ADVERTISEMENT

ನಾಗತಿಹಳ್ಳಿ ಮೇಷ್ಟ್ರ ಕುಟುಂಬ ನಿರ್ಮಿತ ಸಿನಿಮಾ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:45 IST
Last Updated 12 ಡಿಸೆಂಬರ್ 2019, 19:45 IST
ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರ್   

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರಕ್ಕೆ ಸಂಬಂಧಿಸಿದ ವಿಡಿಯೊಗಳಲ್ಲಿ ‘ಫ್ಯಾಮಿಲಿ ಫಂಡಡ್‌ ಸಿನಿಮಾ’ (ಕುಟುಂಬದವರು ಸೇರಿ ನಿರ್ಮಿಸಿದ್ದು) ಎಂಬ ಉಲ್ಲೇಖ ಬರುತ್ತದೆ. ಆದರೆ ನಿಜಕ್ಕೂ ಇದು ಒಂದು ಕುಟುಂಬದ ಸದಸ್ಯರು ಸೇರಿ ನಿರ್ಮಿಸಿರುವ ಚಿತ್ರವೇ?!

ನಾಗತಿಹಳ್ಳಿ ಅವರು ವಸಿಷ್ಠ ಸಿಂಹ ಮತ್ತು ಮಾನ್ವಿತಾ ಕಾಮತ್ ಅವರನ್ನು ನಾಯಕ ಹಾಗೂ ನಾಯಕಿಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದು ಹಳೆಯ ಸುದ್ದಿ. ಎರಡು ಕಡೆ ಪ್ರೀಮಿಯರ್‌ ಪ್ರದರ್ಶನ ಕಂಡಿರುವ ಈ ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಚಿತ್ರದ ಬಗ್ಗೆ ಮಾಹಿತಿ ನೀಡಲು ನಾಗತಿಹಳ್ಳಿ ಅವರು ಸುದ್ದಿಗೋಷ್ಠಿ ಕರೆದಿದ್ದರು. ಅದರಲ್ಲಿ ಅವರು ತಮ್ಮ ಚಿತ್ರದ ನಿರ್ಮಾಣದ ಬಗ್ಗೆ ಸುದೀರ್ಘ ವಿವರಣೆ ನೀಡಿದರು.

‘ಈ ಚಿತ್ರಕ್ಕೆ ಇಪ್ಪತ್ತು ಜನ ಹಣ ಹೂಡಿಕೆ ಮಾಡಿದ್ದಾರೆ. ಹೂಡಿಕೆ ಮಾಡಿದ ಎಲ್ಲರೂ ಸಿನಿಮಾ ಎನ್ನುವ ಕುಟುಂಬಕ್ಕೆ ಸೇರಿದವರು ಎಂಬ ಕಾರಣಕ್ಕೆ, ಇದನ್ನು ಫ್ಯಾಮಿಲಿ ಫಂಡಡ್ ಸಿನಿಮಾ ಎಂದು ಕರೆದಿದ್ದೇನೆ. ಹೂಡಿಕೆ ಮಾಡಿರುವವರ ಪೈಕಿ ಹಲವರು ಇಂಗ್ಲೆಂಡಿನಲ್ಲಿ ಇದ್ದಾರೆ’ ಎಂದು ಮೈಕ್‌ ಕೈಗೆತ್ತಿಕೊಳ್ಳುತ್ತಲೇ ಹೇಳಿದರು ನಾಗತಿಹಳ್ಳಿ.

ADVERTISEMENT

ಅಷ್ಟೇ ಅಲ್ಲ, ಸಿನಿಮಾ ನಿರ್ಮಾಣದ ವಿಚಾರದಲ್ಲಿ ತಾವು ಮಾಡಿರುವ ಈ ಪ್ರಯೋಗವು ಇನ್ನಷ್ಟು ವ್ಯಾಪಕವಾಗಲಿ ಎಂಬ ಆಶಯ ಕೂಡ ಅವರಲ್ಲಿ ಇತ್ತು. ‘ಸಿನಿಮಾ ನಿರ್ಮಾಣಕ್ಕೆ ಇಪ್ಪತ್ತು ಜನ ಹಣ ಹೂಡಿದ್ದರೂ, ಅವರ ನಡುವೆ ಅಭಿಪ್ರಾಯ ಭೇದ ಇರಲಿಲ್ಲ. ಈ ರೀತಿ ಹಲವರು ಸೇರಿ ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನಗಳು ಹೆಚ್ಚಾಗಬೇಕು. ಆಗ ಸಿನಿಮಾ ಎನ್ನುವುದು ಸಾಮುದಾಯಿಕ ಚಟುವಟಿಕೆ ಆಗುತ್ತದೆ. ಕಾರ್ಪೊರೇಟ್ ಶೈಲಿಯಲ್ಲಿ, ಪಾರದರ್ಶಕವಾಗಿ ಹೀಗೆ ಸಿನಿಮಾ ನಿರ್ಮಾಣ ಮಾಡುವುದು ಇನ್ನು ಮುಂದೆ ಅನಿವಾರ್ಯ’ ಎಂದರು.

