ADVERTISEMENT

ಕಿಡ್ನಾಪ್‌ ಆಗಿದ್ದ ಹರಿಪ್ರಿಯಾ ಪಾರಾಗಿದ್ದು ಹೇಗೆ ಗೊತ್ತೆ?

ಈ ಸುದ್ದಿ ತಿಳಿದರೆ ಖಂಡಿತ ಶಾಕ್‌ ಆಗ್ತೀರಿ...

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 5:56 IST
Last Updated 20 ಏಪ್ರಿಲ್ 2019, 5:56 IST
ಹರಿಪ್ರಿಯಾ
ಹರಿಪ್ರಿಯಾ   

ನಾಯಕಿ ಖಳರ ಕೈಗೆ ಸಿಕ್ಕಿಬೀಳುವುದು, ನಾಯಕ ಮಧ್ಯಪ್ರವೇಶಿಸಿ ಖಳರನ್ನು ಸದೆಬಡಿದು ನಾಯಕಿಯನ್ನು ರಕ್ಷಿಸುವ ದೃಶ್ಯಗಳನ್ನು ಸಾಕಷ್ಟು ಸಿನಿಮಾಗಳಲ್ಲಿ ನೋಡಿರುತ್ತೇವೆ. ಕೆಲವು ಸಲ ಸಿನಿಮಾ ನಟರ ಬದುಕಿನಲ್ಲಿಯೂ ಸಿನಿಮೀಯ ಘಟನೆಗಳು ನಡೆಯುವುದುಂಟು. ಅಂಥದ್ದೇ ಒಂದು ಘಟನೆಗೆ ಕನ್ನಡದ ನಟಿ ಹರಿಪ್ರಿಯಾ ಕೆಲವು ವಾರಗಳ ಹಿಂದೆ ಸಾಕ್ಷಿಯಾಗಿದ್ದರು. ಆದರೆ ಸಿನಿಮಾಗಳಲ್ಲಿಯೂ ಘಟಿಸಲೂ ಅಸಾಧ್ಯವಾದಂಥ ಸಿನಿಮೀಯ ಘಟನೆ.

ಇದುವರೆಗೆ ಆ ಘಟನೆಯ ಬಗ್ಗೆ ಹರಿಪ್ರಿಯಾ ಸಾರ್ವಜನಿಕವಾಗಿ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿಲ್ಲ. ರಾಷ್ಟ್ರೀಯ ಭದ್ರತಾ ಹಿತದೃಷ್ಟಿಯಿಂದ ಈ ಮಾಹಿತಿಯನ್ನು ಬಹಿರಂಗಪಡಿಸದಂತೆ ಹರಿಪ್ರಿಯಾ ಮತ್ತವರ ಕುಟುಂಬಕ್ಕೆ ಬೇಹುಗಾರಿಕೆ ದಳ ಸೂಚನೆ ನೀಡಿತ್ತು. ಆದರೆ ತಮ್ಮ ಆಪ್ತವಲಯದಲ್ಲಿ ಅವರು ಈ ಘಟನೆಯನ್ನು ಹಂಚಿಕೊಂಡಿದ್ದು, ಹರಿಪ್ರಿಯಾ ಅವರ ಧ್ವನಿಯ ದೂರವಾಣಿ ಆಡಿಯೊ ‘ಸುಧಾ’ ತಂಡಕ್ಕೆ ಲಭ್ಯವಾಗಿದೆ.

ಫೆಬ್ರುವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಭಯೋತ್ಪಾದಕ ದಾಳಿಯಾದ ವಿಷಯ ಎಲ್ಲರಿಗೂ ಗೊತ್ತಿದೆ. ಅದಾಗಿ ಸರಿಯಾಗಿ ಹದಿನೈದು ದಿನಗಳ ನಂತರ ಅಂದರೆ ಫೆ. 29ರಂದು ಕನ್ನಡದ ಬಹುಬೇಡಿಕೆಯ ನಟಿ ಹರಿಪ್ರಿಯಾ, ಪಾಕಿಸ್ತಾನಿ ಸೈನಿಕರ ವಶದಲ್ಲಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ನಂಬುವುದು ಕಷ್ಟ. ಆದರೆ ನಂಬಲೇಬೇಕು.

