ADVERTISEMENT

ಪಂಚಭಾಷೆಯಲ್ಲಿ ‘ಗಿರ್ಮಿಟ್‌’ ರುಚಿ

​ಪ್ರಜಾವಾಣಿ ವಾರ್ತೆ
Published 13 ಮೇ 2019, 8:49 IST
Last Updated 13 ಮೇ 2019, 8:49 IST
   

‘ಗಿರ್ಮಿಟ್‌’ ಉತ್ತರ ಕರ್ನಾಟಕದ ಸ್ವಾಧಿಷ್ಟ ಖಾದ್ಯ. ಬಾಯಲ್ಲಿ ನೀರೂರಿಸುವ ಇದರ ಹೆಸರು ಇಟ್ಟುಕೊಂಡೇ ಮಕ್ಕಳ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಅಂದಹಾಗೆ ಇದನ್ನು ನಿರ್ದೇಶಿಸಿರುವುದು ‘ಕೆ.ಜಿ.ಎಫ್‌’ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್‌. ಇದಕ್ಕೆ ಸಂಗೀತ, ಸಂಕಲನ ನೀಡುವ ಜೊತೆಗೆ ಸಾಹಿತ್ಯ ರಚನೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.

ನಾಯಕ ಮಾಸ್ಟರ್ ರಾಜ್‍ಗೆ ‘ರಾಕಿಂಗ್‌ ಸ್ಟಾರ್’ ಯಶ್ ಮತ್ತು ನಾಯಕಿ ಪುಟಾಣಿ ರಶ್ಮಿಗೆ ನಟಿ ರಾಧಿಕಾ ಪಂಡಿತ್ ಕಂಠದಾನ ಮಾಡಿರುವುದು ಈ ಚಿತ್ರದ ವಿಶೇಷ. 280 ಮಕ್ಕಳು ಇದರಲ್ಲಿ ನಟಿಸಿದ್ದಾರಂತೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ತೆಲುಗು, ಹಿಂದಿಯಲ್ಲಿ ‘ಪಕ್ಕಾ ಮಾಸ್‌’ ಮತ್ತು ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ‘ಪೋಡಿ ಮಾಸ್’ ಎಂದು ಹೆಸರಿಡಲಾಗಿದೆ. ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ಮಕ್ಕಳು ನಾಯಕ, ನಾಯಕಿಯಾಗಿ ನಟಿಸಿರುವುದು ಸಂತಸದ ವಿಚಾರ. ನಿರ್ದೇಶಕರ ಈ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಬೇಕು. ಬಂಡವಾಳ ಹೂಡಿರುವ ನಿರ್ಮಾಪಕರ ಧೈರ್ಯವನ್ನೂ ಶ್ಲಾಘಿಸಬೇಕು’ ಎಂದರು ಟೀಸರ್‌ ಬಿಡುಗಡೆಗೊಳಿಸಿದ ನಟ ಪುನೀತ್ ರಾಜ್‌ಕುಮಾರ್.

ADVERTISEMENT

‘ಕಾರ್ಟೂನ್, ಸಾಕ್ಷ್ಯಚಿತ್ರಗಳಿಗೆ ಪ್ರಸಿದ್ಧ ಕಲಾವಿದರು ಹಿನ್ನೆಲೆ ಧ್ವನಿ ನೀಡುತ್ತಾರೆ. ಆದರೆ, ಯಶ್‌ ಮತ್ತು ರಾಧಿಕಾ ಪಂಡಿತ್ ಕಂಠದಾನ ಮಾಡಿರುವುದು ಹೊಸ ಪ್ರಯೋಗ. ಉಳಿದ ಕಲಾವಿದರಿಗೆ ಅವರ ಈ ನಿರ್ಧಾರ ಮಾದರಿಯಾಗಲಿದೆ’ ಎಂದು ಆಶಿಸಿದರು.

ರವಿ ಬಸ್ರೂರ್‌, ‘ಕಮರ್ಷಿಯಲ್‌ ದಾಟಿಯಲ್ಲಿ ಈ ಮಕ್ಕಳ ಚಿತ್ರ ತೋರಿಸಲು ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಛಾಯಾಗ್ರಹಣ ಸಚಿನ್‍ ಬಸ್ರೂರ್ ಅವರದ್ದು. ನಾಲ್ಕು ಹಾಡುಗಳಿಗೆ ನವೀನ್‍ ಸಜ್ಜು, ಪುನೀತ್‍ ರಾಜ್‍ಕುಮಾರ್, ಸಂತೋಷ್‍ ವೆಂಕಿ, ಆರುಂಧತಿ ಧ್ವನಿ ನೀಡಿದ್ದಾರೆ. ಕುಂದಾಪುರ, ಬಸ್ರೂರು ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ. ಎನ್.ಎಸ್. ರಾಜಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎನ್. ಸೂರಜ್‍ ಚೌದರಿ, ಎನ್‌. ನರೇನ್‍ ಚಂದ್ರ ಚೌಧರಿ ಸಹ ನಿರ್ಮಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.