ADVERTISEMENT

‘ಗ್ರಾಮಾಯಣ’ ನಿರ್ಮಾಪಕ ಮೂರ್ತಿ ನಿಧನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 14:56 IST
Last Updated 3 ಜುಲೈ 2020, 14:56 IST
ಎನ್‌.ಎಲ್‌.ಎನ್‌. ಮೂರ್ತಿ
ಎನ್‌.ಎಲ್‌.ಎನ್‌. ಮೂರ್ತಿ   

ಬೆಂಗಳೂರು: ವಿನಯ್‌ ರಾಜ್‌ಕುಮಾರ್‌ ನಟಿಸುತ್ತಿರುವ ‘ಗ್ರಾಮಾಯಣ’ ಚಿತ್ರದ ನಿರ್ಮಾಪಕ ಎನ್.ಎಲ್‌.ಎನ್‌. ಮೂರ್ತಿ (39) ಶುಕ್ರವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರಿಗೆ ಪತ್ನಿ ಆರ್‌. ಲತಾ, ಮಗ ಮತ್ತು ಮಗಳು ಇದ್ದಾರೆ. ನಗರದ ಬನಶಂಕರಿಯಲ್ಲಿ ವಾಸವಾಗಿದ್ದರು. ಕೋವಿಡ್‌–19 ಪರೀಕ್ಷೆವರದಿ ಬಂದ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತಿದೆ. ಶನಿವಾರ ಬನಶಂಕರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇತ್ತೀಚೆಗಷ್ಟೇ ಹೊಸ ಮನೆ ನಿರ್ಮಿಸಿದ್ದ ಅವರು ಗೃಹಪ್ರವೇಶ ನಡೆಸುವ ಯೋಜನೆಯಲ್ಲಿದ್ದರು. ‘ಗ್ರಾಮಾಯಣ’ ಚಿತ್ರದ ಚಿತ್ರೀಕರಣ ಆರಂಭಿಸುವ ತಯಾರಿಯನ್ನೂ ಮಾಡಿಕೊಂಡಿದ್ದರು. ಈಗಾಗಲೇ ಚಿತ್ರೀಕರಣದ ತಾಣಗಳನ್ನು ಅಂತಿಮಗೊಳಿಸಲಾಗಿತ್ತು. ಇನ್ನು ಒಂದು ವಾರದಲ್ಲಿ ಚಿತ್ರೀಕರಣ ಆರಂಭವಾಗುವುದರಲ್ಲಿತ್ತು ಎಂದು ‘ಗ್ರಾಮಾಯಣ’ ಚಿತ್ರದ ನಿರ್ಮಾಣ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಸಂದೀಪ್‌ ತಿಳಿಸಿದ್ದಾರೆ.

ADVERTISEMENT

ಡಯಾಲಿಸಿಸ್‌ ಚಿಕಿತ್ಸೆಗೆ ಒಳಗಾಗಿದ್ದ ಮೂರ್ತಿ ಅವರ ತಾಯಿ ಗುರುವಾರವಷ್ಟೇ ನಿಧನ ಹೊಂದಿದ್ದರು.

ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಮೂರ್ತಿ ಸಿನಿಮಾ ರಂಗದ ಮೇಲಿನ ಆಸಕ್ತಿಯಿಂದಾಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು.‌ ನಟ ಮೋಹನ್‌, ಖುಷಿ ಮುಖರ್ಜಿ, ನವೀನ್‌ ಕೃಷ್ಣ, ರಮೇಶ್‌ ಪಂಡಿತ್‌, ಬಿ. ಜಯಶ್ರೀ, ಶ್ರೀನಿವಾಸ ಪ್ರಭು, ಅರವಿಂದ ರಾವ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಇತ್ಯರ್ಥ’ ಚಿತ್ರಕ್ಕೂ ಮೂರ್ತಿ ಬಂಡವಾಳ ಹೂಡಿದ್ದರು. ಈ ಚಿತ್ರವನ್ನು ಎ.ಜಿ. ಶೇಷಾದ್ರಿ ನಿರ್ದೇಶನ ಮಾಡಿದ್ದು, ಚಿತ್ರ ಬಿಡುಗಡೆಯಾಗುವ ಹಂತದಲ್ಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.