ADVERTISEMENT

ನಡೆದಿದ್ದು ಇಷ್ಟು

ಶ್ರೀನಗರದಿಂದ 88 ಕಿ.ಮೀ. ದೂರದಲ್ಲಿ ಡೋಂಗಿವಾಲ್‌ ಎಂಬ ಸ್ಥಳವಿದೆ. ವರ್ಷವಿಡೀ ಕೊರೆಯುವ ಚಳಿಯಿರುವ ಆ ಜಾಗ ಭಾರತ ಮತ್ತು ಪಾಕಿಸ್ತಾನ್‌ ಗಡಿಯಿಂದ ಅನತಿ ದೂರದಲ್ಲಿದೆ. ಹೊರಜಗತ್ತಿಗೆ ಜಾಸ್ತಿ ಪರಿಚಿತವಲ್ಲದ ಆ ಮನೋಹರ ಸ್ಥಳದಲ್ಲಿ ‘ಎಲ್ಲಿದ್ದೆ ಇಲ್ಲೀತನಕ’ ಸಿನಿಮಾ ಹಾಡಿನ ಚಿತ್ರೀಕರಣ ಮಾಡುವ ಉದ್ದೇಶದಿಂದ ಸೃಜನ್‌ ಲೋಕೇಶ್‌, ಹರಿಪ್ರಿಯ ಮತ್ತು ಸಿನಿಮಾ ತಂಡ ಬೀಡು ಬಿಟ್ಟಿತ್ತು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಭದ್ರತಾ ಪಡೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋಗುತ್ತಿದ್ದರು. 29ರಂದು ಭದ್ರತಾ ಪಡೆ ಸಿಬ್ಬಂದಿ ಬಂದು ಹೋಗಿರುವುದನ್ನು ಖಚಿತಪಡಿಸಿಕೊಂಡಿರುವ ಕೆಲವು ಮುಸುಕುಧಾರಿಗಳು ಮಧ್ಯಾಹ್ನದ ಊಟದ ಬಿಡುವಿನ ಸಂದರ್ಭದಲ್ಲಿ ಚಿತ್ರತಂಡದ ಮೇಲೆ ದಾಳಿ ಮಾಡಿದ್ದಾರೆ.

‘ಅಲ್ಲಿ ಕ್ಯಾರಾವಾನ್‌ ಇರಲಿಲ್ಲ. ಮೈ ಕೊರೆಯುವಷ್ಟು ಚಳಿ. ಊಟ ಮುಗಿಸಿದ ನಾನು ಅದೇ ಹಿಮದ ಮೇಲೆ ಫೋಟೊಗಳಿಗೆ ಪೋಸ್‌ ಕೊಡ್ತಾ ನಿಂತಿದ್ದೆ. ಆಗಲೇ ನನ್ನ ಹಿಂದಿನ ಮರದ ಹಿಂದಿನಿಂದ ‘ಚಲೋ’ ಎಂಬ ಗಟ್ಟಿ ದನಿ ಕೇಳ್ತು. ತಿರುಗಿ ನೋಡ್ತೀನಿ, ಎಂಟ್ಹತ್ತು ಮುಸುಕುಧಾರಿಗಳು ಕೈಯಲ್ಲಿ ಗನ್‌ ಹಿಡಿದುಕೊಂಡು ನನ್ನ ಕಡೆಗೇ ಓಡಿ ಬರ್ತಿದ್ದಾರೆ. ಎದೆ ಧಸಕ್‌ ಅಂತು. ಹೆದರಿಕೆಯಿಂದ ಕೂಗಲೂ ಸಾಧ್ಯವಾಗದೆ ಅಲ್ಲಿ ಹಿಮದ ಮೇಲೆಯೇ ಕುಸಿದುಬಿದ್ದೆ. ಅವರಲ್ಲಿ ಒಬ್ಬ ನನ್ನ ಬಳಿ ಕೂತು ಎರಡೂ ಕೈಗಳನ್ನು ಬೆನ್ನಿಗೆ ಒತ್ತಿ ಹಿಡಿದುಕೊಂಡ. ನಾನು ಕೂಗಲು ಟ್ರೈ ಮಾಡ್ತಿರೋದು ನೋಡಿ ‘ಚುಪ್‌...’ ಎಂದು ಗದರಿದ. ಹತ್ತು ನಿಮಿಷದಲ್ಲಿ ಇಡೀ ಚಿತ್ರತಂಡದ ಎಲ್ಲರೂ ನನ್ನ ಹತ್ತಿರವೇ ಸೇರಿ ಕೂತರು. ನಮ್ಮ ಸುತ್ತಲೂ ಅವರು ಗನ್‌ ಹಿಡಿದು ನಿಂತಿದ್ದರು. ನನ್ನ ಪಕ್ಕ ಕೂತುಕೊಂಡ ಸೃಜನ್‌ ಬಿಕ್ಕಿ ಬಿಕ್ಕಿ ಅಳ್ತಿದ್ರು. ನಂಗೆ ಅಳಲಿಕ್ಕೂ ಧೈರ್ಯ ಇಲ್ದೆ ಸುಮ್ನೆ ಕೂತಿದ್ದೆ. ಇನ್ನು ನನ್ನ ಜೀವನ ಮುಗಿದೇಹೋಯ್ತು ಅಂತ ಅನಿಸ್ತು. ನಾನು ನಟಿಯಾಗಿರದೇ ಇದ್ದರೆ ಇಲ್ಲಿಗೆ ಬರ್ತಿರ್ಲಿಲ್ಲ. ಇವರ ಕೈಗೆ ಸಿಕ್ಕಾಕಿಕೊಳ್ತಿರ್ಲಿಲ್ಲ. ಹೇಗೋ ಬದುಕಿಕೊಂಡು ಇರಬಹುದಿತ್ತು ಅನಿಸಿತು’ ಎಂದು ಹರಿಪ್ರಿಯಾ ಆಪ್ತರ ಬಳಿ ಹೇಳಿಕೊಂಡಿರುವುದು ಆಡಿಯೊದಲ್ಲಿದೆ.

