ADVERTISEMENT

ಎರಡು ಭಾಷೆಗಳಲ್ಲಿ ಬರಲಿರುವ ‘ಸತ್ಯಂ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಸಂತೋಷ್ ಬಾಲರಾಜ್, ರಂಜನಿ ರಾಘವನ್‌
ಸಂತೋಷ್ ಬಾಲರಾಜ್, ರಂಜನಿ ರಾಘವನ್‌   

‘ಕರಿಯ 2’, ‘ಗಣಪ’ ಮೊದಲಾದ ಮಾಸ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ನಟ ಸಂತೋಷ್ ಬಾಲರಾಜ್ ನಟನೆಯ ‘ಸತ್ಯಂ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟಿ ರಂಜನಿ ರಾಘವನ್‌ ಚಿತ್ರದಲ್ಲಿ ಸಂತೋಷ್‌ಗೆ ಜೋಡಿಯಾಗಿದ್ದಾರೆ. 

‘2019ರಿಂದ ಪ್ರಾರಂಭವಾದ ಪಯಣವಿದು. ನಾವು ಅಂದುಕೊಂಡಂತೆ ಸಿನಿಮಾ ಬರಬೇಕಿತ್ತು. ಅದಕ್ಕಾಗಿ ಸ್ವಲ್ಪ ತಡವಾಯಿತು. ಚಿತ್ರದ ಎಲ್ಲ ಕೆಲಸಗಳೂ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲಿ ಬಿಡುಗಡೆಗೆ ಆಲೋಚಿಸಿದ್ದೇವೆ. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ಮಾಪಕ ಮಹಂತೇಶ್ ವಿಕೆ. 

‘ನನ್ನ ತಂದೆ ಆನೇಕಲ್‌ ಬಾಲರಾಜ್‌ ಬದುಕಿದ್ದಾಗ ಈ ಕಥೆಯನ್ನು ಇಷ್ಟಪಟ್ಟು ಸಿನಿಮಾಗೆ ಒಪ್ಪಿಗೆ ನೀಡಿದ್ದರು. ಆದರೆ ಈಗ ಚಿತ್ರ ನೋಡಲು ಅವರಿಲ್ಲ ಎಂಬ ಬೇಸರವಿದೆ. ಒಂದು ಕುಟುಂಬ ಕುಳಿತು ನೋಡಲು ಬೇಕಾದ ಎಲ್ಲ ಅಂಶಗಳನ್ನು ಹೊಂದಿರುವ ಚಿತ್ರ. ತಂದೆ ಕಟ್ಟಿರುವ ನಿರ್ಮಾಣ ಸಂಸ್ಥೆಯನ್ನು ಮುಂದುವರಿಸುತ್ತಿದ್ದು, ಸಂಸ್ಥೆಯಿಂದ ಮತ್ತೆರಡು ಸಿನಿಮಾಗಳು ಸಿದ್ಧವಾಗುತ್ತಿವೆ’ ಎಂದು ಚಿತ್ರದ ನಾಯಕ ಸಂತೋಷ್ ಬಾಲರಾಜ್  ತಿಳಿಸಿದರು. 

ADVERTISEMENT

ಅಶೋಕ್ ಕಡಬ ನಿರ್ದೇಶನದ ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಸಿನಿಟೆಕ್‌ ಸೂರಿ ಛಾಯಾಗ್ರಹಣವಿದೆ. ‘ತುಳುನಾಡಿನ ದೈವಾರಾಧನೆ ಜೊತೆಗೆ ಎರಡು ತಲೆಮಾರಿನ ಕಥೆ ಹೊಂದಿರುವ ಚಿತ್ರ ಇದು. ಕಥೆ ಕೇಳಿದಾಗಲೇ ಬಹಳ ಇಷ್ಟವಾಗಿತ್ತು. ನಾಯಕಿಯದ್ದು ಕಥೆಗೆ ತಿರುವು ನೀಡುವ ಪಾತ್ರ’ ಎಂದರು ಚಿತ್ರದ ನಾಯಕಿ ರಂಜನಿ ರಾಘವನ್‌.

ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಸಾದ್‌, ತೆಲುಗು ನಟ ಸುಮನ್‌, ಅವಿನಾಶ್, ಸಯ್ಯಾಜಿ ಶಿಂಧೆ ಮೊದಲಾದವರು ತಾರಾಗಣದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.