ADVERTISEMENT

ಗೀತಾ ಹೇಳಿದ ಚಳವಳಿ ಕಥನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 19:30 IST
Last Updated 26 ಸೆಪ್ಟೆಂಬರ್ 2019, 19:30 IST
‘ಗೀತಾ’ ಚಿತ್ರದಲ್ಲಿ ಗಣೇಶ್‌ ಮತ್ತು ಶಾನ್ವಿ ಶ್ರೀವಾಸ್ತವ
‘ಗೀತಾ’ ಚಿತ್ರದಲ್ಲಿ ಗಣೇಶ್‌ ಮತ್ತು ಶಾನ್ವಿ ಶ್ರೀವಾಸ್ತವ   

ಆ ಸಭಾಂಗಣದೊಳಗೆ ಕನ್ನಡ ಚಳವಳಿಯ ಕಾವು ಸೃಷ್ಟಿಯಾಗಿತ್ತು. ಪೋಸ್ಟರ್‌ ಮೇಲೆ ವರನಟ ರಾಜಕುಮಾರ್‌ ಅವರು ಗೋಕಾಕ್‌ ಚಳವಳಿಯಲ್ಲಿ ಪಾಲ್ಗೊಂಡಿದ್ದ ಫೋಟೊ ರಾರಾಜಿಸುತ್ತಿತ್ತು. ಮತ್ತೊಂದು ಪೋಸ್ಟರ್‌ನಲ್ಲಿ ಮೂವರು ನಾಯಕಿಯರೊಟ್ಟಿಗೆ ನಟ ಗಣೇಶ್‌ ಮುುಗುಳು ನಗುತ್ತಿದ್ದರು. ಕನ್ನಡ ಚಳವಳಿಗಾರನ ವೇಷದಲ್ಲಿ ಕಾಣಿಸಿಕೊಂಡ ಫೋಟೊವೂ ಅಲ್ಲಿತ್ತು.

ಅದು ವಿಜಯ್‌ ನಾಗೇಂದ್ರ ನಿರ್ದೇಶನದ ‘ಗೀತಾ’ ಚಿತ್ರದ ಸುದ್ದಿಗೋಷ್ಠಿ. ಕಾಲೇಜು ದಿನಗಳಲ್ಲಿ ದಿವಂಗತ ಶಂಕರನಾಗ್‌ ಅವರ ‘ಗೀತಾ’ ಚಿತ್ರದ ಹಾಡಿಗೆ ಹೆಜ್ಜೆ ಹಾಕುತ್ತಿದ್ದವರು ಗಣೇಶ್. ಈಗ ಆ ಚಿತ್ರದ ಶೀರ್ಷಿಕೆಯೇ ತಮ್ಮ ಸಿನಿಮಾಕ್ಕೆ ಟೈಟಲ್‌ ಆಗಿರುವುದಕ್ಕೆ ಅವರು ಮೊಗದಲ್ಲಿ ಖುಷಿ ಇಣುಕಿತ್ತು. ‘ಚಿತ್ರದ ಕಥೆ ಕೇಳಿದಾಗಲೇ ಇದರಲ್ಲಿ ನಟಿಸಲು ನಿರ್ಧರಿಸಿದೆ. ಆ್ಯಂಗ್ರಿ ಯಂಗ್‌ಮನ್‌ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರದ ಹೆಸರು ಶಂಕರ್‌. ಇದೊಂದು ಕಾಲ್ಪನಿಕ ಪಾತ್ರ. ಗೋಕಾಕ್‌ ಚಳವಳಿಯ ಹಿನ್ನೆಲೆ ಇಟ್ಟುಕೊಂಡು ಕಥೆ ಹೊಸೆಯಲಾಗಿದೆ’ ಎಂದು ವಿವರಿಸಿದರು ಗಣೇಶ್‌.

ಚಿತ್ರದಲ್ಲಿ 50 ನಿಮಿಷಗಳ ಕಾಲ ಚಳವಳಿಯ ದೃಶ್ಯಾವಳಿಗಳು ಇವೆಯಂತೆ. ಎರಡು ಶೇಡ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಗೀತಾ ಯಾರು ಎನ್ನುವುದೇ ಚಿತ್ರದ ಕಥಾಹಂದರ.ನಿರ್ದೇಶಕ ವಿಜಯ್ ನಾಗೇಂದ್ರ, ‘ಚಿತ್ರದಲ್ಲಿ ಸುಧಾರಾಣಿ ಅವರು ಸೇರಿದಂತೆ ನಾಲ್ವರು ಮಹಿಳೆಯರು ಇದ್ದಾರೆ. ವ್ಯಕ್ತಿಯೊಬ್ಬನ ಸುತ್ತ ಆ ಪಾತ್ರಗಳು ಹೇಗೆ ಸುತ್ತುತ್ತವೆ ಎನ್ನುವುದೇ ಚಿತ್ರದ ತಿರುಳು’ ಎಂದ ಅವರು, ಕಥೆಯ ಗುಟ್ಟನ್ನು ಬಿಟ್ಟುಕೊಡಲಿಲ್ಲ. ನಾಯಕಿ ಶಾನ್ವಿ ಶ್ರೀವಾಸ್ತವ, ‘ಒಂದೇ ಚಿತ್ರದಲ್ಲಿ ಎರಡು ಪಾತ್ರ ಸಿಕ್ಕಿರುವುದು ನನ್ನ ಅದೃಷ್ಟ’ ಎಂದಷ್ಟೇ ಹೇಳಿದರು.

ನಿರ್ಮಾಪಕ ಸೈಯದ್‌ ಸಲಾಂ, ‘ಈಗ ಪೈರಸಿ ಹಾವಳಿ ಉಲ್ಬಣಿಸಿದೆ. ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಮೂರು ವಾರಗಳ ಬಳಿಕ ಬೇರೆಡೆ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ನಟಿ ಸುಧಾರಾಣಿ ಅನುಭವ ಹಂಚಿಕೊಂಡರು. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಅನೂಪ್‌ ರುಬೆನ್ಸ್‌ ಸಂಗೀತ ಸಂಯೋಜಿಸಿದ್ದಾರೆ. 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದೇ ವಾರ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.