‘ಎಲ್ಲಿದ್ದೆ ಇಲ್ಲೀತನಕ’ ಚಿತ್ರತಂಡದ ಮೇಲೆ ದಾಳಿ ಮಾಡಿದ ತಂಡ ಪಾಕ್‌ ಗಡಿರೇಖೆಯಿಂದ ನುಸುಳಿ ಬಂದವರು ಎನ್ನಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ಇಡೀ ಚಿತ್ರರಂಗ ಅವರ ವಶದಲ್ಲಿತ್ತು.

ಉಗ್ರರ ಕೈಯಲ್ಲಿ ಸಿಕ್ಕು ಪ್ರಾಣದ ಆಸೆಯನ್ನೇ ತೊರೆದಿದ್ದ ಹರಿಪ್ರಿಯಾ ಮತ್ತು ಚಿತ್ರತಂಡ ಅವರ ಕೈಯಲ್ಲಿಂದ ತಪ್ಪಿಸಿಕೊಂಡು ಬಂದಿದ್ದೂ ಪವಾಡಸದೃಶ್ಯ ಘಟನೆಯೇ. ತಂಡದ ಮೇಲೆ ದಾಳಿ ಮಾಡಿದ ಉಗ್ರರಲ್ಲಿ ಹರಿಪ್ರಿಯಾ ಅಭಿಮಾನಿಯೊಬ್ಬ ಇದ್ದ ಎಂಬ ಸಂಗತಿಯನ್ನು ನಮಗಷ್ಟೇ ಅಲ್ಲ, ಸ್ವತಃ ಹರಿಪ್ರಿಯಾ ಅವರಿಗೂ ನಂಬುವುದು ಕಷ್ಟವಾಗಿತ್ತಂತೆ.

