ADVERTISEMENT

ಈ ವಾರ ತೆರೆಗೆ ಬರುವ ಕನ್ನಡ ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 30 ಮೇ 2019, 19:30 IST
Last Updated 30 ಮೇ 2019, 19:30 IST
ತಾನ್ಯಾ ಹೋಪ್
ತಾನ್ಯಾ ಹೋಪ್   

ಸುವರ್ಣ ಸುಂದರಿ

ಇತಿಹಾಸದಲ್ಲಿ ಪದವಿ ಪಡೆದಿರುವ ಎಂ.ಎಸ್.ಎನ್. ಸೂರ್ಯ ನಿರ್ದೇಶಿಸಿರುವ ಚಿತ್ರ ಇದು. ಶ್ರೀಕೃಷ್ಣದೇವರಾಯನ ಕಾಲಘಟ್ಟದ ರಾಜಾ ಮಹಾದೇವರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಈ ಚಿತ್ರದ ಸನ್ನಿವೇಶಗಳಲ್ಲಿ ಬಳಸಲಾಗಿದೆ. ಮೈನವಿರೇಳಿಸುವ ರೋಚಕ ಸ್ಟಂಟ್‌ಗಳು ಈ ಚಿತ್ರದಲ್ಲಿ ಇರಲಿವೆ ಎಂದು ಸಿನಿತಂಡ ಹೇಳಿದೆ.

ಕೇರಳ, ಹೈದರಾಬಾದ್, ಬೀದರ್, ವಿಧಾನಸೌಧ ರಸ್ತೆಯಲ್ಲಿ 90 ದಿನಗಳ ಚಿತ್ರೀಕರಣ ನಡೆದಿದೆ. ಕತೆಗೆ ಪೂರಕವಾಗಿ 50 ನಿಮಿಷಗಳ ಗ್ರಾಫಿಕ್ಸ್ ಬಳಸಲಾಗಿದೆ. ಸಾಯಿಕಾರ್ತಿಕ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಯಪ್ರದಾ, ಸಾಯಿಕುಮಾರ್, ಸಾಕ್ಷಿ, ಪೂರ್ಣ, ತಿಲಕ್, ಅವಿನಾಶ್, ಜೈಜಗದೀಶ್, ಶಾನ್ ತಾರಾಗಣದಲ್ಲಿದ್ದಾರೆ. ಎಂ.ಎನ್. ಲಕ್ಷ್ಮಿ ಇದರ ನಿರ್ಮಾಪಕಿ.

ADVERTISEMENT

ಅಮರ್

ರೆಬೆಲ್‍ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ನಾಯಕನಾಗಿ ನಟಿಸಿರುವ ಚಿತ್ರ ಇದು. ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು, ಸಿಂಗಪುರ, ಸ್ವಿಜರ್ಲೆಂಡ್‌ನಲ್ಲಿ ಇದರ ಚಿತ್ರೀಕರಣ ನಡೆದಿದೆ. ‘ಅತಿಹೆಚ್ಚು ಲೊಕೇಷನ್‍ಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರ ಇದು’ ಎಂದು ಸಿನಿಮಾ ತಂಡ ಹೇಳಿದೆ.

ನಾಗಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಸತ್ಯ ಹೆಗಡೆ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ತಾನ್ಯಾ ಹೋಪ್, ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ ತಾರಾಗಣದಲ್ಲಿ ಇದ್ದಾರೆ. ದರ್ಶನ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ

ಪ್ರವೀಣ್‍ ರಾಜ್ ಹಾಗೂ ವಿ.ವಿ.ಎನ್.ವಿ. ಸುರೇಶ್‍ ಕುಮಾರ್ ನಿರ್ಮಿಸಿರುವ ಚಿತ್ರ ಇದು. ಶ್ರೀನಾಗ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ಕಿರಣ್ ವಾರಣಾಸಿ ಅವರ ಸಂಗೀತ ನಿರ್ದೇಶನ ಇದೆ. ಕಲ್ಯಾಣ್ ಸಮಿ ಛಾಯಾಗ್ರಹಣ ಮಾಡಿದ್ದಾರೆ. ಪ್ರಭು ಮುಂಡ್ಕೂರ್, ಸಂಯುಕ್ತ ಹೆಗಡೆ, ಸುಶ್ಮಿತಾ ಗೌಡ, ರಾಮಕೃಷ್ಣ, ಅರವಿಂದ್, ಎಡಕಲ್ಲು ಗುಡ್ಡ ಖ್ಯಾತಿಯ ಚಂದ್ರಶೇಖರ್, ವಿಜಯ್ ಭೋಲೇನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕಮರೊಟ್ಟು ಚೆಕ್‍ಪೋಸ್ಟ್‌

ಚೇತನ್‍ ರಾಜ್ ನಿರ್ಮಿಸಿರುವ ಈ ಚಿತ್ರದ ನಿರ್ದೇಶನ ಪರಮೇಶ್ ಎ ಅವರದ್ದು. ಚಿತ್ರದ ಕಥೆ ಹಾಗೂ ಛಾಯಾಗ್ರಹಣ ಕೂಡ ಪರಮೇಶ್ ಅವರದ್ದು. ಎ.ಟಿ. ರವೀಶ್ ಇದಕ್ಕೆ ಸಂಗೀತ ನೀಡಿದ್ದಾರೆ. ಸನತ್, ಉತ್ಪಾಲ್, ಗಡ್ಡಪ್ಪ, ಸ್ವಾತಿ ಕೋಂಡೆ, ಅಹಲ್ಯಾ, ನಿಶಾ ವರ್ಮ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.