ADVERTISEMENT

ಮೊದಲ ದಿನ ಗೊಂದಲ

ಬೆಂಗಳೂರು ಸಿನಿಮೋತ್ಸವ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:30 IST
Last Updated 27 ಫೆಬ್ರುವರಿ 2020, 19:30 IST
12 th Bangalore International Film Festival Logo
12 th Bangalore International Film Festival Logo   

‘ಬುಕ್‌ ಮೈ ಷೋ’ ಮೂಲಕ ಟಿಕೆಟ್‌ ಬುಕ್ಕಿಂಗ್ ವ್ಯವಸ್ಥೆ ಮಾಡಿದ ಕಾರಣ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮೊದಲ ದಿನವೇ ಹಲವು ಬಗೆಯ ಗೊಂದಲಗಳು ಉದ್ಭವ ವಾಗಿದ್ದು, ನೂರಾರು ಸಿನಿಪ್ರಿಯರು ಸಿನಿಮಾ ನೋಡಲು ಪರದಾಡುವಂತಾಯಿತು.

ಕಾರ್ಡ್‌ ಪ್ರಿಂಟ್‌ ಆಗಿಲ್ಲ, ಪಾಸ್‌ ಇಲ್ಲ: ಬುಕ್‌ಮೈ ಷೋ ನಲ್ಲಿ ಟಿಕೆಟ್‌ ಬುಕ್‌ ಮಾಡಿದ್ದವರಿಗೆ ವಿತರಿಸಲು ಕಾರ್ಡ್‌ಗಳು ಮುದ್ರಣವಾಗಿಲ್ಲದ್ದು ಈ ಗೊಂದಲಕ್ಕೆ ಕಾರಣ.

‘ಕಾರ್ಡ್‌ ಇಲ್ಲದಿದ್ದರೇನಂತೆ, ಡೇ ಪಾಸ್‌ ಕೊಡಿ, ನಾವು ಸಿನಿಮಾ ನೋಡಬೇಕು’ ಎಂದು ಕೇಳುತ್ತಿದ್ದವರಿಗೆ ಡೇ ಪಾಸ್‌ ಕೂಡ ಸಿಗಲಿಲ್ಲ. ಕೆಲವರು ’ಆಮೇಲೆ ಕಾರ್ಡ್‌ ಕೊಡಿ, ಸದ್ಯ ನಾವು ಸಿನಿಮಾ ನೋಡಬೇಕು‘ ಎಂದು ಒತ್ತಾಯಿಸಿದರು. ಅದಕ್ಕೂ ಆಯೋಜಕರಿಂದ ಸಮರ್ಪಕ ಉತ್ತರ ಸಿಗದ ಕಾರಣ ಇನ್ನೂರಕ್ಕೂ ಹೆಚ್ಚು ಸಿನಿಪ್ರಿಯರು ಸ್ಥಳದಲ್ಲಿಯೇ ಸಿಟ್ಟಿಗೆದ್ದು ಕೂಗಾಡಿ, ಆಕ್ರೋಶ ಹೊರಹಾಕಿದರು. ಒಂದು ಹಂತದಲ್ಲಿ ಪ್ರತಿಭಟನೆ ನಡೆಸುವ ಹಂತಕ್ಕೆ ಪರಿಸ್ಥಿತಿ ತಲುಪಿತು.

ADVERTISEMENT

ಸಚಿವರ ಕಚೇರಿಯಿಂದ ಪಾಸ್‌ :

ಒಂದು ಮೂಲದ ಪ್ರಕಾರ ಸಿಎಂ ಕಚೇರಿಯಿಂದ 300 ರಿಂದ 400ರಷ್ಟು ಪಾಸ್‌ಗಳು ವಿತರಣೆಯಾಗಿವೆ. ಈ ಪಾಸ್‌ಗಳಲ್ಲಿ ಭಾವಚಿತ್ರವಿಲ್ಲದ ಕಾರಣ ಯಾರದ್ದೋ ಪಾಸ್‌ ಅನ್ನು ಯಾರೋ ಬಳಸುತ್ತಿದ್ದಾರೆ. ಹಾಗಾಗಿ ಹಲವು ‘ಸ್ಕ್ರೀನ್‌’ಗಳಲ್ಲಿಪ್ರೇಕ್ಷಕರು ಹೆಚ್ಚಾಗಿದ್ದು, ಬುಕ್‌ ಮೈ ಷೋನಿಂದ ಭಾವಚಿತ್ರ ಸಹಿತ ಪಾಸ್‌ ಪಡೆದಂತಹ ತಂತ್ರಜ್ಞರಿಗೆ, ಸಿನಿಪ್ರಿಯರಿಗೆ ಸಿನಿಮಾ ನೋಡಲು ಚಿತ್ರಮಂದಿರದಲ್ಲಿ ಜಾಗವಿಲ್ಲದಂತಾಯಿತು.

