ADVERTISEMENT

ಶೀಘ್ರದಲ್ಲಿ ಸೆಟ್ಟೇರಲಿದೆ ಶಿವಣ್ಣ ಹೊಸ ಸಿನಿಮಾ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:13 IST
Last Updated 24 ಜುಲೈ 2024, 16:13 IST
ಶಿವರಾಜ್‌ಕುಮಾರ್ 
ಶಿವರಾಜ್‌ಕುಮಾರ್    

ನಟ ಶಿವರಾಜ್‌ಕುಮಾರ್‌ ಕೈಯ್ಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರ ಜನ್ಮದಿನದಂದು ಮತ್ತೊಂದಷ್ಟು ಸಿನಿಮಾಗಳು ಆ ಪಟ್ಟಿ ಸೇರಿದ್ದವು. ಈಗಾಗಲೇ ಘೋಷಣೆಯಾಗಿರುವ ದಿನಕರ್‌ ಜೊತೆಗಿನ ಶಿವಣ್ಣ ಸಿನಿಮಾ, ನಿರ್ದೇಶಕ ಲೋಹಿತ್‌ ಜೊತೆಗಿನ ‘ಸತ್ಯಮಂಗಲ’ ಮೊದಲಾದ ಚಿತ್ರಗಳ ಕುರಿತು ಈತನಕ ಯಾವುದೇ ಅಪ್‌ಡೇಟ್‌ ಇಲ್ಲ.  

ಸದ್ಯ ‘45’, ‘ಉತ್ತರಕಾಂಡ’ ಚಿತ್ರೀಕರಣದಲ್ಲಿ ಶಿವಣ್ಣ ಮಗ್ನರಾಗಿದ್ದಾರೆ. ಅವರ ಜನ್ಮದಿನಕ್ಕೆ 131ನೇ ಚಿತ್ರದ ಇಂಟ್ರಡಕ್ಷನ್‌ ರಿಲೀಸ್ ಆಗಿತ್ತು. ಮುಂದಿನ ತಿಂಗಳಿನಿಂದ ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ‘ಸ್ಕ್ರಿಪ್ಟ್‌ ಹಂತದಲ್ಲಿದೆ. ಬಹಳ ಹಿಂದೆಯೇ ಶಿವಣ್ಣ ಡೇಟ್‌ ನೀಡಿರುವುದರಿಂದ ಮುಂದಿನ ತಿಂಗಳು ಚಿತ್ರದ ಒಂದು ಭಾಗವನ್ನು ಚಿತ್ರೀಕರಣ ಮಾಡುವ ಆಲೋಚನೆ ನಡೆದಿದೆ’ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

ತಮಿಳಿನ ಕಾರ್ತಿಕ್ ಅದ್ವೈತ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಹಿಂದೆ ತಮಿಳಿನ ‘ಪಾಯುಮ್‌ ಒಲಿ ನೀ ಎನಕ್ಕು’ ಚಿತ್ರ ನಿರ್ದೇಶಿಸಿದ್ದರು. ವಿಕ್ರಂ ಪ್ರಭು ನಾಯಕನಾಗಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಡಾಲಿ ಧನಂಜಯ ಕೂಡ ನಟಿಸಿದ್ದರು. ಭುವನೇಶ್ವರಿ ಪ್ರೊಡಕ್ಷನ್‌ನಡಿ ಎಸ್‌.ಎನ್‌. ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 

ADVERTISEMENT

‘ವಿಕ್ರಂ ವೇದ’ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಚಿತ್ರಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದೆ ಚಿತ್ರತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.