ADVERTISEMENT

‘ಘೋಸ್‌ಖೋರ್‌ ಪಂಡತ್‌’ ಸಿನಿಮಾದ ಶೀರ್ಷಿಕೆ ಬದಲು: ಹೈಕೋರ್ಟ್‌ಗೆ ನೆಟ್‌ಫ್ಲಿಕ್ಸ್‌

ಪಿಟಿಐ
Published 10 ಫೆಬ್ರುವರಿ 2026, 14:48 IST
Last Updated 10 ಫೆಬ್ರುವರಿ 2026, 14:48 IST
   

ನವದೆಹಲಿ: ನಟ ಮನೋಜ್ ಬಾಜಪೇಯಿ ಅಭಿನಯದ ‘ಘೂಸ್‌ಖೋರ್‌ ಪಂಡತ್’ ಸಿನಿಮಾದ ಹೆಸರನ್ನು ಬದಲಿಸಲಾಗುವುದು ಎಂದು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ ಇಂಡಿಯಾ, ದೆಹಲಿ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.

ಸಿನಿಮಾ ಶೀರ್ಷಿಕೆಯು ಆಕ್ಷೇಪಾರ್ಹ ಮತ್ತು ಮಾನಹಾನಿಕರವಾಗಿದ್ದು, ಅದರ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್‌ ಕೌರವ್‌ ಅವರ ಪೀಠಕ್ಕೆ ನೆಟ್‌ಫ್ಲಿಕ್ಸ್ ಈ ಅರಿಕೆ ಮಾಡಿಕೊಂಡಿದೆ.

ಸಿನಿಮಾ ಈಗಾಗಲೇ ಸಂಕಲನದ ಹಂತದಲ್ಲಿದ್ದು, ಇದೊಂದು ಕಾಲ್ಪನಿಕ ಪೊಲೀಸ್‌ ಕಥಾಹಂದರವನ್ನು ಹೊಂದಿದೆ. ಸಿನಿಮಾದ ಶೀರ್ಷಿಕೆಯು ಅನಿರೀಕ್ಷಿತ ಅಡಚಣೆಗೆ ಕಾರಣವಾಯಿತಾದರೂ ಕಥಾವಸ್ತು ಅಂತಹ ಅಂಶಗಳನ್ನು ಒಳಗೊಂಡಿಲ್ಲ. ಆದರೂ, ಸಿನಿಮಾ ಪ್ರಚಾರದ ಎಲ್ಲ ವಸ್ತುಗಳು, ವಿಷಯಗಳನ್ನೂ ತೆಗೆದುಹಾಕಲಾಗುವುದು ಎಂದು ನೆಟ್‌ಫ್ಲಿಕ್ಸ್‌ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. 

ADVERTISEMENT

ನೆಟ್‌ಫ್ಲಿಕ್ಸ್‌ನ ಈ ನಿರ್ಧಾರವನ್ನು ಪುರಸ್ಕರಿಸಿದ ನ್ಯಾಯಪೀಠ, ‘ಚಿತ್ರದ ಶೀರ್ಷಿಕೆ ವಿಚಾರವಾಗಿ ಉದ್ಭವಿಸಿದ ಕಳವಳಗಳನ್ನು ಅರಿತು, ಚಿತ್ರದ ನಿರೂಪಣೆ ಮತ್ತು ಉದ್ದೇಶಕ್ಕೆ ಪೂರಕವಾಗುವಂತಹ ಪರ್ಯಾಯ ಶೀರ್ಷಿಕೆಯನ್ನು ನೀಡುವ ಬಗ್ಗೆ ನಿರ್ಮಾಪಕರು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗದುಕೊಂಡಿದ್ದಾರೆ. ಹೀಗಾಗಿ ಇದರಲ್ಲಿ ಮತ್ತೇನೂ ತೀರ್ಮಾನಿಸುವ ಅಗತ್ಯವಿಲ್ಲ’ ಎಂದು ತಿಳಿಸಿ, ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

ನೀರಜ್‌ಪಾಂಡೆ ನಿರ್ದೇಶನದ ಈ ಸಿನಿಮಾದ ಶೀರ್ಷಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. 

‘ಘೂಸ್‌ಖೋರ್‌’ ಎಂಬುದು ಲಂಚಕೋರ ಅಥವಾ ಭ್ರಷ್ಟ ಎನ್ನುವ ಅರ್ಥವನ್ನು ಹೊಂದಿದ್ದು, ಅದರೊಂದಿಗೆ ‘ಪಂಡತ್‌’ ಎಂಬ ಪದ ಸಂಯೋಜನೆಯು ಪಂಡಿತ ಸಮುದಾಯದ ಘನತೆಗೆ ಧಕ್ಕೆ ತರುವಂಥದ್ದು ಎಂದು ಆರೋಪಿಸಿ, ಅರ್ಜಿದಾರ ಮಹೇಂದರ್‌ ಚತುರ್ವೇದಿ ಎಂಬವರು ಸಿನಿಮಾ ಬಿಡುಗಡೆಗೆ ತಡೆ ಕೋರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.