ADVERTISEMENT

ತೆರೆಕಾಣುವ ಮೊದಲೇ ಗೆದ್ದ ‘ಗಲ್ಲಿ ಬಾಯ್’

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 16:04 IST
Last Updated 4 ಜನವರಿ 2019, 16:04 IST
   

ಅಂದುಕೊಂಡಂತೆ ‘ಗಲ್ಲಿ ಬಾಯ್‌’ ಪೋಸ್ಟರ್‌ ರಣವೀರ್ ಸಿಂಗ್‌ ಮತ್ತು ಅಲಿಯಾ ಭಟ್‌ ಅಭಿಮಾನಿಗಳಿಗೆ ಹೊಸ ವರ್ಷದ ಕೊಡುಗೆಯಾಗಿ ಮೂಡಿಬಂದಿದೆ. ಜಗತ್ತಿನಲ್ಲಿ ರ‍್ಯಾಪ್‌ ಸಂಗೀತದಿಂದಲೇ ಖ್ಯಾತನಾಗುವ ಹುಚ್ಚು ಉಮೇದಿನ ಗಲ್ಲಿ ಯುವಕನಾಗಿ ಕಾಣಿಸಿಕೊಂಡಿರುವುದು ರಣವೀರ್‌ ಸಿಂಗ್‌ ಗೆಟಪ್‌ನಿಂದ ಗೊತ್ತಾಗುತ್ತದೆ.

ಪೋಸ್ಟರ್‌ನಲ್ಲಿ, ತಲೆಗೆ ಶಾಲು ಹೊದ್ದು ಸೂರ್ಯನ ಪ್ರಕಾಶಮಾನ ಬೆಳಕಿಗೆ ಮುಖವೊಡ್ಡಿ ನಿಂತ ರಣವೀರ್ ಸಿಂಗ್, ತನ್ನೆದುರಿನ ಬೃಹದಾಕಾರದ ಕಟ್ಟಡವನ್ನು ದಿಟ್ಟಿಸುತ್ತಿರುವ ಸನ್ನಿವೇಶವಿದೆ.

ಮುಂಬೈನ ಬೀದಿಗಳಲ್ಲಿ ಹಿಪ್‌ಹಾಪ್‌ ನೃತ್ಯ ಮತ್ತು ‘ಮೇರೆ ಗಲ್ಲಿ ಮೇ’ ಹಾಡಿನಿಂದ ವಿಖ್ಯಾತಿ ಪಡೆದ ರ‍್ಯಾಪರ್‌ಗಳಾದ ವಿವಿ‌ಯನ್ ಫರ್ನಾಂಡಿಸ್ ಅಲಿಯಾಸ್ ಡಿವೈನ್‌ ಮತ್ತು ನಾವೇದ್‌ ಶೇಖ್‌ ಅಲಿಯಾಸ್ ನಾಜಿ ಅವರ ಜೀವನಾಧರಿತ ಕತೆಯೇ ‘ಗಲ್ಲಿ ಬಾಯ್‌’ ಆಗಿ ಮೂಡಿಬಂದಿದೆ. ರಣವೀರ್‌ ಕಾಣಿಸಿಕೊಂಡಿರುವುದುಡಿವೈನ್‌ ಪಾತ್ರದಲ್ಲಿ ಎನ್ನಲಾಗಿದೆ. ಜೋಯಾ ಅಖ್ತರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲಿಯಾ ಭಟ್‌ ಪಾತ್ರದ ಬಗ್ಗೆ ಯಾವ ಸುಳಿವೂ ಪೋಸ್ಟರ್‌ನಲ್ಲಿ ಸಿಗುವುದಿಲ್ಲ. ಆದರೆ ಆಕೆಯೂ ಗಲ್ಲಿ ಹುಡುಗಿ ಎಂಬುದು ಆಕೆಯ ವೇಷಭೂಷಣದಿಂದ ಕಲ್ಪಿಸಿಕೊಳ್ಳಬಹುದು.

ADVERTISEMENT

ಪೋಸ್ಟರ್‌ನಲ್ಲಿ ಕಾಣುವ ‘ನಮಗೂ ಕಾಲ ಬರುತ್ತದೆ’ ಎಂಬ ಅಡಿಬರಹ, ಡಿವೈನ್‌ ಕನಸುಗಳಿಗೆ ಕನ್ನಡಿ ಹಿಡಿಯುತ್ತದೆ. ‘ಗಲ್ಲಿ ಬಾಯ್‌’ನ ಈ ಫಸ್ಟ್‌ಲುಕ್ ಅನ್ನು ರಣವೀರ್‌ ಸಿಂಗ್, ಅಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಮರುಕ್ಷಣವೇ ರಣವೀರ್‌ ಸಿಂಗ್‌, ಅಲಿಯಾಭಟ್ ಅವರ ಇನ್‌ಸ್ಟಾಗ್ರಾಮ್‌ಪೋಸ್ಟರ್‌ ಅನ್ನು ಒಟ್ಟು18ಲಕ್ಷಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. 10ಸಾವಿರ ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ಇದು, ಚಿತ್ರದ ಬಗೆಗಿನ ಕಾತರದ ಪ್ರತೀಕವೂ ಹೌದು.

ಇದೇ ಮೊದಲ ಬಾರಿಗೆ ರಣವೀರ್‌– ಅಲಿಯಾ ತೆರೆಹಂಚಿಕೊಂಡಿದ್ದಾರೆ. ಇವರಿಬ್ಬರ ಮುತ್ತಿನ ದೃಶ್ಯಗಳೂ ಚಿತ್ರದಲ್ಲಿವೆ ಎನ್ನಲಾಗಿದೆ. ಚಿತ್ರದ ವಸ್ತುವನ್ನು ಗಮನದಲ್ಲಿಟ್ಟುಕೊಂಡರೆ ಇದೊಂದು ಸಂಗೀತ ಪ್ರಧಾನ ಚಿತ್ರ ಎಂದು ಊಹಿಸಬಹುದು.

ಅಂದ ಹಾಗೆ, ಫೆಬ್ರುವರಿ 14ರಂದು ಈ ಸಿನಿಮಾ ತೆರೆಕಾಣಲಿದೆ. ಆದರೆ ಇದಕ್ಕೂ ಮೊದಲು ಅಂದರೆ ಫೆಬ್ರುವರಿ 7ರ ನಂತರ, ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಗಲ್ಲಿ ಬಾಯ್‌’ ಪ್ರದರ್ಶನ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.