‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಈ ಪದಪ್ರಯೋಗ ಸಾಮಾನ್ಯವಾಗಿ ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಮಾತಿನ ನಡುವೆ ನಾಣ್ನುಡಿ ಅಥವಾ ಗಾದೆ ಮಾತು ಆಗಿ ಬಳಕೆಯಾಗುವುದನ್ನು ಕೇಳಿದ್ದೇವೆ.ಇದೇ ಟೈಟಲ್ ಹಿಡಿದುಕೊಂಡು‘ಬೆಲ್ ಬಾಟಮ್’ ಸಿನಿಮಾದ ‘ಸಗಣಿ ಪಿಂಟೋ’ ಪಾತ್ರದ ಖ್ಯಾತಿಯ ಸುಜಯ ಶಾಸ್ತ್ರೀ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ವನ್ನು ಪ್ರೇಕ್ಷಕರ ಮೇಲೆ ಪ್ರಯೋಗಿಸಲು ಹೊರಟಿದ್ದಾರೆ. ಇದು ಶಾಸ್ತ್ರೀ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರೀಕರಣ ಮುಗಿದಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆಯಂತೆ. ಜೂನ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
ಈ ಸಿನಿಮಾ ನೋಡುವ ಪ್ರೇಕ್ಷಕರಿಗೆ ಒಂದು ಚಾಲೆಂಜ್ ಹಾಕಲು ಚಿತ್ರತಂಡ ನಿರ್ಧಾರ ಮಾಡಿದೆಯಂತೆ. ಅದೇನೆಂದರೆ, ಈ ಸಿನಿಮಾ ನೋಡಿ ನಗದೆ ಇರುವ ಪ್ರೇಕ್ಷಕರಿಗೆ ಬಹುಮಾನ ನೀಡುವ ಪ್ರಕಟಣೆಯನ್ನು ಸಿನಿಮಾ ಬಿಡುಗಡೆ ವೇಳೆಗೆ ಹೊರಡಿಸಲು ಚಿತ್ರತಂಡ ತೀರ್ಮಾನಿಸಿದೆಯಂತೆ.
‘ಒಂದು ಮೊಟ್ಟೆ ಕಥೆ’ ಸಿನಿಮಾದ ನಾಯಕ ರಾಜ್ ಬಿ.ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ಮತ್ತು ಅವರಿಗೆ ಜೋಡಿಯಾಗಿ, ವಿದ್ಯಾ ವಿನಾಯಕ ಧಾರಾವಾಹಿಯ ಕವಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಭರಪೂರ ಕಾಮಿಡಿ ಇರುವ ಈ ಚಿತ್ರದಲ್ಲಿ ಸುಜಯ್ ಶಾಸ್ತ್ರಿಯೂ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರಂತೆ.
ಪಕ್ಕಾ ಕಾಮಿಡಿ ಪ್ರಧಾನ ಚಿತ್ರವಾಗಿರುವ ಈ ಸಿನಿಮಾಕ್ಕೆ ಹ್ಯಾಟ್ರಿಕ್ ಹಿಟ್ ಚಿತ್ರಗಳನ್ನು ನೀಡಿದ ‘ಚಮಕ್’, ‘ಅಯೋಗ್ಯ’, ‘ಬೀರ್‌ಬಲ್’ ಚಿತ್ರಗಳ ಖ್ಯಾತಿಯ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಆರ್ಥಿಕ ಇಂಧನ ಒದಗಿಸಿದ್ದಾರೆ. ಮಣಿಕಂಠ ಕದ್ರಿ ಸಂಗೀತ ನೀಡಿದ್ದಾರೆ.
‘ಈವರೆಗೂ ನಾವು ಮಾಡಿರುವ ಸಿನಿಮಾಗಳಲ್ಲೇ ಇದು ಅತೀ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ ಇದು.ಮನರಂಜನೆ ಸಿನಿಮಾಕ್ಕೆ ಮತ್ತೊಂದು ಹೆಸರು ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ವಾಗಲಿದೆ ಎನ್ನುವ ಆತ್ಮವಿಶ್ವಾಸ ನನ್ನದು.ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ಮಂದಿರಕ್ಕೆ ಹೋಗಿ ಕುಳಿತವರು ನಗದೆ ಇರಲು ಚಾನ್ಸೇ ಇಲ್ಲ’ಎನ್ನುತ್ತಾರೆ ನಿರ್ಮಾಪಕ ಟಿ.ಆರ್.ಚಂದ್ರಶೇಖರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.