‘ಸಂಕಷ್ಟಕರ ಗಣಪತಿ’ ಸಿನಿಮಾ ಖ್ಯಾತಿಯ ನಟ ಲಿಖಿತ್ ಶೆಟ್ಟಿ, ನಟಿ ತೇಜಸ್ವಿನಿ ಶರ್ಮಾ ಹಾಗೂ ಖುಷಿ ರವಿ ನಟಿಸಿರುವ ‘ಫುಲ್ ಮೀಲ್ಸ್’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇತ್ತೀಚೆಗೆ ಚಿತ್ರದ ಹಾಡೊಂದು ಕ್ಯಾಸೆಟ್‌ನಲ್ಲಿ ಬಿಡುಗಡೆಯಾಗಿದೆ.
ಹಿಂದೆಲ್ಲಾ ಆಡಿಯೊ ಹಿಟ್ ಆಯಿತೋ ಇಲ್ಲವೋ ಎನ್ನುವುದು ನಿರ್ಧಾರವಾಗುತ್ತಿದ್ದಿದ್ದು ಕ್ಯಾಸೆಟ್‌ಗಳ ಮಾರಾಟ ಸಂಖ್ಯೆಯಿಂದ. ಈ ಡಿಜಿಟಲ್ ಯುಗದಲ್ಲಿ ಕ್ಯಾಸೆಟ್‌ಗಳು ಮರೆಯಾಗಿವೆ. ಇದೀಗ ಮತ್ತೆ ಆ ಯುಗಕ್ಕೆ ಕರೆದೊಯ್ಯುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್, ಲಿಖಿತ್ ಶೆಟ್ಟಿ, ನಿರ್ದೇಶಕ ಎನ್. ವಿನಾಯಕ, ನಾಯಕಿಯರಾದ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಹಾಡಿನ ಕ್ಯಾಸೆಟ್ ಪ್ರದರ್ಶಿಸಿದರು. ಟೇಪ್ ರೆಕಾರ್ಡರ್‌ನಲ್ಲಿ ಕ್ಯಾಸೆಟ್ ಹಾಕಿ ಗುರುಕಿರಣ್ ‘ವಾಹ್ ಏನೋ ಹವಾ’ ಎಂಬ ಹಾಡು ಲೋಕಾರ್ಪಣೆಗೊಳಿಸಿದರು.
ಕವಿರಾಜ್ ಸಾಹಿತ್ಯ ಈ ಹಾಡಿಗಿದೆ. ವಿಜೇತ್ ಅರಸ್ ಮತ್ತು ಸುನಿಧಿ ಗಣೇಶ್ ಹಾಡಿಗೆ ದನಿಯಾಗಿದ್ದಾರೆ. ‘ಸಂಗೀತವನ್ನು ಪ್ರಸ್ತುತಪಡಿಸುವ ರೀತಿ ಬದಲಾಗಬಹುದು. ಆದರೆ ಸಂಗೀತ ಎಂದಿಗೂ ಬದಲಾಗುವುದಿಲ್ಲ. ಈಗಿನ ಪೀಳಿಗೆಯ ಟ್ರೆಂಡ್‌ಗೆ ತಕ್ಕಂತೆ ಮಾಡಿರುವ ‘ಫುಲ್ ಮೀಲ್ಸ್’ನ ಹಾಡುಗಳು ಪ್ರೇಕ್ಷಕರಿಗೆ ಮೆಚ್ಚುಗೆಯಾಗಲಿದೆ’ ಎನ್ನುತ್ತಾರೆ ಗುರುಕಿರಣ್.
ನ.21ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ಉಳಿದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಗೊಳಿಸಲಾಗುವುದು ಎಂದಿದೆ ಚಿತ್ರತಂಡ. ಚಿತ್ರದುರ್ಗದ ಎನ್. ವಿನಾಯಕ ಕಥೆ, ಚಿತ್ರಕಥೆ ಬರೆದು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ದೀಪು ಎಸ್. ಕುಮಾರ್ ಸಂಕಲನ, ಮನೋಹರ್ ಜೋಷಿ ಛಾಯಾಚಿತ್ರಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ರಂಗಾಯಣ ರಘು, ಸೂರಜ್, ವಿಜಯ್ ಚಂಡೂರ್, ರವಿಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.