ADVERTISEMENT

ವಾರದ ಸಿನಿಮಾ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 19:30 IST
Last Updated 17 ಫೆಬ್ರುವರಿ 2022, 19:30 IST
ಶಶಿಕಾಂತ್ ಹಾಗೂ ವೈಷ್ಣವಿ ಗೌಡ
ಶಶಿಕಾಂತ್ ಹಾಗೂ ವೈಷ್ಣವಿ ಗೌಡ   

ಕೋವಿಡ್‌ ನಿರ್ಬಂಧಗಳಿಂದ ನಿಶ್ಯಬ್ಧವಾಗಿದ್ದ ಚಿತ್ರಮಂದಿರಗಳಲ್ಲಿ ಇದೀಗ ಸಾಲು ಸಾಲು ಸಿನಿಮಾ ಸುಗ್ಗಿ. ಕಳೆದ ವಾರ ಬಿಡುಗಡೆಯಾಗಿದ್ದ ಕೆಲ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಮತ್ತಷ್ಟು ಚಿತ್ರಗಳು ತೆರೆ ಮೇಲೆ ಬರಲು ಸಜ್ಜಾಗಿವೆ. ಇಂದು ‘ಬಹುಕೃತ ವೇಷಂ’, ‘ವರದ’, ‘ಬೈ ಟು ಲವ್‌’, ‘ಭಾವಚಿತ್ರ’, ‘ಗಿಲ್ಕಿ’, ‘ಮಹಾರೌದ್ರಂ’ ಸಿನಿಮಾ ತೆರೆಕಾಣುತ್ತಿದ್ದು, ಗಾಂಧಿನಗರದ ಚಿತ್ರಮಂದಿರಗಳು ಸಿನಿಮಾಗಳಿಂದ ಹೌಸ್‌ಫುಲ್‌ ಆಗಲಿವೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆಯಿಟ್ಟ ನಟಿ ವೈಷ್ಣವಿ ಗೌಡ ಹಾಗೂಶಶಿಕಾಂತ್ ನಟನೆಯ ‘ಬಹುಕೃತ ವೇಷಂ’ರಾಜ್ಯದ 70ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಾಗೂ ಅಮೆರಿಕದ 25 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ‘ಮನುಷ್ಯ ಹೊಟ್ಟೆಪಾಡಿಗಾಗಿ ನಾನಾ ವೇಷ ಹಾಕುತ್ತಾನೆ‌‌. ಇದೇ ಕಥೆಯ ಸಾರಾಂಶ’ ಎಂದಿದ್ದಾರೆ ವೈಷ್ಣವಿ ಗೌಡ. ‘ಗೌಡ್ರುಸೈಕಲ್‌’ ಚಿತ್ರ ನಿರ್ದೇಶಿಸಿದ್ದ ಪ್ರಶಾಂತ್ ಕೆ. ಎಳ್ಳಂಪಳ್ಳಿ ಈ ಚಿತ್ರದ ನಿರ್ದೇಶಕ. ಅಧ್ಯಾಯ ತೇಜ್‌ ಚಿತ್ರಕಥೆ ಬರೆದಿದ್ದು, ಎಚ್‌. ನಂದ ಹಾಗೂ ಡಿ.ಕೆ.ರವಿ ಅವರು ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ.

‘ಬಜಾರ್’ ಹೀರೊ ಧನ್ವೀರ್ ಹಾಗೂ ಶ್ರೀಲೀಲಾ ನಟನೆಯ ‘ಬೈ ಟು ಲವ್’ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಈ ಹಿಂದೆ ಮಾಸ್‌ ಲುಕ್‌ನಲ್ಲಿ ಮಿಂಚಿದ್ದ ಧನ್ವೀರ್‌, ಈ ಚಿತ್ರದಲ್ಲಿ ಲವರ್‌ ಬಾಯ್‌ ಪಾತ್ರ ಮಾಡಿದ್ದಾರೆ. ಕೆವಿಎನ್‌ ಪ್ರೊಡಕ್ಷನ್ಸ್ ಅಡಿ ನಿಶಾ ವೆಂಕಟ್ ಕೋಣಂಕಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

