ADVERTISEMENT

ಮುದ್ ಮುದ್ದು ದೆವ್ವ!

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 20:00 IST
Last Updated 22 ನವೆಂಬರ್ 2018, 20:00 IST
ಮುತ್ತುಕುಮಾರ್
ಮುತ್ತುಕುಮಾರ್   

ಈ ಚಿತ್ರದ ದೆವ್ವ ಇವಳೇ ನೋಡಿ ಎಂದು ನಿರ್ಮಾಪಕರು ತಮ್ಮ ಪಕ್ಕದಲ್ಲಿ ನಗುತ್ತ ಕೂತಿದ್ದ ಮುದ್ದು ಮಗು ಅಮೂಲ್ಯಳನ್ನು ತೋರಿಸಿದರು. ಜತೆಗೆ ‘ಇದು ತುಂಬ ಒಳ್ಳೆಯ ದೆವ್ವ. ಚಿತ್ರ ನೋಡಿ ಮುಗಿಸುವಷ್ಟರಲ್ಲಿ ನಿಮ್ಮ ಜತೆಗೂ ಫ್ರೆಂಡ್‌ಷಿಪ್‌ ಮಾಡಿರುತ್ತದೆ’ ಎಂದೂ ಸೇರಿಸಿದರು. ಮುದ್ದು ದೆವ್ವ ಫ್ರೆಂಡ್‌ಷಿಪ್‌ ಮಾಡಲಿಕ್ಕೂ ಒಂದು ಕಾರಣವಿದೆ.

ಈ ಚಿತ್ರದ ಹೆಸರೇ ‘ಫ್ರೆಂಡ್ಲಿ ಬೇಬಿ’. ಒಳ್ಳೆಯ ದೆವ್ವವನ್ನು ಇಟ್ಟುಕೊಂಡು ಪ್ರೇಕ್ಷಕರನ್ನು ಸ್ವಲ್ಪ ಹೆದರಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ನಿರ್ದೇಶಕ ಮುತ್ತುಕುಮಾರ್. ಅವರು ತಮಿಳುನಾಡಿನವರು. ಕನ್ನಡ ಬಾರದ ಅವರು ದೆವ್ವದ ಮೂಲಕ ಕನ್ನಡಿಗರನ್ನು ಬೆಚ್ಚಿಬೀಳಿಸುವ ಧೈರ್ಯ ಮಾಡುತ್ತಿದ್ದಾರೆ. ಇದೇ ವಾರ (ನ.23) ಈ ಚಿತ್ರ ತೆರೆಗೆ ಬರುತ್ತಿದೆ.

ಸುಂದರಂ ಮತ್ತು ಡಿ. ವೆಂಕಟೇಶರೆಡ್ಡಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ಗಂಡಸರಿಗೆ ಹೆರಿಗೆ ನೋವು ಹೇಗಿರುತ್ತದೆ ಎಂದು ಗೊತ್ತಿರುವುದಿಲ್ಲ. ಆದರೆ ನನಗೆ ಈ ಸಿನಿಮಾ ಮುಗಿಸುವಷ್ಟರಲ್ಲಿ ಹೆರಿಗೆ ನೋವು ಹೇಗಿರುತ್ತದೆ ಎಂದು ಗೊತ್ತಾಗಿದೆ’ ಎಂದು ನಕ್ಕರು ಸುಂದರಂ. ತುಂಬ ಕಷ್ಟಪಟ್ಟು ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ನೆಮ್ಮದಿಯೂ ಅವರ ಮಾತಿನಲ್ಲಿತ್ತು.

ADVERTISEMENT

ವೆಂಕಟೇಶರೆಡ್ಡಿ ಮಾತನಾಡಿ, ‘ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರಕಿದೆ. ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ‍’ ಎಂದು ಕೇಳಿಕೊಂಡರು. ‘ಸಿನಿಮಾದಲ್ಲಿ ಒಳ್ಳೆ ಸಂದೇಶವಿದೆ. ಚಿತ್ರನೋಡಿ ಪ್ರತಿಕ್ರಿಯಿಸಿ. ಆ ಪ್ರತಿಕ್ರಿಯೆ ಹೇಗಿದ್ದರೂ ಒಪ್ಪಿಕೊಳ್ಳುತ್ತೇನೆ’ ಎಂದರು ನಿರ್ದೇಶಕ ಮುತ್ತುಕುಮಾರ್.

ಚಿತ್ರದಲ್ಲಿ ಒಂದು ಪಾತ್ರದಲ್ಲಿ ನಟಿಸಿರುವ ಯತಿರಾಜ್‌, ‘ನಂದು ಸ್ಪೇಷಲ್ ಪಾತ್ರ. ಪ್ರಾಮಾಣಿಕವಾಗಿ ಭ್ರಷ್ಟಾಚಾರದ ವಿರುದ್ಧ ಗುಡುಗುವ ಪಾತ್ರ. ಕ್ವಾರಿ ಕೆಲಸ ಮಾಡುವ ಪಾತ್ರ’ ಎಂದರು.

ಫ್ರೆಂಡ್ಲಿ ಬೇಬಿಯಾಗಿ ನಟಿಸಿರುವ ಅಮೂಲ್ಯ, ‘ಏಳನೇ ಕ್ಲಾಸು... ಸಿನಿಮಾದಲ್ಲಿ ನಂದು ದೆವ್ವದ ಪಾತ್ರ‌ ನಂಗೆ ಮೊದಮೊದಲು ಮೇಕಪ್ ಅಂದ್ರೆ ತುಂಬ ಭಯ ಇತ್ತು. ಹೋಗ್ತಾ ಹೋಗ್ತಾ ನನ್ನ ನೋಡಿ ಬೇರೆಯವ್ರು ಭಯಪಡಲು ಶುರುಮಾಡಿದ್ರು’ ಎಂದು ಖುಷಿಯಿಂದಲೇ ಹೇಳಿಕೊಂಡಳು.

ಅರ್ಜುನ್ ಸುಂದರಂ ಈ ಚಿತ್ರದ ನಾಯಕ. ‘ಎಲ್ಲರಿಗೂ ಕುತೂಹಲ ಮೂಡಿಸುವ ಪಾತ್ರ ನನ್ನದು. ಮೊದಮೊದಲು ಪಾತ್ರದ ಬಗ್ಗೆ ಕೆಲವು ಗೊಂದಲಗಳು ಹುಟ್ಟುತ್ತವೆ. ಪ್ಲೇಬಾಯ್ ಥರದ ಪಾತ್ರ. ಅದಕ್ಕೆ ಬೇರೆ ಬೇರೆ ಆಯಾಮಗಳೂ ಇವೆ. ಈ ಚಿತ್ರಕ್ಕೆ ಒಂದು ಹಾಡನ್ನೂ ಹಾಡಿದ್ದೇನೆ’ ಎಂದು ಹೇಳಿಕೊಂಡರು ಅವರು.

ಕಿರುತೆರೆ ನಟಿ ಜ್ಯೋತಿ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಈ ಸಿನಿಮಾದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಆಧುಕಿನ ಐಟಿ ಕೆಲಸಗಾರ್ತಿ. ನಾಯಕನಿಗೆ ಬೆಂಬಲವಾಗಿರುತ್ತೇನೆ. ಮಧ್ಯದಲ್ಲಿ ಬಂದು ಕಥೆಗೆ ತಿರುವು ಕೊಟ್ಟು ಹೋಗುವ ಪಾತ್ರ’ ಎಂಬ ವಿವರಣೆಯನ್ನು ಅವರು ನೀಡಿದರು. ಆಡ್ಲಿನ್‌ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.