ADVERTISEMENT

ಕಲಾವಿದನಾಗಿದ್ದು ನನ್ನ ಅದೃಷ್ಟ: ಚಲನಚಿತ್ರ ನಟ ರಮೇಶ್ ಅರವಿಂದ್ ಮನದಾಳ

ಮನದಾಳ ಹಂಚಿಕೊಂಡ ಚಲನಚಿತ್ರ ನಟ ರಮೇಶ್ ಅರವಿಂದ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 23:34 IST
Last Updated 19 ಆಗಸ್ಟ್ 2023, 23:34 IST
ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಹಾಗೂ ಮಹೇಶ ಜೋಶಿ ಚರ್ಚಿಸಿದರು. ಡಾ.ಸಿ.ಎನ್. ಮಂಜುನಾಥ್ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಹಾಗೂ ಮಹೇಶ ಜೋಶಿ ಚರ್ಚಿಸಿದರು. ಡಾ.ಸಿ.ಎನ್. ಮಂಜುನಾಥ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಲಾವಿದನಾಗಿದ್ದು ನನ್ನ ಅದೃಷ್ಟ. ಚಿತ್ರರಂಗದ ಬದಲು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರೆ ನಾಡಿನ ಜನರ ಪ್ರೀತಿ ಗಳಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಚಲನಚಿತ್ರ ನಟ ರಮೇಶ್ ಅರವಿಂದ್ ಮನದಾಳ ಹಂಚಿಕೊಂಡರು. 

ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶನಿವಾರ ಆಯೋಜಿದ ‘ಕನ್ನಡದ ಧ್ರುವತಾರೆ’ ಕಾರ್ಯಕ್ರಮದಲ್ಲಿ ಮೊದಲ ಅತಿಥಿಯಾಗಿ ಭಾಗವಹಿಸಿ, ತಮ್ಮ ಜೀವನಾನುಭವನ್ನು ವಿವರಿಸಿದರು. 

‘ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ‘ಮಹಾ ಶರಣ ಹರಳಯ್ಯ’ ಚಿತ್ರದಲ್ಲಿ ಬಸವಣ್ಣನ ಮಾತ್ರ ಮಾಡುವ ಅವಕಾಶ ನನಗೆ ದೊರೆತ್ತಿತ್ತು. ಇಂತಹ ಇನ್ನಷ್ಟು ಪಾತ್ರಗಳಿಗೆ ಎದುರು ನೋಡುತ್ತಿದ್ದೇನೆ’ ಎಂದು ತಿಳಿಸಿ, ಬಾಲ್ಯದಲ್ಲಿಯೇ ಕಲಾವಿದನಾಗಲು ತಮಗೆ ಸಿಕ್ಕ ಪ್ರೇರಣೆಗಳನ್ನು ನೆನಪಿಸಿಕೊಂಡರು. 

ADVERTISEMENT

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ, ‘ಸಾಧನೆ ಇಲ್ಲದೇ ಸತ್ತರೆ ಅಂತಹ ಸಾವಿಗೆ ಅರ್ಥವಿರುವುದಿಲ್ಲ. ಏನೂ ಇಲ್ಲದೇ ಸತ್ತರೆ ವ್ಯವಸ್ಥೆಗೆ ಅರ್ಥವಿರುವುದಿಲ್ಲ. ಆದ್ದರಿಂದ ಸಾಧನೆ ಮಾಡುವವರು ತಾಳ್ಮೆಯಿಂದ ನಿರಂತರ ಪ್ರಯತ್ನದಲ್ಲಿ ಇದ್ದಾಗ ಸಾರ್ಥಕ ಸಾಧಕರಾಗಲು ಸಾಧ್ಯವಾಗುತ್ತದೆ. ತಕ್ಷಣ ಸಾಧನೆಯ ಉತ್ತುಂಗಕ್ಕೆ ಏರಬೇಕು ಎನ್ನುವವರು ಅಷ್ಟೇ ಬೇಗನೆ ಕೆಳಗೆ ಬಿದ್ದು ಬಿಡುತ್ತಾರೆ. ನಿರಂತರ ಪ್ರಯತ್ನ ಮಾಡುವವರು ಮಾತ್ರ ನಿಜವಾದ ಸಾಧಕರಾಗುತ್ತಾರೆ’ ಎಂದು ಹೇಳಿದರು. 

ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಪಾರಂಪರಿಕ ಬೇರಿನ ಆಳದೊಂದಿಗೆ ಹೊಸತನದ ಚಿಗುರನ್ನು ಹುಟ್ಟಿಸುವ ಕನಸು ಪರಿಷತ್ತಿನದ್ದಾಗಿದೆ. ಕನ್ನಡದ ಧ್ರುವತಾರೆ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ವಿವಿಧ ಕ್ಷೇತ್ರದಲ್ಲಿ ಅಜ್ಞಾತವಾಗಿ ಅಗಣಿತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಲಾಗುತ್ತದೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.