ADVERTISEMENT

ವಿನೋದ್‌ ಪ್ರಭಾಕರ್‌ ನಟನೆಯ ‘ವರದ’ ಇಂದು ತೆರೆಕಾಣುತ್ತಿದೆ. ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್. ಆ್ಯಕ್ಷನ್‌ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ.ಜಿ.ಎಫ್.), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್ ನಟಿಸಿರುವ ‘ಭಾವಚಿತ್ರ’ ಭಿನ್ನವಾದ ಕಥಾಹಂದರ ಹೊಂದಿದೆ. ‘ಮೊಬೈಲ್ ಬಂದಾಗಿನಿಂದ ಎಲ್ಲರಿಗೂ ಭಾವಚಿತ್ರದ ಮೇಲೆ ಹೆಚ್ಚಿನ ಒಲವು. ಕ್ಯಾಮೆರಾ ಹಾಗೂ ಭಾವಚಿತ್ರದ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದನ್ನು ಟೆಕ್ನೋ ಥ್ರಿಲ್ಲರ್ ಅಂತಲೂ ಕರೆಯಬಹುದು’ ಎನ್ನುತ್ತಾರೆ ನಿರ್ದೇಶಕ ಗಿರೀಶ್ ಕುಮಾರ್. ವುಡ್‌ ಕ್ರೀಪರ್ಸ್‌ ಸಂಸ್ಥೆ ಲಾಂಛನದ ಅಡಿ ಈ ಚಿತ್ರ ನಿರ್ಮಾಣವಾಗಿದೆ.

ಟ್ರೇಲರ್‌ ಮೂಲಕವೇ ಸದ್ದು ಮಾಡಿರುವ ವೈಕೆ ನಿರ್ದೇಶನದ ಸಿನಿಮಾ, ‘ಗಿಲ್ಕಿ’. ‘ಸಮಾಜದಿಂದ ವಿಮುಖರಾದ ಮೂರು ಪಾತ್ರಗಳ ಮೂಲಕ ನಮ್ಮ ಚಿತ್ರಕಥೆ ಸಾಗುತ್ತದೆ. ಅದು ಗಿಲ್ಕಿ, ನ್ಯಾನ್ಸಿ ಹಾಗೂ ಶೇಕ್ಸ್‌ಪಿಯರ್ ಪಾತ್ರಗಳು. ಗಿಲ್ಕಿ ನಾಯಕನ ಪಾತ್ರದ ಹೆಸರು. ನಾನ್ಸಿ ನಾಯಕಿಯ ಪಾತ್ರ. ಈಕೆ ಚಿಕ್ಕ ವಯಸ್ಸಿನಲ್ಲೇ ಕಾಯಿಲೆಗೆ ತುತ್ತಾಗಿ ತನ್ನ ಕೈ- ಕಾಲುಗಳ ಸ್ವಾಧೀನ ಕಳೆದುಕೊಂಡಿರುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ‌. ನಂತರ ಏನಾಗುತ್ತದೆ ಎಂಬುವುದೇ ಸಿನಿಮಾ ಕಥೆ’ ಎನ್ನುತ್ತಾರೆ ನಿರ್ದೇಶಕ ವೈಕೆ.

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಕೃಷ್ಣ ಮಹೇಶ್ ನಟನೆಯ ‘ಮಹಾ ರೌದ್ರಂ’ ಸಿನಿಮಾ ತೆರೆಕಾಣುತ್ತಿದ್ದು, ಇದೊಂದು ಆ್ಯಕ್ಷನ್‌ ಸಿನಿಮಾ ಎಂದಿದೆ ಚಿತ್ರತಂಡ. ಡಾ.ಆರ್.ಎಂ.ಸುನೀಲ್ ಕುಮಾರ್ ನಿರ್ದೇಶನದ ‘ಮಹಾ ರೌದ್ರಂ’ ಸಿನಿಮಾಗೆ ವಂಶಿ ಸುನೀಲ್ ಕುಮಾರ್ ಬಂಡವಾಳ ಹಾಕಿದ್ದು, ಪೂರ್ಣಿಮ ನಾಯಕಿ ಆಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.