ADVERTISEMENT

ಅಪ್ಪನ ಸಾವಿನ ದುಃಖದ ನಡುವೆಯೂ ನಟಿಸಿದ ಗಣೇಶ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 10:38 IST
Last Updated 13 ಆಗಸ್ಟ್ 2019, 10:38 IST
ಗಣೇಶ್‌
ಗಣೇಶ್‌   

ನಾಗಣ್ಣ ನಿರ್ದೇಶನದ ‘ಗೋಲ್ಡನ್‌ ಸ್ಟಾರ್‌’ ಗಣೇಶ್‌ ನಾಯಕ ನಟನಾಗಿರುವ ‘ಗಿಮಿಕ್’ ಚಿತ್ರ ಆಗಸ್ಟ್‌ 15ರಂದು ತೆರೆ ಕಾಣುತ್ತಿದೆ. ಗಣೇಶ್‌ ಅವರ ಮೊದಲ ಹಾರರ್‌ ಕಾಮಿಡಿ ಚಿತ್ರ ಇದು. ಈ ಸಿನಿಮಾದ ಶೂಟಿಂಗ್‌ ವೇಳೆ ತಂದೆಯ ಸಾವಿನ ಸುದ್ದಿ ಗೊತ್ತಾದರೂ ಗಣೇಶ್‌ ಅವರು ಕಾಮಿಡಿ ದೃಶ್ಯದಲ್ಲಿ ನಟಿಸಿ ಕಲಾವಿದನ ಜವಾಬ್ದಾರಿತನ ಮೆರೆದ ಸಂಗತಿ ಬಹುತೇಕರಿಗೆ ಗೊತ್ತಿಲ್ಲ.

ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ನಾಗಣ್ಣ ಈ ವಿಷಯವನ್ನು ಬಹಿರಂಗಪಡಿಸಿ ಗಣೇಶ್‌ ಅವರ ಕಾರ್ಯತತ್ಪರತೆಗೆ ಮೆಚ್ಚುಗೆ ಸೂಚಿಸಿದರು. ಸಾವಿನ ಸುದ್ದಿಯ ನಡುವೆಯೂ ಶೂಟಿಂಗ್‌ ನಡೆಸಿದೆ ಎಂಬ ಬೇಸರವನ್ನೂ ತೋಡಿಕೊಂಡರು.

ಅಂದಿನ ದುಃಖದ ಸನ್ನಿವೇಶ ಮತ್ತು ವೃತ್ತಿಬದುಕಿನ ಸವಾಲಿನ ಕ್ಷಣವನ್ನು ಗಣೇಶ್‌ ನೆನಪಿಸಿಕೊಂಡಿದ್ದು ಹೀಗೆ: ‘ಯಲಹಂಕದ ಬಳಿ ಶೂಟಿಂಗ್‌ ನಡೆಯುತ್ತಿತ್ತು. ಅಂದು ಮಧ್ಯಾಹ್ನ 3.30 ಗಂಟೆ. ಆ‌ಗ ಮನೆಯಿಂದ ಫೋನ್‌ ಬಂತು. ಆಗ ನಾನು ಕಾಮಿಡಿ ದೃಶ್ಯವೊಂದಕ್ಕೆ ಸಿದ್ಧತೆ ನಡೆಸಿದ್ದೆ. ಆ ಫೋನ್‌ನಿಂದ ಕೇಳಿದ ಸುದ್ದಿಯಿಂದ ಕಲಾವಿದನ ಕಷ್ಟ ಏನೆಂಬುದು ನನಗೆ ಅರ್ಥವಾಯಿತು. ಮಾಧ್ಯಮದವರು ನನ್ನನ್ನು ನ್ಯಾಚುರಲ್‌ ನಟ ಎಂದು ಬರೆಯುತ್ತಾರೆ. ಅದಕ್ಕೆ ನಾನೆಷ್ಟು ಅರ್ಹ ಎಂಬುದು ಗೊತ್ತಿಲ್ಲ. ಆದರೆ, ನಟನೊಬ್ಬ ಮಾನಸಿಕ ತೊಂದರೆಗೆ ಸಿಲುಕಿದರೆ ನಟನೆ ಎಷ್ಟು ಕಷ್ಟ ಎಂಬುದು ಅಂದು ಅರಿವಾಯಿತು’.

ADVERTISEMENT

‘ನನ್ನ ಅಪ್ಪನ ಸಾವಿನ ಸುದ್ದಿಯನ್ನು ರವಿಶಂಕರ್‌ ಗೌಡಗೆ ಮಾತ್ರ ಹೇಳಿದ್ದೆ ಅಷ್ಟೇ. ನಾನು ನಿರ್ದೇಶಕ ನಾಗಣ್ಣ ಅವರ ಬಳಿಗೆ ತೆರಳಿ ಇನ್ನೆಷ್ಟು ಸೀನ್‌ಗಳಿವೆ ಎಂದು ಕೇಳಿದೆ. ಮೂರ್ನಾಲ್ಕು ಸೀನ್‌ಗಳಿಗೆ ಎಂದರು. ಅದು ಕಾಮಿಡಿ ದೃಶ್ಯ. ಗುರುದತ್‌ ಮನೆಗೆ ಹೆಣ್ಣು ನೋಡಲು ಹೋಗಿರುತ್ತೇನೆ. ಆಗ ಅವರು ನನ್ನನ್ನು ಸಂದರ್ಶನ ಮಾಡುತ್ತಾರೆ. ಶ್ರೀಮಂತರ ಪ್ರಶ್ನೆಗೆ ಒಬ್ಬ ಮಧ್ಯಮ ವರ್ಗದ ಹುಡುಗ ಹೇಗೆ ಉತ್ತರಿಸುತ್ತಾನೆ ಎನ್ನುವುದೇ ಆ ದೃಶ್ಯದ ಸಾರಾಂಶ. ನನ್ನಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎಂದು ನಿರ್ಧರಿಸಿ ಶೂಟಿಂಗ್‌ನಲ್ಲಿ ‍ಪಾಲ್ಗೊಂಡೆ. ಆ ದೃಶ್ಯದ ಶೂಟಿಂಗ್‌ ಮುಗಿದ ಬಳಿಕ ನಾನು ಮನೆಯತ್ತ ಹೊರಟೆ. ಆ ದೃಶ್ಯಕ್ಕೆ ಡಬ್ಬಿಂಗ್‌ ಮಾಡುವಾಗಲೂ ಅಂದಿನ ಟೆನ್ಷನ್‌ ನನ್ನನ್ನು ಕಾಡುತ್ತಿತ್ತು’ ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.