ಮಂಡಿಯಲ್ಲಿ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಹರಿಪ್ರಿಯಾಗೆ ತಮ್ಮದೇ ನಟನೆಯ ‘ಸೂಜಿದಾರ’ ಸಿನಿಮಾದ ‘ಮರುಳಾದೆನು ಜೇನ ದನಿಗೆ’ ಎಂಬ ಹಾಡು ಕಿವಿಗೆ ಬಿದ್ದಿದೆ. ಆಗ ಅಚ್ಚರಿಯಿಂದ ಎಲ್ಲರೂ ತಲೆಯೆತ್ತಿ ನೋಡಿದಾಗ ಗನ್‌ ಹಿಡಿದಿದ್ದ ಉಗ್ರನೊಬ್ಬ ತನ್ನ ಪ್ಯಾಂಟಿನ ಬೇಬಿನಿಂದ ಫೋನ್‌ ಎತ್ತಿಕೊಂಡು ಮಾತನಾಡುತ್ತಿರುವುದು ಕಾಣಿಸಿದೆ. ತಕ್ಷಣವೇ ಭರವಸೆಯ ಮಿಂಚೊಂದು ಹರಿದಂತಾಗಿ ಹರಿಪ್ರಿಯಾ ‘ಅದು ನಂದೇ ಸಿನಿಮಾದ ಹಾಡು...’ ಎಂದು ಕಿರುಚಿಕೊಂಡಿದ್ದಾರೆ. ಅವರು ಕನ್ನಡದಲ್ಲಿಯೇ ಕಿರುಚಿಕೊಂಡಿದ್ದರಿಂದ ಅವರಿಗೆ ಅರ್ಥವಾಗದಿದ್ದರೂ ಉಗ್ರ ಹತ್ತಿರ ಬಂದು ವಿಚಾರಿಸಿದ್ದಾನೆ. ತಮಗೆ ಗೊತ್ತಿರುವ ಹರುಕು ಮುರುಕು ಹಿಂದಿಯೆಲ್ಲಿಯೇ ವಿವರಿಸಿದಾಗ ಆ ಉಗ್ರನಿಗೆ ಸಿನಿಮಾ ನೋಡುವ ಹುಚ್ಚು ಇರುವುದು, ಟೆಲಿಗ್ರಾಮ್‌ ಆ್ಯಪ್‌ನಲ್ಲಿ ‘ಸೂಜಿದಾರ’ ಪೈರೇಟೆಡ್‌ ಸಿನಿಮಾವನ್ನು ನೋಡಿ ಹರಿಪ್ರಿಯಾ ಅವರ ಅಭಿಮಾನಿ ಆಗಿರುವುದು ಗೊತ್ತಾಗಿದೆ. ಆದರೂ ಸೂಜಿದಾರ ಸಿನಿಮಾದ ಡಿ–ಗ್ಲಾಮ್‌ ಲುಕ್‌ಗೂ ತನ್ನೆದುರಿನ ಮುಖಕ್ಕೂ ಹೋಲಿಕೆ ಗುರ್ತಿಸಲು ಸಾಧ್ಯವಾಗಿಲ್ಲ. ಹಾಗಾಗಿ ಹರಿಪ್ರಿಯಾ ಅವರ ‘ನೀರ್‌ದೋಸೆ’ ಸಿನಿಮಾದ ಹಾಡನ್ನು ಹಚ್ಚಿ ಅದಕ್ಕೆ ನರ್ತಿಸುವಂತೆ ಹೇಳಿದ್ದಾನೆ. ಹಾಡಿಗೆ ನರ್ತಿಸುವುದರ ಜತೆಗೆ ಸೃಜನ್‌ ಮತ್ತು ಹರಿಪ್ರಿಯಾ ಸೇರಿಕೊಂಡು ನೀರ್‌ದೋಸೆ ಸಿನಿಮಾದ ಒಂದು ಭಾವುಕ ಸನ್ನಿವೇಶವನ್ನು ಅಭಿನಯಿಸಿಯೂ ತೋರಿಸಿದ್ದಾರೆ. ಹರಿಪ್ರಿಯಾ ಅವರ ಮನೋಜ್ಞ ನಟನೆಗೆ ಮನಕರಗಿದ ಉಗ್ರರು ಬಂದೂಕನ್ನು ಹಿಮದಲ್ಲಿ ನೆಟ್ಟು, ಚಿತ್ರತಂಡದ ಮ್ಯಾಕಪ್‌ ಮ್ಯಾನ್‌ನಿಂದ ಕರ್ಚೀಫನ್ನು ಪಡೆದುಕೊಂಡು ಕಣ್ಣೀರು ಒರೆಸಿಕೊಂಡರು ಎನ್ನಲಾಗಿದೆ.

