ADVERTISEMENT

ಬಚ್ಚನ್‌ ಕುಟುಂಬಕ್ಕೆ ಸೋಂಕು ತಗುಲಿದ್ದು ಎಲ್ಲಿಂದ: ಅಭಿಮಾನಿ ವಲಯದಲ್ಲಿ ಚರ್ಚೆ

ಅಭಿಮಾನಿ ವಲಯ, ಬಾಲಿವುಡ್‌ ಅಂಗಳದಲ್ಲಿ ಚರ್ಚೆ

ಪ್ರಜಾವಾಣಿ ವಿಶೇಷ
Published 14 ಜುಲೈ 2020, 9:16 IST
Last Updated 14 ಜುಲೈ 2020, 9:16 IST
ಅಮಿತಾಭ್‌ ಮತ್ತು ಅಭಿಷೇಕ್‌ ಬಚ್ಚನ್‌
ಅಮಿತಾಭ್‌ ಮತ್ತು ಅಭಿಷೇಕ್‌ ಬಚ್ಚನ್‌   

ಬಾಲಿವುಡ್‌ ನಟ ಅಮಿತಾಭ್ ಬಚ್ಚನ್‌, ಪುತ್ರ ಅಭಿಷೇಕ್‌, ಸೊಸೆ ಐಶ್ವರ್ಯ ಮತ್ತು ಮೊಮ್ಮಗಳು ಆರಾಧ್ಯಳಿಗೆ ಕೊರೊನಾ ಸೋಂಕು ತಗುಲಿದಸುದ್ದಿ ಬಾಲಿವುಡ್‌ ಮತ್ತು ಅಭಿಮಾನಿಗಳಿಗಷ್ಟೇ ಅಲ್ಲ ಇಡೀ ದೇಶದ ಜನತೆಗೆ ದೊಡ್ಡ ಶಾಕ್‌ ನೀಡಿದೆ.

ಬಚ್ಚನ್‌ಕುಟುಂಬದ ಎಲ್ಲರೂ ದೊಡ್ಡ ಕಲಾವಿದರು. ಒಂದೇ ಕುಟುಂಬದ ನಾಲ್ವರು ಸೆಲೆಬ್ರಿಟಿಗಳಿಗೆ ಸೋಂಕು ತಗುಲಿರುವುದು ಸಹಜವಾಗಿ ಇಂಡಸ್ಟ್ರಿ ಮತ್ತು ಅಭಿಮಾನಿಗಳ ತಳಮಳಕ್ಕೆ ಕಾರಣವಾಗಿದೆ. ಮೇಲಾಗಿ 74 ವರ್ಷದ ಅಮಿತಾಭ್‌ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ವಯಸ್ಸು ಮತ್ತು ಅನಾರೋಗ್ಯ ಆತಂಕ ಮೂಡಿಸಿದೆ.

ಸೋಂಕಿಗೆ ಒಳಗಾಗಿರುವ ಅಮಿತಾಭ್‌ ಬಚ್ಚನ್‌, ಅಭಿಷೇಕ್‌ ಬಚ್ಚನ್ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಐಶ್ವರ್ಯ ರೈ ಬಚ್ಚನ್ ಮತ್ತು ಆರಾಧ್ಯ ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದಾರೆ. ಬಾಂದ್ರಾದಲ್ಲಿರುವ ಬಚ್ಚನ್ ಬಂಗಲೆ ‘ಜಲ್ಸಾ’ ಸೀಲ್‌ಡೌನ್‌ ಆಗಿದೆ. ‌‌

ADVERTISEMENT

ಈ ನಡುವೆ ಬಚ್ಚನ್‌ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಮತ್ತು ಎಲ್ಲಿಂದ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಅಭಿಷೇಕ್‌ ಬಚ್ಚನ್‌ ಅವರನ್ನು ಬಿಟ್ಟರೆ‌ ಲಾಕ್‌ಡೌನ್‌ ಹಾಗೂ ನಂತರದ ಅವಧಿಯಲ್ಲಿ ಬಚ್ಚನ್‌ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಹೋಗಿದ್ದು ತೀರಾ ಕಡಿಮೆ.ಅದನ್ನು ಹೊರತುಪಡಿಸಿದರೆ ಬಚ್ಚನ್‌ ಕುಟುಂಬದ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದದ್ದು ಅವರ ಸಹಾಯಕ ಸಿಬ್ಬಂದಿ.

