ADVERTISEMENT

ನಾಡು, ನುಡಿ ಪ್ರಗತಿಗೆ ಗೋವಿಂದು ಕೆಲಸ ಅನನ್ಯ: ಹಂಪನಾ

ಜ.24ಕ್ಕೆ ಸಾ.ರಾ.ಗೋವಿಂದು ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 12:35 IST
Last Updated 20 ಜನವರಿ 2025, 12:35 IST
ಹಂಪ ನಾಗರಾಜಯ್ಯ 
ಹಂಪ ನಾಗರಾಜಯ್ಯ    

ಬೆಂಗಳೂರು: ‘ಸಾ.ರಾ.ಗೋವಿಂದು ಬಹುರೂಪಿ. ಚಲನಚಿತ್ರ ಮಾಧ್ಯಮವನ್ನು ಬಳಸಿಕೊಂಡು ಅವರು ನಾಡು, ನುಡಿಯ ಸರ್ವಾಂಗೀಣ ಪ್ರಗತಿಗೆ ಮಾಡಿದ ಕೆಲಸ ಅನನ್ಯ. ಅದನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜ.24ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ’ ಎಂದು ಸಾ.ರಾ.ಗೋವಿಂದು ಅಭಿನಂದನಾ ಸಮಿತಿ ಗೌರವ ಸಲಹೆಗಾರರಾದ ಹಂಪ ನಾಗರಾಜಯ್ಯ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಕನ್ನಡವನ್ನು ಶಿಕ್ಷಣದಲ್ಲಿ ಬಹಳ ಪ್ರಬಲವಾಗಿ ಸ್ಥಾಪಿಸಬೇಕು ಎಂಬ ಉದ್ದೇಶವಿಟ್ಟುಕೊಂಡು ನಾಲ್ಕು ದಶಕಗಳ ಹಿಂದೆ ಗೋಕಾಕ ಚಳವಳಿ ಸಣ್ಣ ಪ್ರಮಾಣದಲ್ಲಿ ಆರಂಭವಾಯಿತು. ಈ ಚಳವಳಿಗೆ ಬಹಳ ವ್ಯಾಪಕವಾದ ಸ್ವರೂಪವನ್ನು ಕೊಡುವ ದಿಕ್ಕಿನಲ್ಲಿ ಸಾ.ರಾ. ಗೋವಿಂದು ಮಾಡಿದ ಕೆಲಸ ಪ್ರಮುಖವಾದದು. ಜನರಿಗೆ ಈ ಚಳವಳಿಯ ಮಹತ್ವವನ್ನು ಮನವರಿಕೆ ಮಾಡುವ ಅಗತ್ಯ ಅಂದಿತ್ತು. ಆ ಕೆಲಸವನ್ನು ರಾಜ್‌ಕುಮಾರ್‌ ಅವರನ್ನು ಕರೆದುಕೊಂಡು ಬರುವ ಮೂಲಕ ಗೋವಿಂದು ಸಾಧಿಸಿದರು’ ಎಂದರು.

‘ರಾಜ್‌ಕುಮಾರ್‌ ಚಲನಚಿತ್ರ ಕ್ಷೇತ್ರದಲ್ಲೇ ಇದ್ದು ರಾಜಕೀಯ ರಂಪಗಳಿಗೆ ಹೋಗದೆ ವಿಶಿಷ್ಟವಾಗಿದ್ದವರು. ಅಂದು ಹೊರಟಿದ್ದ ಕನ್ನಡದ ದೊಡ್ಡ ಪ್ರವಾಹಕ್ಕೆ ಒಂದು ಶಕ್ತಿಯಾಗಿ ರಾಜ್‌ಕುಮಾರ್‌ ಪ್ರವೇಶ ಅಗತ್ಯ ಎಂದು ಮೊದಲು ಮನಗಂಡವರು ಗೋವಿಂದು. ಅವರು ರಾಜ್‌ಕುಮಾರ್‌ಗೆ ಬಲಗೈಯಾಗಿದ್ದವರು. ಅವರನ್ನು ಒಪ್ಪಿಸಿ ಈ ಚಳವಳಿಗೆ ಕರೆತಂದರು. ರಾಜ್‌ಕುಮಾರ್‌ ಬಂದ ಮೊದಲ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿದರು. ರಾಜ್‌ಕುಮಾರ್‌ ಜೊತೆಯಲ್ಲಿ ರಾಜ್ಯದಾದ್ಯಂತ ಗೋವಿಂದು ಸಂಚರಿಸಿದರು. ಅದರ ಪ್ರತಿಫಲ ನಾಡಿನ ಚರಿತ್ರೆಯಾಗಿದೆ. ಕನ್ನಡಕ್ಕೆ ಒಂದು ಸಿಂಹಬಲ ತಂದುಕೊಡುವ ನಿಟ್ಟಿನಲ್ಲಿ ಗೋವಿಂದು  ಮಾಡಿದ ಕಾರ್ಯಗಳನ್ನು ಮೆಲುಕು ಹಾಕುವ ಕಾರ್ಯಕ್ರಮ ಇದಾಗಿದೆ’ ಎಂದು ಹೇಳಿದರು.

ADVERTISEMENT

ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕೆ.ರಾಮೇಗೌಡ, ಕಾರ್ಯದರ್ಶಿ, ನಿರ್ಮಾಪಕ ಎ.ಗಣೇಶ್‌ ಇದ್ದರು.

ದಿನವಿಡೀ ಕಾರ್ಯಕ್ರಮ

ಜ.24ರಂದು ಬೆಳಗ್ಗೆ 8.30ಕ್ಕೆ ಲಾಲ್‌ಬಾಗ್‌ ಪಶ್ಚಿಮ ದ್ವಾರದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಸಾ.ರಾ.ಗೋವಿಂದು ಅವರ ಮೆರವಣಿಗೆ ನಡೆಯಲಿದೆ.

ನಟಿ ಉಮಾಶ್ರೀ ಇದನ್ನು ಉದ್ಘಾಟಿಸಲಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಸಾ.ರಾ.ಗೋವಿಂದು ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 11ಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದ ಬಳಿಕ ‘ಕನ್ನಡ ಅಸ್ಮಿತೆ’ ಕುರಿತು ಲೇಖಕ ಜಾಣಗೆರೆ ವೆಂಕಟರಾಮಯ್ಯ ‘ಡಾ.ರಾಜ್‌ಕುಮಾರ್‌ ಮತ್ತು ಕನ್ನಡ ಚಿತ್ರರಂಗ’ ಕುರಿತು ಲೇಖಕ ಎನ್.ಎಸ್‌. ಶ್ರೀಧರಮೂರ್ತಿ ವಿಷಯ ಮಂಡಿಸಲಿದ್ದಾರೆ. ಸಂಜೆ 5ಕ್ಕೆ ಸಾ.ರಾ.ಗೋವಿಂದು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಲಿದ್ದಾರೆ. ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅವರು ಗೋವಿಂದು ಅವರು ಅಭಿನಂದನ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ. ಸಂಜೆ 7ರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.