‘ಬಹದ್ದೂರ್’, ‘ಭರ್ಜರಿ’, ‘ಭರಾಟೆ’ ಹಾಗೂ ‘ಜೇಮ್ಸ್’ ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್ ಇದೀಗ ನಟ ಗಣೇಶ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಗಣೇಶ್ ಜನ್ಮದಿನದಂದು ಹೊಸ ಚಿತ್ರದ ಘೋಷಣೆಯಾಗಿದೆ.
ಈ ಮೂಲಕ ‘ಪಿನಾಕ’, ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಜೊತೆಗೆ ಮತ್ತೊಂದು ಪ್ರಾಜೆಕ್ಟ್ ಗಣೇಶ್ ಸಿನಿಬ್ಯಾಂಕ್‌ಗೆ ಸೇರ್ಪಡೆಯಾಗಿದೆ. ಇದರ ಜೊತೆಗೆ ಅರಸು ಅಂತಾರೆ ನಿರ್ದೇಶನದ ಚಿತ್ರದಲ್ಲೂ ಗಣೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಬಳಿಕ ಚೇತನ್ ಕುಮಾರ್ ನಿರ್ದೇಶನದಲ್ಲಿ ಗಣೇಶ್ ನಟಿಸಲಿದ್ದಾರೆ.
ಕಮರ್ಷಿಯಲ್ ಸಿನಿಮಾಗಳಿಗೆ ಹೆಸರಾದವರು ಚೇತನ್. ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವವರು ಗಣೇಶ್. ಇವರಿಬ್ಬರ ಕಾಂಬಿನೇಷನ್‌ನ ಚೊಚ್ಚಲ ಸಿನಿಮಾ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಚಿತ್ರದ ಕಥೆಯಲ್ಲಿ ರೊಮ್ಯಾಂಟಿಕ್ ಅಂಶಗಳು ಇರಲಿದ್ದು, ಚೇತನ್ ಅವರ ಮೇಕಿಂಗ್ ಸ್ಟೈಲ್‌ನಲ್ಲಿಯೇ ಚಿತ್ರವಿರಲಿದೆ ಎಂಬ ಮಾಹಿತಿ ದೊರಕಿದೆ.
ಎಸ್‌ವಿಸಿ ಫಿಲಂಸ್ ಲಾಂಛನದಲ್ಲಿ ಎಂ.ಮುನೇಗೌಡ ಅವರು ಗಣೇಶ್ ಅವರ ಹೊಸ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಇದು ಇವರು ನಿರ್ಮಾಣ ಮಾಡುತ್ತಿರುವ ಮೂರನೇ ಸಿನಿಮಾವಾಗಿದೆ. ಪ್ರಮೋದ್, ಪೃಥ್ವಿ ಅಂಬಾರ್ ನಟನೆಯ ‘ಭುವನಂ ಗಗನಂ’ ನಿರ್ಮಿಸಿದ್ದ ಎಂ.ಮುನೇಗೌಡ ಅವರು ಪ್ರಸ್ತುತ ನೀನಾಸಂ ಸತೀಶ್ ನಟನೆಯ ‘ಅಯೋಗ್ಯ 2’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗಣೇಶ್ ಹಾಗೂ ಚೇತನ್ ಕುಮಾರ್ ಅವರ ಕಾಂಬಿನೇಶನ್‌ನ ಚೊಚ್ಚಲ ಚಿತ್ರ ಇದಾಗಿದ್ದು, ಚಿತ್ರದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.