ಬಚ್ಚನ್‌ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದ ವಿಷಯದ ಚರ್ಚೆಯ ವೇಳೆ ಬಾಲಿವುಡ್‌ ಮಂದಿ ‘ಬ್ರೀದ್‌–2 ಇನ್‌ ಟು ದ ಶಾಡೋಸ್’ ವೆಬ್‌ ಸರಣಿಯತ್ತ ಕೈ ತೋರಿಸುತ್ತಾರೆ. ಅಮೆಜಾನ್‌ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾದ ‘ಬ್ರೀದ್’ ಡಬ್ಬಿಂಗ್‌ ಕೆಲಸಕ್ಕಾಗಿ ಜೂನಿಯರ್‌ ಬಚ್ಚನ್‌ ಪದೇ ಪದೇ ಮನೆಯಿಂದ ಹೊರಗೆ ಹೋಗುತ್ತಿದ್ದರು.

ಮೊದಲ ಹಂತದ ಲಾಕ್‌ಡೌನ್ ತೆರವಾದ ನಂತರಜೂನಿಯರ್‌ ಬಚ್ಚನ್‌ ‘ಬ್ರೀದ್’‌ ವೆಬ್‌ ಸರಣಿಡಬ್ಬಿಂಗ್‌ಗಾಗಿ ಮುಂಬೈನ ಸೌಂಡ್‌ & ವಿಷನ್‌ ಡಬ್ಬಿಂಗ್‌ ಸ್ಟುಡಿಯೊಕ್ಕೆ ಪದೇ ಪದೇ ಹೋಗುತ್ತಿದ್ದರು. ಹಲವು ದಿನ ಅವರು ಇಲ್ಲಿ ಡಬ್ಬಿಂಗ್‌ ಕೆಲಸದಲ್ಲಿ ತೊಡಗಿದ್ದರು.

ಸದ್ಯ ಸೌಂಡ್‌ & ವಿಷನ್‌ ಡಬ್ಬಿಂಗ್‌ ಸ್ಟುಡಿಯೊವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಬೃಹತ್ ಮುಂಬೈ ಮಹಾನಗರ ಪಾಲಿಕೆ ಆರೋಗ್ಯ ಸಿಬ್ಬಂದಿಯು ಅಭಿಷೇಕ್‌ ಪ್ರಾಥಮಿಕ‌ ಸಂಪರ್ಕದಲ್ಲಿರುವ ಸ್ಟುಡಿಯೊ ಸಿಬ್ಬಂದಿ ಮತ್ತು ಕಲಾವಿದರ ಹುಡುಕಾಟದಲ್ಲಿ ತೊಡಗಿದ್ದಾರೆ.

ಬಾಲಿವುಡ್‌ ಸೆಲೆಬ್ರಿಟಿಗಳು ಮನೆಯಿಂದ ಹೊರಗೆ ಕಾಲಿಡದಿದ್ದರೂ ಅವರ ಆಪ್ತ ಸಹಾಯಕ ಸಿಬ್ಬಂದಿ ಮತ್ತು ಮನೆಗೆಲಸದವರಿಂದ ಕೊರೊನಾ ಅವರ ಮನೆಗೆ ಕಾಲಿಡುತ್ತಿದೆ.ಮೇಲಾಗಿ ಬಚ್ಚನ್‌ ಬಂಗಲೆ ‘ಜಲ್ಸಾ’ ಇರುವ ಬಾಂದ್ರಾ ಸುತ್ತಮುತ್ತ ಕೊರೊನಾ ಸೋಂಕು ವಿಪರೀತವಾಗಿದೆ.ಅಭಿಷೇಕ್‌ ಹೊರತುಪಡಿಸಿದರೆ ‘ಜಲ್ಸಾ’ ಒಳ, ಹೊರಗೆ ಹೆಚ್ಚಾಗಿ ಓಡಾಡಿಕೊಂಡಿದ್ದು ಬಚ್ಚನ್‌ ಕುಟುಂಬದ ಕಾರು ಚಾಲಕರು, ಅಡುಗೆ, ಮನೆಗೆಲಸದವರು ಹಾಗೂ ಸಹಾಯಕ ಸಿಬ್ಬಂದಿ.

