ADVERTISEMENT

ಯಾರಿಗೆ ಯಾರು ಶಿಕಾರಿ?

ಮಂಜುಶ್ರೀ ಎಂ.ಕಡಕೋಳ
Published 6 ಮಾರ್ಚ್ 2020, 19:45 IST
Last Updated 6 ಮಾರ್ಚ್ 2020, 19:45 IST
   

‘ಆಹಾರಕ್ಕಾಗಿ ಶಿಕಾರಿ ಮಾಡೋದು ತಪ್ಪಲ್ಲ, ಆದರೆ ಮೋಜಿಗಾಗಿ ಶಿಕಾರಿ ಮಾಡೋದು ತಪ್ಪು’...ಹೀಗೆಂದು ಹೇಳುವ ಅಹಿಂಸಾವಾದಿ ಶಂಭುಶೆಟ್ಟರು ತಾವೇ ಕೋವಿ ಹಿಡಿಯುವ ಸ್ಥಿತಿ ನಿರ್ಮಾಣವಾಗುವುದು ‘ಒಂದು ಶಿಕಾರಿಯ ಕಥೆ’ ಸಿನಿಮಾದ ಒನ್‌ಲೈನ್‌ ಸ್ಟೋರಿ.

ಕನ್ನಡದಲ್ಲಿ ಹಲವು ಪತ್ತೇದಾರಿ, ಕುತೂಹಲ ಕೆರಳಿಸುವ ಸಿನಿಮಾಗಳು ಬಂದಿದ್ದರೂ, ಅವೆಲ್ಲಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ ಈ ಸಿನಿಮಾ. ಒಂದರೊಳಗೊಂದು ಕಥೆಗಳನ್ನು ಬೆಸೆದುಕೊಂಡಿರುವ ಸಿನಿಮಾದ ಮೊದಲಾರ್ಧದ ಬಂಧ ತುಸು ಸಡಿಲವಾದರೂ, ದ್ವಿತೀಯಾರ್ಧ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿರುವ ಈ ಸಿನಿಮಾದ ನಿಜವಾದ ನಾಯಕ ಕಥೆಯೇ ಆಗಿದೆ. ಹಾಗಾಗಿ, ಇಲ್ಲಿ ಅಶ್ಲೀಲ ಸಂಭಾಷಣೆ, ಐಟಂ ಸಾಂಗ್‌ಗಳ ಕಿರಿಕಿರಿ ಇಲ್ಲ.

ಗೇಣಿದಾರ ಅಪ್ಪಣ್ಣಶೆಟ್ಟರ ಕುಟುಂಬದ ಕುಡಿ ಶಂಭು ಶೆಟ್ಟಿ ಬಾಲ್ಯದಲ್ಲೇ ಅಹಿಂಸಾವಾದಿ. ಇರುವೆಯನ್ನೂ ಸಾಯಿಸದ ಸೂಕ್ಷ್ಮ ಹೃದಯಿ. ಮಗನ ಅಹಿಂಸಾವಾದ ತಮ್ಮ ಕೊನೆಗಾಲದಲ್ಲಾದರೂ ಬದಲಾಗುತ್ತದೆಂಬ ನಿರೀಕ್ಷೆ ಅಪ್ಟಣ್ಣಶೆಟ್ಟರದ್ದು. ನಿಸ್ವಾರ್ಥ ವ್ಯಕ್ತಿತ್ವದ ಶಂಭುಶೆಟ್ಟರಿಂದ ದೂರವಾಗುವ ಹೆಂಡತಿ, ಮಗ ಹಿಂತಿರುಗುವರೇ? ಕೋವಿ ಹಿಡಿದು ಶಿಕಾರಿಗೆಂದು ಕಾಡಿಗೆ ತೆರಳುವ ಶಂಭು ಶೆಟ್ಟರ ಕೈಯಲ್ಲಿ ಅಂಟುವ ರಕ್ತದ ಕಲೆಗಳು ಯಾರದ್ದು? ಅನ್ನುವ ಕುತೂಹಲಕ್ಕೆ ತೆರೆ ಎಳೆಯಲು ಸಿನಿಮಾ ಮಂದಿರಕ್ಕೇ ಹೋಗಬೇಕು.

ADVERTISEMENT

ಕೋವಿ, ಶಿಕಾರಿ, ಮಲೆನಾಡಿನ ಪರಿಸರ ಅಲ್ಲಲ್ಲಿ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರನ್ನು ನೆನಪಿಸುತ್ತದೆ. ಸಂಗೀತ ನಿರ್ದೇಶಕ ಸೀನ್ ಗೋನ್ಸಾಲ್ವಿಸ್ ಎಲ್ಲೂ ಬಲವಂತವಾಗಿ ಹಾಡುಗಳನ್ನು ತುರುಕಿಲ್ಲ. ಚಿತ್ರದ ಓಘಕ್ಕೆ ಧಕ್ಕೆಯಾಗದಂತೆ ಸಂಗೀತ ಮತ್ತು ಛಾಯಾಗ್ರಹಣವಿದೆ. ಮೊದಲ ಸಿನಿಮಾವಾದರೂ ನಿರ್ದೇಶಕ ಸಚಿನ್ ಶೆಟ್ಟಿ ನಿರೂಪಣೆ ಮತ್ತು ನಿರ್ದೇಶನದಲ್ಲಿ ಪಕ್ಕಾ ವೃತ್ತಿಪರತೆಯನ್ನೇ ಮೆರೆದಿದ್ದಾರೆ.

ಯಕ್ಷಗಾನ ಕಲಾವಿದ (ಹರ್ಷ) ಮತ್ತು ಉಮಾ (ಸಿರಿ ಪ್ರಹ್ಲಾದ್) ಅವರ ಪ್ರೀತಿಯ ಕಥನ ಸಿನಿಮಾದಲ್ಲಿ ಸಹಜವಾಗಿಯೇ ಅನಾವರಣ ಗೊಂಡಿದೆ. ಮಲೆನಾಡಿನ ಹಸಿರು, ಯಕ್ಷಗಾನ–ತಾಳಮದ್ದಲೆಗಳ ನಡುವೆ ಅರಳುವ ಈ ಪ್ರೀತಿಯಲ್ಲಿ ನಾಯಕ, ನಾಯಕಿಗೆ ಮರ ಸುತ್ತುವ ಪ್ರಮೇಯವಿಲ್ಲ.ಸ್ವಾರ್ಥವೇ ಮೈವೆತ್ತಿರುವ ಸ್ಮಾರ್ಟ್ ವಿಲನ್ ಪಾತ್ರದಲ್ಲಿ ನಟ ಅಭಿಮನ್ಯು ಗಮನ ಸೆಳೆಯುತ್ತಾರೆ.

ವೃತ್ತಿಜೀವನದಲ್ಲಿ ನಟ ಪ್ರಮೋದ್ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಹರಿ ಪಾತ್ರದಲ್ಲಿ ಎಂ.ಕೆ. ಮಠ ಅವರದ್ದು ಮಾಗಿದ ಅಭಿನಯ. ನಾಯಕಿ ಸಿರಿ ಪ್ರಹ್ಲಾದ್ ಅವರ ಸೌಂದರ್ಯ ಮಲೆನಾಡಿನ ಹಸಿರಿನಷ್ಟೇ ತಾಜಾವಾಗಿದೆ. ಯಕ್ಷಗಾನ ಕಲಾವಿದನ ಪಾತ್ರಕ್ಕೆ ಪ್ರಸಾದ್ ಚೇರ್ಕಾಡಿ ಜೀವ ತುಂಬಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.