ಮನೋಜ್
ನಟ ದರ್ಶನ್‌ನ ಅಕ್ಕನ ಮಗ ಮನೋಜ್ ನಟನೆಯ ‘ಗಾರ್ಡನ್’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಆರ್ಯ ಎಂ.ಮಹೇಶ್ ನಿರ್ದೇಶನದ ಚಿತ್ರ ಪೌರಕಾರ್ಮಿಕರ ಕುರಿತಾದ ಕಥೆಯನ್ನು ಹೊಂದಿದೆ. ಮಹೇಶ್ ಈ ಹಿಂದೆ ‘ಕೋಲಾರ’, ‘ಇಂಗ್ಲಿಷ್ ಮಂಜ’ ಚಿತ್ರಗಳನ್ನು ನಿರ್ದೇಶಿಸಿದ್ದರು.
‘ಪೌರಕಾರ್ಮಿಕರ ಬದುಕು–ಬವಣೆಗಳನ್ನು ಬಿಂಬಿಸುವ ಚಿತ್ರವಿದು. ಅವರು ಕಸದ ಯಾರ್ಡ್‌ಗೆ ‘ಗಾರ್ಡನ್’ ಎಂದು ಕರೆಯುತ್ತಾರೆ. ಅದನ್ನೇ ಶೀರ್ಷಿಕೆಯಾಗಿಸಿಕೊಂಡಿದ್ದೇವೆ. ಪೌರಕಾರ್ಮಿಕರ ನಾಯಕನಾಗಿ ನನ್ನ ಪಾತ್ರವಿರುತ್ತದೆ. ಇಂದು ಮಾಮೂಲಿ ಆ್ಯಕ್ಷನ್ ಸಿನಿಮಾ ಮಾಡಿದರೆ ನಾವು ಕೂಡ ನೂರರಲ್ಲಿ ಒಬ್ಬರಾಗುತ್ತೇವೆ. ಹೀಗಾಗಿ ನಾನು ಭಿನ್ನ ಕಥೆಗಳನ್ನೇ ಆಯ್ದುಕೊಳ್ಳುತ್ತೇನೆ’ ಎನ್ನುತ್ತಾರೆ ಮನೋಜ್.
‘ಕಥೆ ಕೇಳಿದಾಗ ಆಫ್‌ಬೀಟ್ ಸಿನಿಮಾ ಎನ್ನಿಸಬಹುದು. ಆದರೆ ಗಟ್ಟಿಯಾದ ಕಥೆಯೊಂದಿಗೆ ಮನರಂಜನೀಯ ಅಂಶಗಳೂ ಇವೆ. ಕಥೆಯಲ್ಲಿ ಲವ್ ಟ್ರ್ಯಾಕ್ ಇದೆ. ನಾಲ್ಕು ಫೈಟ್‌ಗಳಿವೆ. ಒಟ್ಟಾರೆಯಾಗಿ ಕಮರ್ಷಿಯಲ್ ಸಿನಿಮಾ. ನಾಯಕಿ ಆಯ್ಕೆಯಾಗಿಲ್ಲ. ಈ ಚಿತ್ರದಲ್ಲಿನ ಕಲಾವಿದರ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇವೆ. ನನ್ನ ‘ಧರಣಿ’ ಸಿನಿಮಾದ ಒಂದು ಹಾಡಿನ ಚಿತ್ರೀಕರಣ ಬಾಕಿಯಿದೆ. ಅದು ಮುಗಿಯುತ್ತಿದ್ದಂತೆ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ‘ಧರಣಿ’ ಶುರುವಾಗಿ ಎರಡು ವರ್ಷಗಳಾಯ್ತು. ಮುಂದಿನ ತಿಂಗಳುಗಳಲ್ಲಿ ಸಾಕಷ್ಟು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ‘ಧರಣಿ’ ಮುಂದಿನ ವರ್ಷದ ಪ್ರಾರಂಭದಲ್ಲಿ ತೆರೆಗೆ ಬರಲಿದೆ’ ಎಂದು ಅವರು ಮಾಹಿತಿ ನೀಡಿದರು.
ಚಿತ್ರಕ್ಕೆ ಮುನಿರಾಜು ಬಂಡವಾಳ ಹೂಡುತ್ತಿದ್ದಾರೆ. ಎ.ಎಂ.ನೀಲ್ ಸಂಗೀತ, ಮುಂಜಾನೆ ಮಂಜು ಗಿರಿ ಸಂಕಲನವಿದೆ. ಅಕ್ಟೋಬರ್ ಮೂರನೆ ವಾರದಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡ ಯೋಜನೆ ಹಾಕಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.