ADVERTISEMENT

ಇದು ಅಚ್ಯುತ್‌ ಕುಮಾರ್‌ ‘ಗುರಿ’!

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:48 IST
Last Updated 5 ಜೂನ್ 2025, 23:48 IST
ಚಿತ್ರತಂಡ
ಚಿತ್ರತಂಡ   

ನಟ ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಗುರಿ’ ಚಿತ್ರದ ಟೀಸರ್ ಮತ್ತು ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. 80ರ ದಶಕದಲ್ಲಿ ರಾಜ್‌ಕುಮಾರ್ ಅಭಿನಯಸಿದ್ದ ‘ಗುರಿ’ ಚಿತ್ರವು ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ಧಗೊಂಡಿದ್ದು, ಸೆಲ್ವಂ ಮಾದಪ್ಪನ್ ಕಥೆ ಬರೆದು, ನಿರ್ದೇಶಿಸಿದ್ದಾರೆ. 

‘ಸಿನಿಮಾವು ನೈಜ ಘಟನೆಯನ್ನು ಆಧರಿಸಿದೆ. ಒಮ್ಮೆ ಕೋಲಾರದ ತೇರಳ್ಳಿ ಬೆಟ್ಟಕ್ಕೆ ಹೋಗಿದ್ದಾಗ, ಅಲ್ಲಿ ಸರ್ಕಾರಿ ಶಾಲೆಯನ್ನು ಮುಚ್ಚಲಾಗಿತ್ತು. ಮಕ್ಕಳು ಶಿಕ್ಷಕರೊಂದಿಗೆ ಕೆರೆಯಲ್ಲಿ ಆಟವಾಡುತ್ತಿದ್ದರು. ಸ್ಥಳೀಯರೊಂದಿಗೆ ಮಾತನಾಡಿದಾಗ ಒಂದಷ್ಟು ವಿಚಾರ ತಿಳಿಯಿತು. ಅದನ್ನೇ ಚಿತ್ರಕಥೆಯಾಗಿಸಿದ್ದೇನೆ. ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂಧವ್ಯ, ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸಂಘರ್ಷ, ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಗತಿ ಮೊದಲಾದ ಅಂಶಗಳು ಚಿತ್ರದಲ್ಲಿವೆ’ ಎಂದರು ನಿರ್ದೇಶಕರು. 

ಚಿತ್ರಕ್ಕೆ ‘ನನ್ನ ಶಾಲೆಯನ್ನು ಪ್ರೀತಿಸುತ್ತೇನೆ’ ಎಂಬ ಅಡಿಬರಹವಿದೆ. ವಿಷ್ಣುದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ರಾಧಿಕಾ.ಎಸ್.ಆರ್ ಮತ್ತು ಚಿತ್ರಲೇಖಾ.ಎಸ್ ನಿರ್ಮಾಣ ಮಾಡಿದ್ದಾರೆ. ಬಾಲನಟರಾದ ಮಹಾನಿಧಿ, ಟಿ.ಎಸ್.ನಾಗಾಭರಣ, ಅವಿನಾಶ್, ಪವನ್‌ಕುಮಾರ್, ಜೀವಿತ್‌ಭೂಷಣ್, ಜಯಶ್ರೀ, ಉಗ್ರಂ ಮಂಜು, ಸಂದೀಪ್‌ ಮಲಾನಿ, ಮನೋಹರ್‌ ಮುಂತಾದವರು ಚಿತ್ರದಲ್ಲಿದ್ದಾರೆ.

ADVERTISEMENT

ಪಳನಿ ಸೇನಾಪತಿ ಸಂಗೀತವಿದೆ. ನಿರ್ದೇಶಕರೇ ಛಾಯಾಚಿತ್ರಗ್ರಹಣವನ್ನೂ ಮಾಡಿದ್ದಾರೆ. ಕೆ.ಎಂ.ಪ್ರಕಾಶ್‌ ಸಂಕಲನ, ವಿ.ಮನೋಹರ್‌, ಮಧುಸೂದನ್‌ ಸಾಹಿತ್ಯ ಚಿತ್ರಕ್ಕಿದೆ. ಬೆಂಗಳೂರು, ಕೋಲಾರ, ತೇರಳ್ಳಿ ಬೆಟ್ಟ ಮೊದಲಾದೆಡೆ ಚಿತ್ರೀಕರಣಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.