ಈ ಬಾರಿ ಬುಕ್‌ ಮೈ ಷೋ ಮೂಲಕ 11 ಸಾವಿರದಷ್ಟು ಪ್ರೇಕ್ಷಕರು ನೋಂದಣಿ ಮಾಡಿಸಿದ್ದಾರೆ. ಆದರೆ, ಚಿತ್ರೋತ್ಸವದಲ್ಲಿ 4 ಸಾವಿರ ಪ್ರೇಕ್ಷಕರಿಗಷ್ಟೇ ಅವಕಾಶವಿದೆ. ಬಹುಶಃ ಇದೂ ಕೂಡ, ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದ್ದು. ನಾಳೆಯೂ ಕೂಡ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ.

'ಪಾಸ್ ವಿತರಣೆಯಲ್ಲಿ ಗೊಂದಲ ಆಗಿರುವುದು ನಿಜ. ಶೀಘ್ರವೇ ಗೊಂದಲ ಬಗೆಹರಿಸಲಾಗುವುದು' ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ತಿಳಿಸಿದ್ದಾರೆ.
'ಈ ಸಲ ಪ್ಲಾಸ್ಟಿಕ್ ಕಾರ್ಡ್ ಬಳಕೆ ಮಾಡದಂತೆ ತಡೆಯಲು ಬುಕ್ ಮೈ ಷೋ ಜೊತೆಗೆ ಒಪ್ಪಂದ ಮಾಡಿದ್ದೇವೆ. ಮೊದಲೇ ಬುಕ್ ಮಾಡಿ ಕೊಂಡವರಿಗೆ ಸಂಪೂರ್ಣ ಪಾಸ್ ವಿತರಿಸಲು ಅವರಿಗೆ ಸಾಧ್ಯವಾಗಿಲ್ಲ. ಮುಂಬೈಯಿಂದ ಪ್ರಿಂಟ್ ಆಗಿ ಬರಲು ತಡವಾಗಿದೆ ಅಂದಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಗದ ಬಳಕೆ ಇಲ್ಲದಂತೆ ಮಾಡಲು ಆನ್ ಲೈನ್ ಬುಕಿಂಗ್ ಗೆ ಒತ್ತು ನೀಡಲಾಗಿದೆ. ಆದರೆ ಸ್ಮಾರ್ಟ್ ಫೋನ್ ಇಲ್ಲದ ಹಿರಿಯರು, ತಂತ್ರಜ್ಞರು ತೊಂದರೆ ಅನುಭವಿಸುವುದು ಗಮನಕ್ಕೆ ಬಂದು ಮೂರು ದಿನದ ಹಿಂದೆಯೇ ನಗದು ಪಡೆದು ಟಿಕೆಟ್ ವಿತರಣೆ ಮಾಡಿದ್ದೇವೆ. ಅಲ್ಲೂ ತಡವಾಗಿದೆ ಎಂದರು.

ವಿದ್ಯಾಶಂಕರ್ ಸ್ಪಷ್ಟನೆ :‘ಈ ಬಾರಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ಅದನ್ನು ನಿಭಾಯಿಸಲೆಂದೇ ಈ ಸಲ ನವರಂಗ್ ಸಹಿತ ಹಲವು ಸಿಂಗಲ್ ಥಿಯೇಟರ್‌ಗಳಲ್ಲೂ ಚಿತ್ರೋತ್ಸವ ಏರ್ಪಡಿಸಲಾಗಿದೆ‘ ಎಂದು ಉತ್ಸವದ ಕ್ರಿಯೇಟಿವ್ ನಿರ್ದೇಶಕ ವಿದ್ಯಾಶಂಕರ್ ಸ್ಪಷ್ಟಪಡಿಸಿದರು.

ಡೇ ಪಾಸ್‌ ಕುರಿತು ಮಾಹಿತಿ ನೀಡಿದ ಅವರು, ‘ಭಾನುವಾರದವರೆಗೆ ಡೇ ಪಾಸ್ ವಿತರಣೆ ನಿಲ್ಲಿಸಲಾಗಿದೆ. ಪ್ರೇಕ್ಷರ ಸಂಖ್ಯೆ ಆಧರಿಸಿ, ಮುಂದೆ ಡೇಪಾಸ್‌ ವಿತರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ‘ಕ್ಯೂ’ ಇಲ್ಲ

ಥಿಯೇಟರ್ ಒಳಗೆ ಹೋಗುವಾಗ ಸೀನಿಯರ್ ಸಿಟಿಜನ್ಸ್‌ಗೆ ಈ ಸಲ ಪ್ರತ್ಯೇಕ ಕ್ಯೂ ಮಾಡುವುದು ಸಾಧ್ಯವಿಲ್ಲ ಎಂದು ಅಕಾಡೆಮಿ ಮೂಲಗಳು ತಿಳಿಸಿವೆ. ‘ಪ್ರತ್ಯೇಕ ಕ್ಯೂ ಮಾಡಿದರೆ ಪ್ರೇಕ್ಷಕರ ಮಧ್ಯೆ ತಾರತಮ್ಯ ಮಾಡಿದಂತೆ ಆಗುತ್ತದೆ‘ ಎನ್ನುವುದು ಸಂಘಟಕರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.