ತರ ಏರಿನಲ್ಲೊಮ್ಮೆ ಗಿರೀಶ ಕಾಸರವಳ್ಳಿ ಅವರು ಹಿಂತಿರುಗಿ ನೋಡಬೇಕೆನ್ನುವುದು ಸಹೃದಯರ ಅಪೇಕ್ಷೆ. ಆ ಹಿನ್ನೋಟ ಸಾಧ್ಯವಾದಲ್ಲಿ, ಕನ್ನಡದ ಓದುಗರಿಗೊಂದು ವಿಶಿಷ್ಟ ಆತ್ಮಕಥನ ದೊರಕೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.