ಬಹುತೇಕ ನೀನಾಸಂನ ರಂಗಕರ್ಮಿಗಳೇ ಸೇರಿ ನಿರ್ಮಿಸಿರುವ ‘ಹಿಕೋರ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಂಗಕರ್ಮಿ, ನಟ ಹಾಗೂ ನಿರ್ದೇಶಕ ಪ್ರಕಾಶ್ ಬೆಳವಾಡಿ ಟ್ರೇಲರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭಹಾರೈಸಿದರು. ನೀನಾಸಂ ಕಿಟ್ಟಿ ನಿರ್ದೇಶನದ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ರತ್ನ ಶ್ರೀಧರ್ ಬಂಡವಾಳ ಹೂಡಿದ್ದಾರೆ.
‘ನಾನು ಕೂಡ ನೀನಾಸಂನಲ್ಲಿ ಅನೇಕ ನಾಟಕಗಳನ್ನು ಮಾಡಿದ್ದೇನೆ. ಅಲ್ಲಿಗೆ ನಾನು ಹೋಗುತ್ತಿದ್ದಾಗ ನಿರ್ಮಾಪಕಿ ರತ್ನ ಶ್ರೀಧರ್ ರುಚಿಯಾದ ಊಟ ನೀಡುತ್ತಿದ್ದರು. ಅಲ್ಲಿಂದ ಅವರ ಪರಿಚಯ. ಸಿನಿಮಾ ಮೇಲಿನ ಪ್ರೀತಿಯಿಂದ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ’ ಎಂದರು ಪ್ರಕಾಶ್ ಬೆಳವಾಡಿ.
‘ರಂಗಭೂಮಿ ಕಲಾವಿದರೇ ಸೇರಿ ಮಾಡಿದ ಸದಭಿರುಚಿಯ ಸಿನಿಮಾವಿದು. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸ ಮಾಡದಂಥ ಕಥೆ. ನಿರ್ಮಾಪಕಿ ರತ್ನ ಅವರು ಹಾಗೂ ಅವರ ಪತಿ ಶ್ರೀಧರ್ ನೀನಾಸಂನಲ್ಲೇ ಮೆಸ್ ನಡೆಸುತ್ತಿದ್ದರು. ನಮಗೆಲ್ಲಾ ಅನ್ನ ಹಾಕಿದ ಮಹಾತಾಯಿ ಅವರು. ರತ್ನಕ್ಕ ಈಗ ನಿರ್ಮಾಪಕಿಯಾಗಿದ್ದಾರೆ. ಚಿತ್ರವನ್ನು ಚಿತ್ರಮಂದಿರದಲ್ಲಿಯೇ ವೀಕ್ಷಿಸಿ ನಮಗೆ ಹರಸಿ’ ಎಂದರು ನಿರ್ದೇಶಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.