ಇದಕ್ಕೂ ಮೊದಲುನಟಿ ಜಾಹ್ನವಿ ಕಪೂರ್‌ ಮತ್ತು ನಿರ್ದೇಶಕ ಕರಣ್‌ ಜೋಹರ್ ಅವರ ಆಪ್ತ ಸಹಾಯಕರಿಗೂ ಸೋಂಕು ತಗುಲಿತ್ತು. ಹಿರಿಯ ನಟಿ ರೇಖಾ ನಿವಾಸದ ಸೆಕ್ಯೂರಿಟಿ ಗಾರ್ಡ್‌ ಮತ್ತು ಸಾರಾ ಅಲಿ ಖಾನ್ ಕಾರು ಚಾಲಕನಿಗೂ ಕೋವಿಡ್‌–19ದೃಢಪಟ್ಟಿದೆ.

ಅಭಿಷೇಕ್‌ ಸಹನಟನ‌ ವರದಿ ನೆಗೆಟಿವ್‌

ಅಭಿಷೇಕ್‌ಗೆ ಸೋಂಕು ತಗುಲಿರುವ ಸುದ್ದಿ ಹೊರಬೀಳುತ್ತಲೇ ‘ಬ್ರೀದ್‌’ ವೆಬ್‌ ಸರಣಿಯಲ್ಲಿ ಜೂನಿಯರ್‌ ಬಚ್ಚನ್‌‌ ಜತೆ ನಟಿಸಿದ್ದ ಅಮಿತ್‌ ಸಾಧ್ ಸ್ವಯಂಪ್ರೇರಣೆಯಿಂದಕೋವಿಡ್‌–19 ಪರೀಕ್ಷೆ ಮಾಡಿಸಿಕೊಂಡಿದ್ದರು. ಅವರ ವರದಿ ನೆಗೆಟಿವ್‌ ಬಂದಿದ್ದು, ಈ ವಿಷಯವನ್ನು ಅಮಿತ್‌ ಸಾಧ್‌ ಟ್ವೀಟ್‌ ಮಾಡಿದ್ದಾರೆ. ಈ ಸರಣಿಯಲ್ಲಿ ದಕ್ಷಿಣದ ಸುಂದರಿ ನಿತ್ಯಾ ಮೆನನ್‌ ಅವರು ಅಭಿಷೇಕ್‌ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ.

ಹಲವು ದಿನಗಳಿಂದ ಅಮಿತ್ ಸಾಧ್‌ ಮತ್ತು ಅಭಿಷೇಕ್ ಬಚ್ಚನ್‌ ಇಬ್ಬರೂ ಒಟ್ಟಿಗೆ ಡಬ್ಬಿಂಗ್‌ ಸ್ಟುಡಿಯೊದಲ್ಲಿ ಕೆಲಸ ಮಾಡಿದ್ದರು ಎಂಬ ಸುದ್ದಿಗಳಿದ್ದವು. ಅದನ್ನು ಅಮಿತ್‌ ತಳ್ಳಿ ಹಾಕಿದ್ದಾರೆ.

‘ನಾವಿಬ್ಬರೂ ಒಟ್ಟಿಗೆ ಡಬ್ಬಿಂಗ್ ಕೆಲಸ ಮಾಡಿಲ್ಲ. ಅಭಿಷೇಕ್‌ ಮುಂಜಾನೆ ಮತ್ತು ಮಧ್ಯಾಹ್ನದ ನಂತರ ನಾನು ಡಬ್ ಮಾಡಿದ್ದೇವೆ. ಒಂದು ಬಾರಿ ಸ್ಟುಡಿಯೊದಿಂದ ಹೊರಬರುವಾಗ ಚಿತ್ರ ತೆಗೆಸಿಕೊಂಡಿದ್ದೆವು’ ಎಂದು ಅಮಿತ್ ಸಾಧ್‌‌ ಸ್ಪಷ್ಟಪಡಿಸಿದ್ದಾರೆ. ಬ್ರೀದ್ ವೆಬ್‌ ಸರಣಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ.

(ಮಾಹಿತಿ: ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.