‘ನೀರ್‌ದೋಸೆ ಸಿನಿಮಾದಲ್ಲಿ ಕಾಲ್‌ಗರ್ಲ್‌ ಗಂಗಾಪೂಜೆ ಮಾಡುವ ಸನ್ನಿವೇಶ ಇದ್ಯಲ್ಲ. ಆ ಸನ್ನಿವೇಶವನ್ನು ಅಭಿನಯಿಸಿ ತೋರಿಸಲು ನಾವು ತೀರ್ಮಾನಿಸಿದೆವು. ಜೀವಭಯ ಇಟ್ಟುಕೊಂಡು ನಟಿಸುವುದು ಹೇಗೆ? ಆದರೆ ನನ್ನ ಅಭಿನಯ ನಮ್ಮ ಇಡೀ ತಂಡದ ಪ್ರಾಣ ಉಳಿಸಬಲ್ಲದು ಎಂಬ ಯೋಚನೆಯೇ ನನಗೆ ಸ್ಫೂರ್ತಿಯಾಯಿತು. ಆ ದೃಶ್ಯವನ್ನೊಮ್ಮೆ ಮನಸಿನಲ್ಲಿ ರೀವೈಂಡ್‌ ಮಾಡಿಕೊಂಡೆ. ಅಭಿನಯಕ್ಕೆ ಇಳಿದ ಮೇಲೆ ನಾನು ಹಿಮಾಲಯದಲ್ಲಿದ್ದೇನೆ, ಸುತ್ತಲೂ ಟೆರರಿಸ್ಟ್‌ಗಳಿದ್ದಾರೆ, ಅವರು ಒಂದ್ಸಲ ಢಂ ಅನ್ಸಿದ್ರೆ ಹೇಳೋರು ಕೇಳೋರು ಇಲ್ಲದಂಗೆ ಸತ್ತೋಗ್ತೇನೆ ಎಂಬುದೆಲ್ಲ ಮನಸಿಂದ ಮರೆಯಾಗಿಬಿಡ್ತು. ನನ್ನ ಎದುರಿಗೆ ನಿರ್ದೇಶಕ ವಿಜಯಪ್ರಸಾದ್‌ ನಿಂತು ಆ್ಯಕ್ಷನ್‌ ಎಂದು ಹೇಳಿದಂತೆ ಕಲ್ಪಿಸಿಕೊಂಡೆ. ಆ ಕ್ಷಣ ಸುತ್ತಲಿನ ಜಗತ್ತೆಲ್ಲ ಮರೆಯಿತು. ನೀರ್‌ ದೋಸೆ ಕಾಲ್‌ ಗರ್ಲ್‌ ನನ್ನ ಮೈಯಲ್ಲಿ ಆವಾಹಿಸಿಕೊಂಡೆ. ಆ ಸನ್ನಿವೇಶ ನಟಿಸಿ ಮುಗಿಸಿದ ಮೇಲೆಯೇ ನಾನು ಮರಳಿ ವಾಸ್ತವಕ್ಕೆ ಬಂದಿದ್ದು. ನಟನೆಯ ಗುಂಗಿನಿಂದ ವಾಸ್ತವ ಜಗತ್ತಿಗೆ ಇಳಿದು ನೋಡಿದಾಗ ಸುತ್ತಲು ನಿಂತಿದ್ದ ಉಗ್ರರೆಲ್ಲ ಬಂದೂಕುಗಳನ್ನು ಹಿಮದ ಮೇಲೆ ಇಟ್ಟು ದಂಗಾಗಿ ನಿಂತಿದ್ದರು. ಎಲ್ಲರ ಕಣ್ಣುಗಳಲ್ಲಿಯೂ ನೀರು. ನನಗೆ ಒಂದು ಕ್ಷಣ ಏನಾಗುತ್ತಿದೆ ಅಂತ್ಲೇ ಗೊತ್ತಾಗ್ಲಿಲ್ಲ. ನೋಡ ನೋಡ್ತಿದ್ದ ಹಾಗೆಯೇ ಒಬ್ಬ ಮುಂದೆ ಬಂದು ನನ್ನ ಕೈಗಳನ್ನು ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದ’ ಎಂದು ಅಲ್ಲಿನ ಸನ್ನಿವೇಶವನ್ನು ಹರಿಪ್ರಿಯಾ ವಿವರವಾಗಿ ಹಂಚಿಕೊಂಡಿದ್ದಾರೆ.

