ಬಹುತೇಕ ಹೊಸಬರಿಂದಲೇ ಕೂಡಿರುವ ‘ಸೋಲ್ ಮೇಟ್ಸ್’ ಚಿತ್ರದ ಮೊದಲ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪಿ.ವಿ.ಶಂಕರ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ.ನರಸಿಂಹಲು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಡು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
‘ಕಿಲ ಕಿಲ’ ಎಂಬ ಗೀತೆಗೆ ಹಂಸಲೇಖ ಸಾಹಿತ್ಯದೊಂದಿಗೆ, ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ಧ್ ಶಾಸ್ತ್ರಿ, ಅಂಕಿತಾ ಕುಂಡು ಧ್ವನಿಯಾಗಿದ್ದಾರೆ. ಚಿತ್ರಕ್ಕೆ ‘ಪರಿಸರ ಪ್ರೇಮಿ’ ಎಂಬ ಅಡಿಬರಹವಿದೆ.
‘ಸಿನಿಮಾ ಮಾಡಲು ಹೋಗಿ ಯಾರೂ ಹಣ ಕಳೆದುಕೊಳ್ಳುವ ಹಾಗಾಗಬಾರದು. ಸಿನಿಮಾ ಮಾಡುವ ಪ್ರತಿಯೊಬ್ಬರನ್ನು ನಾನು ಪ್ರೋತ್ಸಾಹಿಸುತ್ತೇನೆ. ನಮ್ಮ ಕನ್ನಡ ಚಿತ್ರರಂಗ ಬೆಳೆಯಬೇಕು. ಕನ್ನಡ ಉಳಿಯಬೇಕು. ಹಾಕಿದ ಬಂಡವಾಳ ಮರು ಗಳಿಕೆಯಾಗುವಂಥ ಉತ್ತಮ ಚಿತ್ರಗಳನ್ನು ಮಾಡಿ’ ಎಂದರು ಎಂ.ನರಸಿಂಹಲು.
‘ರಂಗ್ ಬಿ ರಂಗ್’ ಖ್ಯಾತಿಯ ಶ್ರೀಜಿತ್ ಸೂರ್ಯ, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರದ ಇನಾಯತ್ ಖ್ಯಾತಿಯ ಪ್ರಸನ್ನ ಶೆಟ್ಟಿ ಚಿತ್ರದ ನಾಯಕರು. ಯಶ್ವಿಕಾ ನಿಷ್ಕಲ, ರಜನಿ ನಾಯಕಿಯರು. ಅಲ್ಮಾಸ್, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಅರವಿಂದ್ ರಾವ್, ಅರುಣಾ ಬಾಲರಾಜ್, ಅರಸು ಮಹಾರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಂಕರ್ ಪಿ.ವಿ ಹಾಗೂ ಜಿ.ಆರ್.ಅರ್ಚನಾ ಬಂಡವಾಳ ಹೂಡಿದ್ದಾರೆ.
‘ನನಗೆ ಸಣ್ಣ ವಯಸ್ಸಿನಿಂದಲೇ ಸಿನಿಮಾ ಹುಚ್ಚು. ನಾನು ಮೊದಲಿಗೆ ನೋಡಿದ ಸಿನಿಮಾ ‘ಪುಟ್ನಂಜು’. ಅಲ್ಲಿಂದ ನನ್ನ ಹಂಸಲೇಖಾರವರ ನಂಟು ಬೆಳೆಯಿತು. ಹೀಗಾಗಿ ನನ್ನ ಸಿನಿಮಾಕ್ಕೆ ಅವರದ್ದೇ ಸಂಗೀತವಿದೆ. ಐದು ಹಾಡುಗಳಿವೆ. ಹುಡುಗ,ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತಾಗಿನ ಕಥೆ. ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.