ADVERTISEMENT

‘ಹರೀಶ ವಯಸ್ಸು 36’ ಸಿನಿಮಾ 11ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 8:17 IST
Last Updated 5 ಮಾರ್ಚ್ 2022, 8:17 IST
‘ಹರೀಶ ವಯಸ್ಸು 36’ ಸಿನಿಮಾದ ಪೋಸ್ಟರ್‌
‘ಹರೀಶ ವಯಸ್ಸು 36’ ಸಿನಿಮಾದ ಪೋಸ್ಟರ್‌   

ದಾವಣಗೆರೆ: ಮಂಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ‘ಹರೀಶ ವಯಸ್ಸು 36’ ಸಿನಿಮಾ ಮಾರ್ಚ್‌ 11ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕರಲ್ಲಿ ಒಬ್ಬರಾದ ಲಕ್ಷ್ಮೀಕಾಂತ್‌ ಎಚ್‌.ವಿ. ರಾವ್‌, ‘36 ವರ್ಷವಾಗಿರುವ ಹುಡುಗ ಮದುವೆಯಾಗಲು ಏನೆಲ್ಲ ಮಾಡುತ್ತಾನೆ ಎಂಬುದರ ಸುತ್ತ ಮಂಗಳೂರಿನ ಭಾಷೆಯಲ್ಲಿ ತಿಳಿ ಹಾಸ್ಯ ಒಳಗೊಂಡಿರುವ ಈ ಚಿತ್ರವನ್ನು ಕುಟುಂಬದ ಎಲ್ಲರೂ ನೋಡುವಂತೆ ರೂಪಿಸಿದ್ದೇವೆ’ ಎಂದು ಹೇಳಿದರು.

‘ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ‘ಹರೀಶಣ್ಣಂಗೆ ವಯಸ್ಸು 36’ ಹಾಡನ್ನು ನಟ ಪುನೀತ್‌ ರಾಜಕುಮಾರ್‌ ಹಾಡಿದ್ದಾರೆ. ತಮ್ಮದೇ ಸ್ಟುಡಿಯೋದಲ್ಲಿ ಅವರು ಹಾಡಿದ್ದಾರೆ. ನಮ್ಮ ಮನವಿಗೆ ಒಪ್ಪಿ ಪುನೀತ್‌ ಅವರು ಪ್ರೋತ್ಸಾಹಿಸಿದ್ದರಿಂದ ನಾವೂ ಹುಮ್ಮಸ್ಸಿನಿಂದ ಸಿನಿಮಾ ನಿರ್ಮಿಸಿದ್ದೇವೆ. ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಪುನೀತ್‌ ನಮ್ಮೊಂದಿಗೆ ಇಲ್ಲ ಎಂಬ ಬೇಸರ ಕಾಡುತ್ತಿದೆ’ ಎಂದು ಹೇಳಿದರು.

ADVERTISEMENT

ಹಿರಿಯ ನಟ ಎಂ.ಎಸ್‌. ಉಮೇಶ್‌, ‘ನಿರ್ದೇಶಕ ಗುರುರಾಜ್‌ ಜ್ಯೇಷ್ಠ ಅವರು ಮಂಗಳೂರಿನ ರಂಗಭೂಮಿ ಕಲಾವಿದರನ್ನು ಹಾಕಿಕೊಂಡು ಒಳ್ಳೆಯ ಚಿತ್ರವನ್ನು ಮಾಡಿದ್ದಾರೆ. ನಾನು ಮಾಡಿದ ಪಾತ್ರದಲ್ಲಿ ಹಾಸ್ಯದ ಪ್ರಸಂಗಗಳಿಲ್ಲ. ಕಥಾನಾಯಕನ ತಂದೆಯಾಗಿ ಗಂಭೀರ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಎಲ್ಲರೂ ಇಷ್ಟಪಟ್ಟು, ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ’ ಎಂದು ಹೇಳಿದರು.

‘ಕೋವಿಡ್‌ನಿಂದಾಗಿ ಕಲಾವಿದರು, ತಾಂತ್ರಿಕ ವರ್ಗದವರು, ನಿರ್ಮಾಪಕರು ಹೈರಾಣಾಗಿದ್ದರು. ಹೊಸ ಕಲಾವಿದರು, ನಿರ್ಮಾಪಕರು ಸೇರಿಕೊಂಡು ಚಿತ್ರ ಮಾಡಿದ್ದು, ಪ್ರೇಕ್ಷಕರು ಪ್ರೋತ್ಸಾಹಿಸಬೇಕು. ಆಗ ಇವರು ಮತ್ತಷ್ಟು ಸಿನಿಮಾ ಮಾಡುತ್ತಾರೆ. ಅದರಿಂದ ಹೊಸಬರಿಗೂ ಕೆಲಸ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಿನಿಮಾದ ನಾಯಕ ನಟ ಯೋಗೀಶ್‌ ಶೆಟ್ಟಿ, ‘ನನ್ನ ಪಾತ್ರದ ಕ್ಯಾರೆಕ್ಟರ್‌ ಅನ್ನು ಬಹಳ ಇಷ್ಟಪಟ್ಟು ಅಭಿನಯಿಸಿದ್ದೇನೆ. ಸಿನಿಮಾ ನೋಡಿದವರಿಗೆ ಹರೀಶನ ಕ್ಯಾರೆಕ್ಟರ್‌, ಇಮೋಷನ್‌ಗಳು ಖಂಡಿತವಾಗಿಯೂ ಕಾಡುತ್ತದೆ’ ಎಂದರು.

ಶಿರಡಿ ಸಾಯಿ ಬಾಲಾಜಿ ಫಿಲ್ಮಂ ಬ್ಯಾನರ್‌ನಡಿ ಸಿನಿಮಾ ನಿರ್ಮಿಸಲಾಗಿದೆ. ರಚನೆ, ಪರಿಕಲ್ಪನೆ ಹಾಗೂ ನಿರ್ದೇಶನದ ಜೊತೆಗೆ ಗುರುರಾಜ್‌ ಜ್ಯೇಷ್ಠ ಅವರು ಸಂಗೀತವನ್ನೂ ನಿರ್ದೇಶಿಸಿಸಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.