ಹರಿಪ್ರಿಯಾ ಅಭಿನಯಕ್ಕೆ ಕರಗಿ ಹೋದ ಉಗ್ರರು ಮರುಕ್ಷಣವೇ ಸುರಕ್ಷಿತವಾಗಿ ಅವರನ್ನು ಶ್ರೀನಗರಕ್ಕೆ ತಲುಪಿಸುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಅವರು ಅಭಿನಯಿಸಿದ ಎಲ್ಲ ಸಿನಿಮಾಗಳ ಡಿವಿಡಿಯನ್ನು ಕಳಿಸಿಕೊಡುವಂತೆಯೂ ಕೇಳಿದ್ದಾರೆ. ಹಾಗೆಯೇ ‘ಸೂಜಿದಾರ’ ಸಿನಿಮಾಕ್ಕೆ ಕಥೆಗಾರ ವಿಕ್ರಮ್‌ ಹತ್ವಾರ್‌ ಬರೆದಿರುವ ಹಾಡಿನ ಸಾಹಿತ್ಯವನ್ನು ಹಿಂದಿಯಲ್ಲಿ ಕೇಳಿ ಅರ್ಥೈಸಿಕೊಂಡು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಹರಿಪ್ರಿಯಾ ಅವರನ್ನು ಪಾಕಿಸ್ತಾನದ ಸಿನಿಮಾಗಳಲ್ಲಿ ಬಂದು ನಟಿಸುವಂತೆಯೂ ಕೇಳಿಕೊಂಡಿದ್ದಾರಂತೆ.

ಅಲ್ಲಿಂದ ಶ್ರೀನಗರದವರೆಗೆ ಚಿತ್ರತಂಡವನ್ನು ತಂದು ಬೀಳ್ಕೊಂಡ ಉಗ್ರರ ತಂಡ ಹಿಂತಿರುಗಿ ಕಾಡಿನಲ್ಲಿ ಮರೆಯಾಗಿದೆ. ಇತ್ತ ಚಿತ್ರತಂಡ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.

ಆಘಾತವಾಯ್ತು

ಹರಿಪ್ರಿಯಾ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಸುದ್ದಿ ಕೇಳಿ ನಿಜಕ್ಕೂ ಆಘಾತವಾಯ್ತು. ಉಗ್ರಗಾಮಿಯೊಬ್ಬ ನಾನು ಬರೆದ ಹಾಡನ್ನು ಮೊಬೈಲ್‌ ಕಾಲರ್‌ ಟ್ಯೂನ್‌ ಇಟ್ಟುಕೊಂಡಿದ್ದು ಕೇಳಿ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಒಂದೆಡೆ ಸಂತೋಷವಾಗುತ್ತಿದೆ. ಇನ್ನೊಂದೆಡೆಗೆ ಭಯವೂ ಆಗ್ತಿದೆ ಎಂದು ಗೀತ ಸಾಹಿತಿವಿಕ್ರಮ್‌ ಹತ್ವಾರ್‌ ಹೇಳಿದರು.

ಎಂಥದ್ದೂ ಆಗಿಲ್ಲ

ನಾನು ಚಿತ್ರೀಕರಣಕ್ಕೆ ಹೋದಾಗ ಉಗ್ರರು ದಾಳಿ ಮಾಡಿದ್ದರು ಎನ್ನುವುದು ಸತ್ಯವಲ್ಲ. ನಾನು ಚಿತ್ರೀಕರಣಕ್ಕೆ ಕಾಶ್ಮೀರಕ್ಕೆ ಹೋಗಿದ್ದು ನಿಜ. ಆದರೆ ಅಲ್ಲಿ ಏನಾಗಿದೆ ಎನ್ನುವ ಕುರಿತು ಏನೂ ಹೇಳುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಅದು ಭದ್ರತೆಗೆ ಸಂಬಂಧಿಸಿದ ಸಂಗತಿ. ಈಗ ನಾನು ಸುರಕ್ಷಿತವಾಗಿದ್ದೇನೆ. ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ ಎಂದುಹರಿಪ್ರಿಯಾ ಸ್ಪಷ್ಟಪಡಿಸಿದರು.

ಸೂಚನೆ: ಈ ಬರಹ ಏಪ್ರಿಲ್‌ 1ರ ‘ನಗೆ ದಿನ’ದ ಹಿನ್ನೆಲೆಯಲ್ಲಿ ರೂಪುಗೊಂಡ ಕಾಲ್ಪನಿಕ ಬರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.