ADVERTISEMENT

ಗುಬ್ಬಿ ಸೃಷ್ಟಿಸುವ ಹಾಸ್ಯ

ವಿಜಯ್ ಜೋಷಿ
Published 15 ಆಗಸ್ಟ್ 2019, 19:30 IST
Last Updated 15 ಆಗಸ್ಟ್ 2019, 19:30 IST
ಶುಭಾ ಪೂಂಜಾ, ರಾಜ್ ಬಿ. ಶೆಟ್ಟಿ
ಶುಭಾ ಪೂಂಜಾ, ರಾಜ್ ಬಿ. ಶೆಟ್ಟಿ   

ಸುಜಯ್ ಶಾಸ್ತ್ರಿ ನಿರ್ದೇಶನದ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ಗುರುವಾರ ತೆರೆಗೆ ಬಂದಿದೆ. ರಾಜ್ ಬಿ. ಶೆಟ್ಟಿ ಅವರು ಪ್ರಧಾನ ಪಾತ್ರ ನಿಭಾಯಿಸಿರುವ ಇದು ಹಾಸ್ಯ ಪ್ರಧಾನ ಚಿತ್ರ. ‘ರಾಜ್ ಇದರಲ್ಲಿ ನಟಿಸಲು ಒಪ್ಪದಿದ್ದರೆ, ಸಿನಿಮಾ ಯೋಜನೆಯೇ ಬಿದ್ದುಹೋಗುತ್ತಿತ್ತು’ ಎನ್ನುತ್ತಾರೆ ಸುಜಯ್.

ಸಿನಿಮಾ ಬಿಡುಗಡೆಗೂ ಮೊದಲು ಸುಜಯ್ ಮತ್ತು ರಾಜ್ ಮಾತಿಗೆ ಸಿಕ್ಕಿದ್ದರು. ದೀನನೊಬ್ಬನ ಮೇಲೆ ಬಲಾಢ್ಯ ದಾಳಿ ಮಾಡಿದಾಗ, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎನ್ನುವುದಿದೆ. ಹಾಸ್ಯಮಯ ಚಿತ್ರಕ್ಕೆ ಇದನ್ನು ಶೀರ್ಷಿಕೆಯಾಗಿ ಬಳಸಿದ್ದು ಏಕೆ ಎಂದು ಪ್ರಶ್ನಿಸಿದಾಗ, ‘ಕಥಾ ನಾಯಕನ ಹೆಸರು ವೆಂಕಟಕೃಷ್ಣ ಗುಬ್ಬಿ. ಅವನ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗ ಹೇಗೆ ಆಗುತ್ತದೆ. ಅದಕ್ಕೆ ಹಾಸ್ಯದ ಲೇಪವನ್ನು ಹೇಗೆ ಕೊಡಲಾಗಿದೆ ಎನ್ನುವುದೇ ಸಿನಿಮಾ ಕಥೆ. ಹಾಸ್ಯವನ್ನು ಎಲ್ಲಿಯೂ ತುರುಕುವ ಕೆಲಸ ಮಾಡಿಲ್ಲ’ ಎಂದು ಉತ್ತರಿಸಿದರು ಸುಜಯ್.

ಗುಬ್ಬಿ–ಬ್ರಹ್ಮಾಸ್ತ್ರ ಮಾತನ್ನು ಯಾವ ಸಂದರ್ಭದ ಜೊತೆ ತಳುಕು ಹಾಕಿ ನೋಡಲಾಗುತ್ತದೆ ಎಂಬುದರ ಮೇಲೆ ಅದು ಭಿನ್ನ ಅರ್ಥ ಕೊಡುತ್ತದೆ ಎಂದರು.

ADVERTISEMENT

‘ಹಾಸ್ಯ ಎಂದಿಗೂ ಸಾಯುವುದಿಲ್ಲ. ಹಾಸ್ಯವನ್ನು ವೀಕ್ಷಕರಿಗೆ ತಲುಪಿಸಬೇಕು. ಹಾಸ್ಯ ಇದೆ ಎಂಬ ಕಾರಣಕ್ಕೇ ಚಿತ್ರದ ಟ್ರೇಲರ್‌ ಅನ್ನು ಐದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಚಿತ್ರದಲ್ಲಿ ಬೋಧನೆ ಇಲ್ಲ. ರಾಜ್ ಈ ಚಿತ್ರದ ಯುಎಸ್‌ಪಿ’ ಎಂದು ಒಂದೇ ಉಸುರಿನಲ್ಲಿ ಹೇಳಿದರು ಸುಜಯ್. ಆಗ ಸುಜಯ್ ಮಾತು ತುಂಡರಿಸಿದ ರಾಜ್, ‘ಸಂಭಾಷಣೆ ಮೂಲಕ ಹಾಗೂ ಆಂಗಿಕ ಹಾವಭಾವ ಮೂಲಕ ಜನರನ್ನು ನಗಿಸುವ ಯತ್ನ ಈ ಸಿನಿಮಾದಲ್ಲಿ ಆಗಿದೆ. ಇವುಗಳ ಜೊತೆಯಲ್ಲೇ, ಗುಪ್ತಗಾಮಿನಿಯಂತಹ ಹಾಸ್ಯವೂ ಇದರಲ್ಲಿದೆ. ರಂಗಭೂಮಿಯ ನಟರೂ ಇದ್ದಾರೆ, ಚಿತ್ರರಂಗದವರೂ ಇದ್ದಾರೆ. ನಗುವೇ ಇದರ ಯುಎಸ್‌ಪಿ’ ಎಂದರು!

