ADVERTISEMENT

ಕಿರುಚಿತ್ರ: ಗಾಳಿಪ‍ಟದ ನೂಲಿನ ಕಥೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 23:22 IST
Last Updated 29 ಜೂನ್ 2023, 23:22 IST
ಚಿನ್ಮಯ್‌
ಚಿನ್ಮಯ್‌   

ಮಂಜ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಹುಡುಗ. ಅಪ್ಪನಿಲ್ಲದೆ, ಅಮ್ಮನ ನೆರಳಿನಲ್ಲಿ ಬೆಳೆಯುವ ಮಂಜನಿಗೆ ಗಾಳಿಪಟದೊಂದಿಗೆ ಆಡುವ ಆಸೆ. ಹುಡುಗರೆಲ್ಲ ಸೇರಿ ಗಾಳಿಪಟ ಸ್ಪರ್ಧೆಗೆ ಹೋಗಲು ಅಣಿಯಾಗುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದರೆ ಮಾತ್ರ ಸ್ಪರ್ಧೆಗೆ ಹೋಗಬಹುದೆಂದು ಅಮ್ಮ ಷರತ್ತು ವಿಧಿಸುತ್ತಾಳೆ. ಅಮ್ಮನ ಆಣತಿಯಂತೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾನೆ. ಅದೇ ಖುಷಿಯಲ್ಲಿ ಮನೆಗೆ ಬರುವ ಹುಡುಗನಿಗೆ ಗಾಳಿಪಟದ ನೂಲು ಹೇಗೆ ಮುಳುವಾಗುತ್ತದೆ ಎಂಬ ಚಿಕ್ಕ ಕಥೆಯೊಂದಿಗೆ ದೊಡ್ಡ ಸಂದೇಶವುಳ್ಳ ಕಿರುಚಿತ್ರ ಮುಗಿಯುವ ಹೊತ್ತಿಗೆ ಪ್ರೇಕ್ಷಕನನ್ನು ಮೌನಿಯಾಗಿಸುತ್ತದೆ.

ಅಮ್ಮನಾಗಿ ಕಿರುತೆರೆ ನಟಿ ಆಶಾ ಸುಜಯ್‌, ಮಂಜನಾಗಿ ಮಾಸ್ಟರ್‌ ಚಿನ್ಮಯ್‌ ಅಲ್ಲಲ್ಲಿ ನಗು ಮೂಡಿಸಿ, ಕೊನೆಯಲ್ಲಿ ಅಳಿಸುತ್ತಾರೆ. ಈಗಷ್ಟೇ ಡಿಜಿಟಲ್‌ ಫಿಲ್ಮ್‌ ಮೇಕಿಂಗ್‌ನಲ್ಲಿ ಡಿಗ್ರಿ ಮುಗಿಸಿರುವ ಹರ್ಷಿತ್‌ ಆನಂದ್‌ ಈ ಕಿರುಚಿತ್ರದ ನಿರ್ದೇಶಕರು. ಸಂದೇಶ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಚಿತ್ರವನ್ನು ಉತ್ತಮವಾಗಿಸಿರುವ ಹರ್ಷಿತ್‌ ಈ ಚಿತ್ರದೊಂದಿಗೆ ಭರವಸೆ ಮೂಡಿಸುತ್ತಾರೆ. ಸತ್ಯ ರಾಧಾಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜೊತೆಗೆ ಒಂದು ಅರ್ಥಪೂರ್ಣವಾದ ಗೀತೆಯನ್ನು ಬರೆದು ಹಾಡಿದ್ದಾರೆ. ದೇವದತ್‌ ಅವರ ಛಾಯಾಚಿತ್ರಗ್ರಹಣ ಮತ್ತು ಸಂಕಲನ ಚಿತ್ರಕ್ಕಿದೆ. 

ಗಾಳಿಪಟದ ನೂಲಿನಿಂದಾಗುವ ಅನಾಹುತಗಳನ್ನು ಪರಿಚಯಿಸುವುದೇ ಈ ಕಿರುಚಿತ್ರದ ಉದ್ದೇಶ. ಗಾಳಿಪಟದ ನೂಲಾಗಿ ಬಳಸುವ ಮಾಂಜಾದಿಂದಾಗಿರುವ ಒಂದಷ್ಟು ನೈಜ ಘಟನೆಗಳ ಕುರಿತು ಚಿತ್ರದ ಕೊನೆಯಲ್ಲಿ ಅಂಕಿಅಂಶ ನೀಡಲಾಗಿದೆ. ಹಕ್ಕಿಗಳಿಗೆ ಈ ನೂಲು ಹೇಗೆ ಉರುಳಾಗುತ್ತಿದೆ ಎಂಬುದನ್ನು ವಿವರಿಸಲಾಗಿದೆ. ಹೀಗಾಗಿ ವನ್ಯಜೀವಿಗಳ ಸಂರಕ್ಷಣೆಗಾಗಿ ಪಣ ತೊಟ್ಟಿರುವ ಆರ್ಕ್‌ ಎನ್‌ಜಿಒ ಈ ಚಿತ್ರದ ಪ್ರಚಾರಕ್ಕೆ ಕೈಜೋಡಿಸಿದೆ. ಚಿತ್ರಕ್ಕೆ ಈಗಾಗಲೇ 10ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆಗಳಲ್ಲಿ ಬಹುಮಾನವೂ ಲಭಿಸಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.