‘ನನ್ನ ಮೊದಲ ಚಿತ್ರ ₹ 12 ಲಕ್ಷ ವೆಚ್ಚದಲ್ಲಿ ಸಿದ್ಧವಾಗಿತ್ತು. ಆದರೆ ಇಂದು ಅಂತಹ ಸ್ಥಿತಿ ಇಲ್ಲ’ ಎಂದು ಹೇಳಿದ ಸಿನಿಮಾ ಮೇಷ್ಟ್ರು, ‘ಇವತ್ತು ಶೂಟಿಂಗ್ ಜಾಗದಲ್ಲಿ ಕೂಡ ಸಾಮರಸ್ಯ ಕಡಿಮೆ ಆಗಿದೆ. ನಿರ್ದೇಶಕ, ನಾಯಕ, ನಾಯಕಿ ಎಲ್ಲರೂ ಒಂದೊಂದು ಕ್ಯಾರಾವಾನ್‌ನಲ್ಲಿ ಕುಳಿತಿರುತ್ತಾರೆ. ಮನುಷ್ಯರು ಪರಸ್ಪರ ವ್ಯವಹರಿಸುವುದನ್ನು ಕಡಿಮೆ ಮಾಡಿದ್ದೇವೆ. ಇದು ಈ ಕಾಲದ ದುರಂತ’ ಎಂದು ಸಣ್ಣದಾಗಿ ನಿಟ್ಟುಸಿರು ಬಿಟ್ಟರು.

‘ಸಿನಿಮಾಗಳನ್ನು ಒಂದು ಕುಟುಂಬದಂತೆ ಮಾಡುವ ಪದ್ಧತಿ ಮತ್ತೆ ಶುರು ಆಗಬೇಕು’ ಎಂದು ಹೇಳಿ, ಮಾತಿನ ಬಂಡಿಯನ್ನು ಬೇರೊಂದು ಹಳಿಗೆ ದಾಟಿಸಿದರು. ‘ಚಿತ್ರದ ಕೆಲಸಗಳು ಪೂರ್ಣವಾಗಿವೆ. ಬಿಡುಗಡೆಗೂ ಸಿದ್ಧವಾಗಿದೆ. ಉಂಡು ಹೋದ ಕೊಂಡು ಹೋದ ಚಿತ್ರದ ಬಿಡುಗಡೆ ಆಗಿದ್ದ ತ್ರಿವೇಣಿ ಚಿತ್ರಮಂದಿರದಲ್ಲೇ ಈ ಸಿನಿಮಾ ಕೂಡ ಬಿಡುಗಡೆ ಆಗಲಿದೆ’ ಎಂದರು.

ನಾಗತಿಹಳ್ಳಿ ಅವರು ಈ ಚಿತ್ರಕ್ಕೆ ‘ಅಕ್ಷಾಂಶ ರೇಖಾಂಶ’ ಎಂಬ ಶೀರ್ಷಿಕೆ ಇಡುವ ಉದ್ದೇಶ ಹೊಂದಿದ್ದರು. ಆದರೆ, ಆ ಶೀರ್ಷಿಕೆಯನ್ನು ಸಿನಿತಂಡದ ಎಲ್ಲರೂ ಅಷ್ಟಾಗಿ ಒಪ್ಪಲಿಲ್ಲವಾದ ಕಾರಣ, ಈಗಿನ ಶೀರ್ಷಿಕೆಯನ್ನು ಅಂತಿಮಗೊಳಿಸಿದರು.

ಈ ಚಿತ್ರದ ವಿತರಣೆಯ ಹೊಣೆಯನ್ನು ಅವರೇ ಹೊತ್ತುಕೊಂಡಿದ್ದಾರೆ. ಚಿತ್ರವು ನೈಜೀರಿಯಾ, ತಾಂಜೇನಿಯಾ, ದಕ್ಷಿಣ ಆಫ್ರಿಕಾ, ಸಿಂಗಪುರ, ಬ್ಯಾಂಕಾಕ್, ಟೋಕಿಯೊ, ಅಮೆರಿಕ ಮತ್ತು ಕೆನಡಾ, ಇಂಗ್ಲೆಂಡ್, ಯುರೋಪ್‌ನಲ್ಲಿ ಬಿಡುಗಡೆ ಆಗಲಿದೆ.

ಭಾರತ ಹಾಗೂ ಬ್ರಿಟಿಷ್ ಸಾಮ್ರಾಜ್ಯದ ನಡುವಿನ ಸಂಘರ್ಷದ ಕುರಿತ ನೋಟ, ವಸಾಹತು ಕಾಲದ ಮೇಲೊಂದು ಚರ್ಚೆ, ಕ್ರೈಂ ಥ್ರಿಲ್ಲರ್ ಕಥೆ ಈ ಚಿತ್ರದ ಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.