ರಾಜ್ ಅವರ ಪ್ರಕಾರ, ‘ನಗುವ ಸಾಮರ್ಥ್ಯ ಇರುವ ಎಲ್ಲ ಮನುಷ್ಯರೂ ಈ ಚಿತ್ರವನ್ನು ವೀಕ್ಷಿಸಬಹುದು, ಇಷ್ಟಪಡಬಹುದು’. ವೆಂಕಟಕೃಷ್ಣ ಗುಬ್ಬಿ ಪಾತ್ರವನ್ನು ರಾಜ್ ಅವರು ನಿಭಾಯಿಸಬೇಕು ಎಂದು ತೀರ್ಮಾನಿಸಿದ್ದು ಚಿತ್ರದ ನಿರ್ಮಾಪಕ ಟಿ.ಆರ್. ಚಂದ್ರಶೇಖರ್. ‘ನನ್ನ ಸಿನಿಮಾದಲ್ಲಿ ನಟಿಸುವಂತೆ ಇವರನ್ನು ಒಪ್ಪಿಸುವೆ ಎಂಬ ಧೈರ್ಯ ಇರಲಿಲ್ಲ. ನನ್ನಿಂದ ಕಥೆ ಕೇಳಿಸಿಕೊಂಡ ರಾಜ್, ನಿರ್ಧಾರ ಹೇಳಲು ಮೂರ್ನಾಲ್ಕು ದಿನ ಸಮಯ ಬೇಕು ಎಂದಿದ್ದರು. ನಟಿಸಲು ಅವರು ಒಪ್ಪದಿದ್ದರೆ ಇಡೀ ಯೋಜನೆಯೇ ಬಿದ್ದುಹೋಗುತ್ತಿತ್ತು’ ಎನ್ನುತ್ತಾರೆ ಸುಜಯ್.

ಒಳ್ಳೆಯ ಹೂರಣ

ತಮ್ಮ ಸಿನಿಮಾ ಹೂರಣದ ಬಗ್ಗೆ ಸುಜಯ್‌ಗೆ ವಿಶ್ವಾಸವಿದೆ. ‘ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳನ್ನು ಗೆಲ್ಲಿಸುವ ಪ್ರಕ್ರಿಯೆ ಕೆಜಿಎಫ್‌ ಚಿತ್ರದ ಮೂಲಕ ಶುರುವಾಗಿದೆ’ ಎಂಬುದು ಅವರ ಅಭಿಪ್ರಾಯ.

ಒಳ್ಳೆಯ ಹೂರಣ ಬಯಸುವ ಸಹೃದಯ ವೀಕ್ಷಕರನ್ನು ಹುಟ್ಟುಹಾಕಬೇಕಾ ಎಂಬ ಪ್ರಶ್ನೆ ಇಟ್ಟಾಗ ರಾಜ್, ‘ನಾವು ಜನರನ್ನು ಬದಲು ಮಾಡುವುದು ಅಂದರೆ ಏನು? ಜನರೇ ಬಡಿದು ನಮ್ಮನ್ನು ಬದಲಿಸುತ್ತಾರೆ’ ಎಂಬ ಉತ್ತರ ನೀಡಿದರು.

‘ನಾವು ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಬೇಕು. ಬಿರಿಯಾನಿ ಬೇಕು ಎಂದವನಿಗೆ ಅನ್ನ– ಸಾಂಬಾರು ಕೊಡಲು ಆಗದು. ಅವನಿಗೆ ಏನು ಬೇಕೋ ಅದನ್ನೇ ಕೊಡಬೇಕು. ಜನ ನಮ್ಮನ್ನು ಬದಲಾಯಿಸುತ್ತಾರೆ. ನಮ್ಮ ಯೋಗ್ಯತೆಗೆ ತಕ್ಕಂತಹ ಸಿನಿಮಾ ಕೊಡೋಣ, ಇಷ್ಟವಾದರೆ ಜನ ಸ್ವೀಕರಿಸುತ್ತಾರೆ. ಉಳಿಸುವುದು, ಬೆಳೆಸುವುದು ಇವನ್ನೆಲ್ಲ ಜನ ನೋಡಿಕೊಳ್ಳುತ್ತಾರೆ’ ಎಂದು ಹೇಳಿದರು ರಾಜ್ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.